ಆಪರೇಷನ್ ಸಿಂಧೂರ ಕೇವಲ ಟ್ರೈಲರ್; ರಾಜನಾಥ್ ಸಿಂಗ್
ಲಖನೌನಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಾದ ಕ್ಷಿಪಣಿಗಳ ಮೊದಲ ಬ್ಯಾಚ್‌ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಚಾಲನೆ ನೀಡಿದ ರಕ್ಷಣಾ ಸಚಿವ.
ಆಪರೇಷನ್ ಸಿಂಧೂರದಲ್ಲಿ ನಡೆದದ್ದು ಕೇವಲ ಒಂದು ಟ್ರೈಲರ್ ಮಾತ್ರ, ಪಾಕಿಸ್ತಾನದ ಪ್ರತಿಯೊಂದು ಇಂಚು ಭೂಭಾಗವೂ ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿಯಲ್ಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ (ಅಕ್ಟೋಬರ್ 18) ಲಖನೌದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಲವಾದ ಎಚ್ಚರಿಕೆ ನೀಡಿದ್ದಾರೆ.
ಲಖನೌನಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಾದ ಕ್ಷಿಪಣಿಗಳ ಮೊದಲ ಬ್ಯಾಚ್‌ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು. "ಬ್ರಹ್ಮೋಸ್ ಭಾರತೀಯ ಸಶಸ್ತ್ರ ಪಡೆಗಳ ಪ್ರಮುಖ ಆಧಾರಸ್ತಂಭವಾಗಿ ಮಾರ್ಪಟ್ಟಿದೆ. ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬಲ್ಲೆವು ಎಂಬ ದೇಶದ ನಂಬಿಕೆಯನ್ನು ಇದು ಮತ್ತಷ್ಟು ಬಲಪಡಿಸಿದೆ," ಎಂದು ರಾಜನಾಥ್ ಸಿಂಗ್ ಹೇಳಿದರು.
ಯುಪಿಡಿಐಸಿಗೆ ಒಂದು ಮೈಲಿಗಲ್ಲು
ಬ್ರಹ್ಮೋಸ್ ಕ್ಷಿಪಣಿಗಳಿಗೆ ಚಾಲನೆ ನೀಡಿರುವುದು ಉತ್ತರ ಪ್ರದೇಶ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್‌ಗೆ (ಯುಪಿಡಿಐಸಿ) ಕೇವಲ ಒಂದು ಮೈಲಿಗಲ್ಲಲ್ಲ, ಬದಲಾಗಿ ರಕ್ಷಣಾ ಉತ್ಪಾದನೆಯಲ್ಲಿ 'ಆತ್ಮನಿರ್ಭರತೆ' ಸಾಧಿಸುವ ಭಾರತದ ಸಂಕಲ್ಪಕ್ಕೆ ಹೊಸ ಶಕ್ತಿಯನ್ನು ನೀಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಬ್ರಹ್ಮೋಸ್ ಏರೋಸ್ಪೇಸ್ ಸಂಸ್ಥೆಯು ಲಖನೌನ ಸರೋಜಿನಿ ನಗರದಲ್ಲಿರುವ ತನ್ನ ಹೊಸ ಜೋಡಣೆ ಮತ್ತು ಪರೀಕ್ಷಾ ಘಟಕದಿಂದ ಮೊದಲ ಬ್ಯಾಚ್ ಕ್ಷಿಪಣಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಉತ್ಪಾದಿಸಿದೆ. ಈ ಅತ್ಯಾಧುನಿಕ ಘಟಕವನ್ನು ಮೇ 11 ರಂದು ಉದ್ಘಾಟಿಸಲಾಗಿತ್ತು. ಇಲ್ಲಿ ಕ್ಷಿಪಣಿಗಳ ಜೋಡಣೆ, ಪರೀಕ್ಷೆ ಮತ್ತು ಅಂತಿಮ ಗುಣಮಟ್ಟದ ತಪಾಸಣೆಗಾಗಿ ಎಲ್ಲಾ ಆಧುನಿಕ ಸೌಲಭ್ಯಗಳಿವೆ. ಯಶಸ್ವಿ ಪರೀಕ್ಷೆಯ ನಂತರ, ಕ್ಷಿಪಣಿಗಳನ್ನು ಭಾರತೀಯ ಸಶಸ್ತ್ರ ಪಡೆಗಳ ನಿಯೋಜನೆಗೆ ಸಿದ್ಧಪಡಿಸಲಾಗಿದೆ.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಸಚಿವ ನಂದ ಗೋಪಾಲ್ ಗುಪ್ತಾ ನಂದಿ ಮತ್ತು ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.