Operation Sindoor | ಭಾರತದ ವಿರೋಧ ಲೆಕ್ಕಿಸದೇ ಪಾಕಿಸ್ತಾನಕ್ಕೆ 1 ಬಿಲಿಯನ್‌ ಡಾಲರ್‌ ರೊಕ್ಕ ಕೊಟ್ಟ ಐಎಂಎಫ್‌

ಪಾಕಿಸ್ತಾನಕ್ಕೆ 2.3 ಬಿಲಿಯನ್ ಯುಎಸ್ ಡಾಲರ್ ಸಾಲ ನೀಡುವ ಐಎಂಎಫ್‌ನ ಪ್ರಸ್ತಾಪದ ವಿರುದ್ಧ ಭಾರತ ಮತ ಚಲಾಯಿಸಿದರೂ ನೆರವು ಘೋಷಿಸಿರುವುದಕ್ಕೆರ ಭಾರತ ಕಳವಳ ವ್ಯಕ್ತಪಡಿಸಿದೆ.;

Update: 2025-05-10 04:59 GMT

ಭಾರತದ ತೀವ್ರ ಆಕ್ಷೇಪದ ನಡುವೆಯೂ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಶುಕ್ರವಾರ ಪಾಕಿಸ್ತಾನಕ್ಕೆ ಮೊದಲ ಕಂತಿನ ರೂಪದಲ್ಲಿ 1ಬಿಲಿಯನ್ ಅಮೆರಿಕನ್‌ ಡಾಲರ್(8,500 ಕೋಟಿ ರೂ.) ಹಣಕಾಸು ನೆರವು ಒದಗಿಸಲು ಅನುಮೋದನೆ ನೀಡಿದೆ.

ಪಾಕಿಸ್ತಾನ ಸರ್ಕಾರವು ಐಎಂಎಫ್ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕಳಪೆ ಸಾಧನೆ ಮಾಡಿದೆ. ಅಭಿವೃದ್ಧಿಗೆ ನೀಡುವ ಹಣಕಾಸಿನ ನೆರವನ್ನು ಗಡಿಯಾಚೆಗಿನ ಭಯೋತ್ಪಾದನೆಗೆ ಬಳಸುವ ಸಾಧ್ಯತೆ ಇದೆ. ಹಾಗಾಗಿ ನೆರವು ನೀಡದಂತೆ ಭಾರತ ಸರ್ಕಾರ ಅಂತರಾಷ್ಟ್ರೀಯ ಹಣಕಾಸು ನಿಧಿಗೆ ಮನವಿ ಮಾಡಿತ್ತು.

ಶುಕ್ರವಾರ ನಡೆದ ಐಎಂಎಫ್ ಮಂಡಳಿ ಸಭೆಯಲ್ಲಿ ಭಾರತ ತನ್ನ ಪ್ರತಿಭಟನೆ ದಾಖಲಿಸಿತು. ಪಾಕಿಸ್ತಾನಕ್ಕೆ 2.3 ಬಿಲಿಯನ್ ಯುಎಸ್ ಡಾಲರ್ ಸಾಲ ನೀಡುವ ಐಎಂಎಫ್‌ನ ಪ್ರಸ್ತಾಪದ ವಿರುದ್ಧ ಭಾರತ ಮತ ಚಲಾಯಿಸಿದರೂ ನೆರವು ಘೋಷಿಸಿರುವುದಕ್ಕೆರ ಭಾರತ ಕಳವಳ ವ್ಯಕ್ತಪಡಿಸಿದೆ.

ಐಎಂಎಫ್‌ನ ನಿರ್ಣಾಯಕ ಸಭೆಯಲ್ಲಿ ವಿಸ್ತೃತ ನಿಧಿ ಸೌಲಭ್ಯ (ಇಎಫ್‌ಎಫ್) ಸಾಲ ಕಾರ್ಯಕ್ರಮ ಪರಿಶೀಲಿಸಿ, ಪಾಕಿಸ್ತಾನಕ್ಕೆ ನೆರವು ನೀಡಲು ನಿರ್ಧರಿಸಲಾಯಿತು.  

ಭಯೋತ್ಪಾದನೆ ಪ್ರೋತ್ಸಾಹಿಸುತ್ತಿರುವ ರಾಷ್ಟ್ರಕ್ಕೆ ಹಣಕಾಸಿನ ನೆರವು ನೀಡುತ್ತಿರುವುದು ಜಾಗತಿಕ ಸಮುದಾಯಕ್ಕೆ ಅಪಾಯಕಾರಿ ಸಂದೇಶ ರವಾನಿಸಿದಂತಾಗುತ್ತದೆ. ಹಣಕಾಸು ಸಂಸ್ಥೆಗಳು ಮತ್ತು ದಾನಿಗಳು ನೀಡುವ ನೆರವು ದುಷ್ಕೃತ್ಯಗಳಿಗೆ ಬಳಕೆಯಾಗುವ ಆತಂಕವಿದೆ. ಐಎಂಎಫ್‌ ಕ್ರಮ ಜಾಗತಿಕ ಮೌಲ್ಯಗಳನ್ನು ಅಣಕಿಸುವಂತಿದೆ ಎಂದು ಪ್ರಧಾನಿ ಕಾರ್ಯಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.  

ಆರ್ಥಿಕ ಸ್ಥಿತಿ ಸುಧಾರಿಸಿದೆ

ಈ ಮಧ್ಯೆ ಪಾಕಿಸ್ತಾನ ಪ್ರಧಾನಿ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಪಾಕಿಸ್ತಾನದ "ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ. ಏಕಪಕ್ಷೀಯ ಆಕ್ರಮಣದ ಮೂಲಕ ನಮ್ಮ ದೇಶದ ಅಭಿವೃದ್ಧಿಯ ಗಮನವನ್ನು ಬೇರೆಡೆಗೆ ತಿರುಗಿಸಲು ಭಾರತ ಪಿತೂರಿ ನಡೆಸುತ್ತಿದೆ" ಎಂದು ಆರೋಪಿಸಿದೆ.

"ಐಎಂಎಫ್ ಕಾರ್ಯಕ್ರಮವನ್ನು ಹಾಳುಮಾಡುವ ಭಾರತದ ಪ್ರಯತ್ನಗಳು ವಿಫಲವಾಗಿವೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ. ಐಎಂಎಫ್ ಕಾರ್ಯಕ್ರಮವು ಆರ್ಥಿಕತೆಯನ್ನು ಸ್ಥಿರಗೊಳಿಸಲು ಮತ್ತು ದೀರ್ಘಾವಧಿಯ ಚೇತರಿಕೆಯ ಹಾದಿಯಲ್ಲಿ ಮುನ್ನಡೆಸಲು ಸಹಕಾರಿಯಾಗಿದೆʼ ಎಂದಿದೆ.

Tags:    

Similar News