Micro Finance | ಸಾಲಗಾರರ ಹಿತರಕ್ಷಣೆಗೆ ಸುಗ್ರೀವಾಜ್ಞೆ, ಸಹಾಯವಾಣಿ: ಸಿಎಂ ಸಿದ್ದರಾಮಯ್ಯ ಘೋಷಣೆ
Microfinance: ಬೆದರಿಸಿ ಬಲವಂತದ ಸಾಲ ವಸೂಲಾತಿ ಒಪ್ಪಲು ಸಾಧ್ಯವಿಲ್ಲ. ಬಡ ಸಾಲಗಾರರ ಹಿತವನ್ನು ಕಾಪಾಡಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಿಎಂ ಹೇಳಿದ್ದಾರೆ.;
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದ ವಿರುದ್ಧ ರಾಜ್ಯದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಸಾಲಗಾರರ ರಕ್ಷಣೆಗೆ ಧಾವಿಸಿದ್ದು, ಹಣಕಾಸು ಕಂಪನಿಗಳಿಗೆ ಕಡಿವಾಣ ಹಾಕಲು ಮತ್ತು ಅಕ್ರಮ ವಹಿವಾಟಿಗೆ ತಡೆ ನೀಡಲು ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿ ಮಾಡಲು ಮುಂದಾಗಿದೆ.
ಶನಿವಾರ ಈ ಕುರಿತು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು, ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಹಾಗೂ ಮೈಕ್ರೋ ಹಣಕಾಸು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಳಿಕ ಮಾಧ್ಯಮಗಳಿಗೆ ಸರ್ಕಾರ ಕೈಗೊಳ್ಳಲಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
ತತಕ್ಷಣಕ್ಕೆ ಸಾಲಗಾರರಿಗೆ ಕಾನೂನಾತ್ಮಕ ರಕ್ಷಣೆಯ ಭಾಗವಾಗಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಸಹಾಯವಾಣಿ ತೆರೆಯಲಾಗುವುದು ಮತ್ತು ಸಾಲ ವಸೂಲಿ ಕಿರುಕುಳದ ಕುರಿತು ಯಾವುದೇ ದೂರು ಬಂದರೆ ಕೂಡಲೇ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗುವುದು. ಅದರೊಂದಿಗೆ ಸಾಲಗಾರರಿಗೆ ಶಾಶ್ವತ ಕಾನೂನು ರಕ್ಷಣೆ ನೀಡುವ ನಿಟ್ಟಿನಲ್ಲಿ ಸುಗ್ರೀವಾಜ್ಞೆಯ ಮೂಲಕ ರಾಜ್ಯದಲ್ಲಿ ಹೊಸ ಕಾನೂನು ಜಾರಿಗೆ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಕ್ರೋ ಫೈನಾನ್ಸ್ ಗಳ ನಿಯಮ ಬಾಹಿರ ಸಾಲ ವಸೂಲಿಗೆ ಅಂಕುಶ ಬಿದ್ದಿದೆ. ಸಾರ್ವಜನಿಕರ ಹಿತಕ್ಕಾಗಿ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿ ಮಾಡಲು ನಿರ್ಧರಿಸಲಾಗಿದೆ. ಬಲವಂತದ ಸಾಲ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ. ಪೊಲೀಸರಿಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು. ಪ್ರತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲು ತೀರ್ಮಾನ ಮಾಡಲಾಗಿದ್ದು, ಸಾಲ ಪಡೆದು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನೊಂದವರ ಪರ ನಮ್ಮ ಸರ್ಕಾರ ನಿಂತಿದೆ ಎಂದು ಸಿಎಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಯಾರಿಗೂ ಸಾಲ ಕೊಡಬೇಡಿ ಎಂದು ನಾವು ಹೇಳುವುದಿಲ್ಲ. ಆದರೆ ವಸೂಲಿ ಮಾಡುವಾಗ ಕಿರುಕುಳ ಕೊಡಲೇಬಾರದು. ಆರ್‌ಬಿಐ ನಿಯಮದಂತೆ ನಡೆದುಕೊಳ್ಳಬೇಕೆಂದು. ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಪಡೆಯುವವರ ಹಿತವನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ಸಾಲಗಾರರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾಲಗಾರರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಆದಷ್ಟು ಬೇಗನೆ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.
ಬಲವಂತದ ಸಾಲ ವಸೂಲಾತಿ ಒಪ್ಪಲು ಸಾಧ್ಯವಿಲ್ಲ
ಬೆದರಿಸಿ ಬಲವಂತದ ಸಾಲ ವಸೂಲಾತಿ ಒಪ್ಪಲು ಸಾಧ್ಯವಿಲ್ಲ. ಬಡ ಸಾಲಗಾರರ ಹಿತವನ್ನು ಕಾಪಾಡಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ. ಬಲವಂತದ ಸಾಲ ವಸೂಲಾತಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಹುದು. ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಸಾಧ್ಯವಾಗುವಂತೆ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗುವುದು. ಈಗಿರುವ ಕಾನೂನು ಇನ್ನಷ್ಟು ಬಲಪಡಿಸಲು ಕ್ರಮ. ಇದರಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲು ಕ್ರಮ. ನೋಂದಣಿಯಾಗದ ಲೇವಾದೇವಿಗಾರರ ಮೇಲೆ ನಿಯಂತ್ರಣಕ್ಕೆ ಹೊಸ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಡಿಸಿ, ಎಸ್‌ಪಿಗಳಿಗೆ ಖಡಕ್ ಸೂಚನೆ
ಯಾರಾದರೂ ಮೈಕ್ರೋ ಫೈನಾನ್ಸ್ ವ್ಯಕ್ತಿಗಳಿಂದ ಕಿರುಕುಳ ಎದುರಿಸುತ್ತಿದ್ದರೆ ಸ್ಥಳೀಯವಾಗಿ ಪೊಲೀಸರಿಗೆ ದೂರು ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ ಈ ಕುರಿತ ಜನರಿಗೆ ಸೂಕ್ತ ತಿಳಿವಳಿಕೆ, ಹಾಗೂ ಮೈಕ್ರೋ ಫೈನಾನ್ಸ್ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಬೇಕು. ಈ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲು ಸೂಚನೆ ನೀಡಲಾಗುವುದು. ಅಲ್ಲಿ ದೂರು ನೀಡಬಹುದು ಎಂದ ಅವರು, ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಲು ಸೂಚನೆ ನೀಡಲಾವುದು ಎಂದೂ ಹೇಳಿದರು.
ಸಂಜೆ 5 ರ ನಂತರ ಸಾಲ ವಸೂಲಾತಿಗೆ ಹೋಗಬಾರದು
ಸಾಲ ವಸೂಲಾತಿ ಕುರಿತಾಗಿ ಆರ್ ಬಿಐ ಹಲವು ಮಾರ್ಗಸೂಚಿ ಹೊರಡಿಸಿವೆ. ಸಂಜೆ 5ಗಂಟೆ ಬಳಿಕ ಮನೆಗೆ ಸಾಲ ವಸೂಲಾತಿಗೆ ಹೋಗಬಾರದು. ಬೆದರಿಕೆ ಹಾಕಬಾರದು. ವಸೂಲಾತಿಗೆ ಮೂರನೇ ವ್ಯಕ್ತಿಗಳನ್ನು ಬಳಸಿಕೊಳ್ಳಬಾರದು. ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು.
ಒಂದು ಕುಟುಂಬಕ್ಕೆ ಎಷ್ಟು ಸಾಲ ನೀಡಬಹುದು ಎಂಬ ಬಗ್ಗೆ ಆರ್ ಬಿಐ ಮಿತಿಯಿದೆ. ಇದನ್ನು ಪಾಲಿಸಲಾಗುತ್ತಿದೆಯೇ? ಎಂದು ಪರಿಶೀಲಿಸಿ ಆ ನಿಯಮ ಉಲ್ಲಂಘನೆಯಾಗಿದ್ದರೆ ಕ್ರಮ ಜರುಗಿಸಲಾಗುವುದು ಎಂದೂ ಅವರು ಹೇಳಿದರು.
ಶೇ 17.07ಕ್ಕಿಂತ ಹೆಚ್ಚು ಬಡ್ಡಿ ಪಡೆಯುವಂತಿಲ್ಲ
ಮೈಕ್ರೋ ಫೈನಾನ್ಸ್ ಕಂಪನಿಗಳು ಆರ್‌ಬಿಐ ಅಡಿಯಲ್ಲಿ ಬರುತ್ತವೆ. ಆರ್‌ಬಿಐ ನಿಯಮದಂತೆ ಶೇ 17.07ಕ್ಕಿಂತ ಹೆಚ್ಚು ಬಡ್ಡಿ ಪಡೆಯುವಂತಿಲ್ಲ. ಯಾವುದೇ ಸಾಲಗಾರರಿಗೆ 3 ಬಾರಿಗಿಂತ ಹೆಚ್ಚು ಸಾಲ ಕೊಡುವಂತಿಲ್ಲ. ಮೈಕ್ರೋ ಫೈನಾನ್ಸ್ ಕಂಪನಿಗಳು ಆರ್‌ಬಿಐ ನಿಯಮ ಮೀರಿ ಸುಮಾರು ಶೇ 28- 29 ರಷ್ಟು ಬಡ್ಡಿ ವಸೂಲಿ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡುತ್ತೇವೆ. ಅಧಿಕ ಬಡ್ಡಿ ವಸೂಲಿ ಮಾಡುತ್ತಿರುವ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ತಿಳಿಸಿದರು.
ಅಲ್ಲದೆ, ಮೈಕ್ರೋ ಫೈನಾನ್ಸ್ ಕಂಪನಿಗಳು ಆರ್‌ಬಿಐ ನಿಯಮಾವಳಿ ಮತ್ತು ಕೇಂದ್ರ ಹಣಕಾಸು ಖಾತೆಯಡಿ ಬರುತ್ತವೆ. ಹಾಗಾಗಿ ಕೇಂದ್ರ ಸರ್ಕಾರ ಕೂಡ ಈ ಕಂಪನಿಗಳ ಕಿರುಕುಳಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಮಾಡಬೇಕು ಎಂದು ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದೂ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಹೇಳಿದರು.