ಆಪರೇಷನ್ ಸಿಂಧೂರ್; ಕಾಂಗ್ರೆಸ್ ಟ್ವೀಟ್‌ಗೆ ವ್ಯಾಪಕ ಖಂಡನೆ
ಕಾಂಗ್ರೆಸ್ ಪಕ್ಷ ಉಗ್ರಗಾಮಿಗಳ ಹಾಗೂ ಪಾಕಿಸ್ತಾನದ ಪರವಾಗಿ ಇದೆಯಾ? ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ವಿಜಯೇಂದ್ರ ತಿಳಿಸಿದ್ದಾರೆ.;
ಕಾಂಗ್ರೆಸ್ ಮಾಡಿರುವ ಟ್ವೀಟ್ ಸಂದೇಶದ ವಿರುದ್ಧ ಬಿಜೆಪಿ ನಾಯಕರಾದ ಆರ್.ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನಾಪಡೆ ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆ ನಡೆಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಒಂಬತ್ತು ಭಯೋತ್ಪಾದಕರ ಶಿಬಿರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಅವರ ನೆಲೆಗಳನ್ನು ಧ್ವಂಸಗೊಳಿಸಿರುವುದಾಗಿ ರಕ್ಷಣಾ ಸಚಿವಾಲಯ ಬುಧವಾರ (ಮೇ7) ಬೆಳಿಗ್ಗೆ 1. 44 ಕ್ಕೆ ಹೇಳಿಕೆ ನೀಡಿತ್ತು. ಏತನ್ಮಧ್ಯೆ, ಕರ್ನಾಟಕ ಕಾಂಗ್ರೆಸ್ ತನ್ನ ಎಕ್ಸ್ ವೇದಿಕೆಯಲ್ಲಿ ಪ್ರಕಟಿಸಿರುವ ಪೋಸ್ಟ್ ವಿವಾದಕ್ಕೆ ಕಾರಣವಾಗಿದ್ದು, ಬಳಿಕ ಅದನ್ನು ಡಿಲೀಟ್ ಮಾಡಲಾಗಿದೆ.
ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಹಾತ್ಮ ಗಾಂಧೀಜಿಯವರ "ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ" ಎಂಬ ಹೇಳಿಕೆಯನ್ನು ಪೋಸ್ಟ್ ಮಾಡಿತ್ತು. ಭಾರತ ಪಾಕ್ ವಿರುದ್ಧ ಸಮರ ಸಾರಿದ ಮರುದಿನನೇ ಕಾಂಗ್ರೆಸ್ ಈ ರೀತಿಯ ಪೋಸ್ಟ್ ಮಾಡಿದ್ದು ಪ್ರತಿಪಕ್ಷ ಬಿಜೆಪಿ ಸೇರಿದಂತೆ ಎಲ್ಲರನ್ನೂ ಕೆರಳಿಸಿತ್ತು. ಕಾಂಗ್ರೆಸ್ನ ಟ್ವೀಟ್ ಬಗ್ಗೆ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತಗೊಂಡವು.
ರಾಜ್ಯ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ಉಗ್ರಗಾಮಿಗಳ ಹಾಗೂ ಪಾಕಿಸ್ತಾನದ ಪರವಾಗಿ ಇದೆಯಾ? ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಹಾಗೂ ತಕ್ಷಣ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ "ಪಾಕಿಸ್ತಾನದಲ್ಲಿ ಮಿಸೈಲ್ ಬಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಯಾಕೆ ಮರುಗುತ್ತಿದೆ? ಆಪರೇಷನ್ ಸಿಂಧೂರ್ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟುಮಾಡಿದಂತಿದೆ." ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿ, ಉಗ್ರರ ಸಾವಿಗೆ ವಿಲವಿಲ ಒದ್ದಾಡುತ್ತಿರುವ ಕಾಂಗ್ರೆಸ್ ರಾಷ್ಟ್ರೀಯತೆಯನ್ನು ಮರೆತಿದೆ ಎಂದು ದೂರಿದ್ದಾರೆ.
ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ "ಪಹಲ್ಗಾಮ್ ಉಗ್ರ ದಾಳಿಗೆ ದೇಶ ಪ್ರತೀಕಾರ ತೆಗೆದುಕೊಳ್ಳಬೇಕೆಂದು ಹವಣಿಸುತ್ತಿರುವಾಗ ಶತ್ರುಗಳ ಹಿತ ಚಿಂತಕರಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ ಪಾಕಿಸ್ತಾನದೊಂದಿಗಿರುವ ನೆಂಟಸ್ತನ ಹಾಗೂ ಅವಿನಾಭಾವ ಸಂಬಂಧವನ್ನು ಜಗಜ್ಜಾಹೀರು ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಕಿಂಚಿತ್ತು ನೈತಿಕತೆ, ದೇಶಾಭಿಮಾನವಿದ್ದರೆ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ರೀತಿಯಾದ ಅನುಚಿತ ವರ್ತನೆ ಪ್ರದರ್ಶಿಸುತ್ತಿರಲಿಲ್ಲ. ಸಶಸ್ತ್ರ ಪಡೆಗಳನ್ನು ಜಾತ್ಯತೀತವಾಗಿ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಬೆಂಬಲಿಸಬೇಕಾಗಿದ್ದ ಸಮಯದಲ್ಲಿ ಈ ರೀತಿಯಾದ ಅಲ್ಪತನ ಪ್ರದರ್ಶನ ಮಾಡುವುದು ಬೇಕಾಗಿರಲಿಲ್ಲ." ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ.
ರಾಜಕೀಯ ನಾಯಕರು ಹಾಗೂ ಸಾರ್ವಜನಿಕವಲಯದಲ್ಲಿಯೂ ಸಾಕಷ್ಟು ಆಕ್ರೋಶಕ್ಕೆ ಕಾರಣವಾದ ಟ್ವೀಟ್ ಸಂದೇಶವನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣದಿಂದ ಡಿಲಿಟ್ ಮಾಡಿದೆ.