ಆಪರೇಷನ್ ಸಿಂದೂರ; ಸೈನಿಕರ ಶ್ರೇಯಸ್ಸಿಗೆ ಮಸೀದಿಗಳಲ್ಲಿ ಪ್ರಾರ್ಥಿಸಲು ಸಚಿವ ಜಮೀರ್ ಸೂಚನೆ
ಭಾರತೀಯ ಸೇನಾಪಡೆಗಳಿಗೆ ಶಕ್ತಿ ತುಂಬಲು ಹಾಗೂ ಅವರ ಶ್ರೇಯಸ್ಸಿಗಾಗಿ ರಾಜ್ಯದ ಎಲ್ಲಾ ವಕ್ಫ್‌ಗೆ ಸೇರಿದ ಹಾಗೂ ಇತರೆ ಮಸೀದಿಗಳಲ್ಲಿ ಪ್ರಾರ್ಥಿಸುವಂತೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಸೂಚಿಸಿದ್ದಾರೆ.;
ಮುಸ್ಲಿಂ ಸಮುದಾಯದ ಪವಿತ್ರ ಸ್ಥಳ ಮಸೀದಿ.
ʼಆಪರೇಷನ್ ಸಿಂದೂರʼ ಹೆಸರಿನಲ್ಲಿ ಭಾರತೀಯ ಸೇನಾಪಡೆ ಬುಧವಾರ (ಮೇ7)ರಂದು ಮುಂಜಾನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಯೋತ್ಪಾದಕರ ಒಂಬತ್ತು ಅಡಗುತಾಣಗಳನ್ನು ನಾಶಪಡಿಸಲಾಗಿತ್ತು. ಇದರಿಂದ ದೇಶಾದ್ಯಂತ ಸೈನಿಕರ ಪರಾಕ್ರಮವನ್ನು ಸಾರ್ವಜನಿಕರು ಕೊಂಡಾಡಿದ್ದರು. ಇದೀಗ ಸೇನಾಪಡೆಗಳಿಗೆ ಶಕ್ತಿ ತುಂಬಲು ಹಾಗೂ ಅವರ ಶ್ರೇಯಸ್ಸಿಗಾಗಿ ರಾಜ್ಯದ ಎಲ್ಲಾ ವಕ್ಫ್‌ಗೆ ಸೇರಿದ ಹಾಗೂ ಇತರೆ ಮಸೀದಿಗಳಲ್ಲಿ ಪ್ರಾರ್ಥಿಸುವಂತೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಸೂಚಿಸಿದ್ದಾರೆ.
ವಕ್ಫ್ ಬೋರ್ಡ್ ವ್ಯಾಪ್ತಿಯ ಮಸೀದಿಗಳು ಸೇರಿದಂತೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ದೇಶದ ಸೈನಿಕರ ಶ್ರೇಯಸ್ಸಿಗೆ ಹಾಗೂ ಶಕ್ತಿ ತುಂಬಲು ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು ಎಂದು ಬೋರ್ಡ್ ಮುಖ್ಯ ಕಾರ್ಯನಿರ್ವಹಾಧಿಕಾರಿಗೆ ಸಚಿವ ಜಮೀರ್ ಅಹಮದ್ ಖಾನ್ ಅವರು ಪತ್ರ ಬರೆದು ಸೂಚನೆ ನೀಡಿದ್ದಾರೆ
ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 26 ಮಂದಿ ಮೃತಪಟ್ಟಿದ್ದರು. ಈ ಘಟನೆಗೆ ಪ್ರತಿಕಾರ ತೀರಿಸಿಕೊಳ್ಳಲು ಭಾರತೀಯ ಸೇನಾಪಡೆ ಪಾಕ್ ಆಕ್ರಮಿತ ಪ್ರದೇಶದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ನೂರಾರು ಉಗ್ರರರನ್ನು ಸೆದೆಬಡಿದಿತ್ತು. ಆದರೆ ಪಾಕ್ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಉಗ್ರರ ನೆಲೆಗಳನ್ನಷ್ಟೇ ಗುರಿಯಾಗಿಸಿ ನಿಖರವಾಗಿ ದಾಳಿ ನಡೆಸಲಾಗಿತ್ತು.
ʼಆಪರೇಷನ್ ಸಿಂದೂರ್ʼ ಯಶಸ್ವಿಯಾದ ಹಿನ್ನಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕಾರ್, ಪ್ರಿಯಾಂಕ್ ಖರ್ಗೆ, ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವಾರು ನಾಯಕರು ಸೇನೆಗೆ ಶುಭಕೋರಿ ಕೇಂದ್ರಸರ್ಕಾರದ ದಿಟ್ಟ ಕ್ರಮವನ್ನು ಪ್ರಶಂಸಿದ್ದರು.
ಮುಜರಾಯಿ ದೇವಾಲಯಗಳಲ್ಲಿ ಪೂಜೆ
ಪಾಕ್ ಆಕ್ರಮಿತ ಕಾಶ್ಮೀರದ ಉಗ್ರನೆಲೆಗಳ ಮೇಲೆ ʼಆಪರೇಷನ್ ಸಿಂದೂರ್ʼ ಹೆಸರಿನಲ್ಲಿ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದ ಭಾರತೀಯ ಸೇನಾಪಡೆಗೆ ಮತ್ತಷ್ಟು ಶಕ್ತಿ ಕರುಣಿಸುವಂತೆ ರಾಜ್ಯದ ಮುಜರಾಯಿ ಇಲಾಖೆ ಅಧೀನದ ಎಲ್ಲಾ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಬುಧವಾರ (ಮೇ7)ರಂದು ಸೂಚನೆ ನೀಡಿದ್ದರು.
ವಿವಾದ ಸೃಷ್ಠಿಸಿದ್ದ ಕಾಂಗ್ರೆಸ್ ʼಎಕ್ಸ್ʼ ಸಂದೇಶ
ʼಆಪರೇಷನ್ ಸಿಂದೂರʼ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಅಡಗುತಾಣಗಳನ್ನು ನಾಶಮಾಡಿದ್ದ ಸುದ್ದಿಯನ್ನು ರಕ್ಷಣಾ ಸಚಿವಾಲಯ ಬುದವಾರ ಮುಂಜಾನೆ 1.44ಕ್ಕೆ ಹಂಚಿಕೊಂಡಿತ್ತು. ರಾಜ್ಯ ಕಾಂಗ್ರೆಸ್ ತನ್ನ ʼಎಕ್ಸ್ʼ ಸಾಮಜಿಕ ಜಾಲತಾಣದಲ್ಲಿ ಮಹಾತ್ಮ ಗಾಂಧೀಜಿಯವರ "ಮನುಕುಲದ ಅತ್ಯಂತ ಶಕ್ತಿಯುತ ಅಸ್ತ್ರವೆಂದರೆ ಶಾಂತಿ." ಎಂಬ ಸಂದೇಶವನ್ನು ಪೋಸ್ಟ್ ಮಾಡಿತ್ತು. ಈ ಸಂದೇಶಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಂದೇಶವನ್ನು ಡಿಲೀಟ್ ಮಾಡಿತ್ತು.