ಧರ್ಮಸ್ಥಳ ಪ್ರಕರಣ| ವಿಪಕ್ಷ-ಆಡಳಿತ ಪಕ್ಷದಿಂದ ಸೌಜನ್ಯ ಪರ ಹೋರಾಟಗಾರರ ಟಾರ್ಗೆಟ್ - ಮಟ್ಟಣ್ಣವರ್ ಆರೋಪ

ಯಾವುದೇ ವೈಜ್ಞಾನಿಕ ಕಾನೂನು ಪ್ರಕ್ರಿಯೆ ಅನುಸರಿಸದೇ ವಿಲೇವಾರಿ ಮಾಡಲಾಗಿದೆ. ನಮ್ಮದು ಅಸಹಜ ಸಾವುಗಳ ವಿರುದ್ಧದ ಹೋರಾಟ. ನಾವೆಲ್ಲಿಯೂ ದೇವಸ್ಥಾನವನ್ನು ಗುರಿ ಮಾಡಿಲ್ಲ ಎಂದು ಗಿರೀಶ್ ಮಟ್ಟಣ್ಣವರ್ ಹೇಳಿದರು.;

Update: 2025-08-18 03:11 GMT

ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಆರೋಪ ಸಂಬಂಧಿತ ಪ್ರಕರಣದಲ್ಲಿ ದೂರುದಾರ ವ್ಯಕ್ತಿಯ ಪರವಾಗಿ ತಾವು ದೃಢವಾಗಿ ನಿಲ್ಲುತ್ತೇವೆ. ನಮ್ಮ ಹೋರಾಟಕ್ಕೆ ಯಾವುದೇ ಬಾಹ್ಯ ಬೆಂಬಲ ಇಲ್ಲ. ಫಂಡಿಂಗ್ ಮಾಡುತ್ತಿರುವ ಬಗ್ಗೆ ಯಾವುದೇ ವಿಚಾರಣೆ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಸೌಜನ್ಯಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.

ಧರ್ಮಸ್ಥಳದ ಪಂಗಳದಲ್ಲಿ ಭಾನುವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಮಟ್ಟಣ್ಣವರ್, ವಿದೇಶಿ ದೇಣಿಗೆ ಆರೋಪವನ್ನು ತಳ್ಳಿಹಾಕಿದರು. ಸೌಜನ್ಯ ಪರವಾಗಿ ಹೋರಾಟ ಮಾಡುತ್ತಿರುವ ನಮ್ಮನ್ನು ವಿಧಾನಸಭೆಯಲ್ಲಿ ತಮ್ಮನ್ನು ಸುಖಾ ಸುಮ್ಮನೆ ಆಡಳಿತ ಹಾಗೂ ವಿಪಕ್ಷಗಳೆರಡೂ ಟಾರ್ಗೆಟ್ ಮಾಡುತ್ತಿವೆ ಎಂದು ಆರೋಪಿಸಿದರು.

1995 ಮತ್ತು 2014 ರ ನಡುವಿನ ಅಸಹಜ ಸಾವುಗಳ ತನಿಖೆಗೆ ಮಾತ್ರ ನಾವು ಒತ್ತಾಯಿಸುತ್ತಿದ್ದೇವೆ. ಅಲ್ಲಿ ಶವಗಳನ್ನು ಯಾವುದೇ ವೈಜ್ಞಾನಿಕ ಕಾನೂನು ಪ್ರಕ್ರಿಯೆ ಅನುಸರಿಸದೇ ವಿಲೇವಾರಿ ಮಾಡಲಾಗಿದೆ. ನಮ್ಮದು ಅಸಹಜ ಸಾವುಗಳ ವಿರುದ್ಧದ ಹೋರಾಟ. ನಾವೆಲ್ಲಿಯೂ ದೇವಸ್ಥಾನವನ್ನು ಗುರಿ  ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸಿ, ಧರ್ಮಸ್ಥಳ ಗ್ರಾಮ ಪಂಚಾಯತ್ ಏಪ್ರಿಲ್ 7, 2010 ರಂದು ಅಪರಿಚಿತ ಮಹಿಳೆಯ ಶವವನ್ನು ಆಕೆಯ ಶಂಕಿತ ಕೊಲೆಯ ಒಂದು ದಿನದ ನಂತರ ಸುಟ್ಟುಹಾಕಿತು. ಮಾರ್ಚ್ 7, 2010 ರಂದು ಶವವಾಗಿ ಪತ್ತೆಯಾದ 40 ವರ್ಷದ ವ್ಯಕ್ತಿಯ ಶವವನ್ನು ಸರಿಯಾದ ವಿಚಾರಣೆಯಿಲ್ಲದೆ ವಿಲೇವಾರಿ ಮಾಡಿದೆ ಎಂದು ಮಟ್ಟಣ್ಣವರ್ ಆರೋಪಿಸಿದರು.

ಅಕ್ರಮವಾಗಿ ಶವ ಹೂತಿಟ್ಟ ಪ್ರಕರಣದಲ್ಲಿ  ಭಾಗಿಯಾಗಿರುವ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

Tags:    

Similar News