Lakshmi Hebbalkar vs CT Ravi | ಸಿಐಡಿ ತನಿಖೆಗೆ ಆಕ್ಷೇಪ; ನನ್ನ ತೀರ್ಪೇ ಅಂತಿಮ ಎಂದ ಹೊರಟ್ಟಿ
ಸಿ.ಟಿ.ರವಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಮೂರು ವಾರಗಳಾದ ಬಳಿಕ ರಾಜ್ಯ ಸರ್ಕಾರದ ಕ್ರಮಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಆರೋಪ ಆಕ್ಷೇಪ ವ್ಯಕ್ತಪಡಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.;
ಬೆಳಗಾವಿಯ ಸುವರ್ಣಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವಾಚ್ಯ ಪದ ಬಳಸಿದ ಪ್ರಕರಣ ಇದೀಗ ಶಾಸಕಾಂಗ ಹಾಗೂ ಕಾರ್ಯಾಂಗದ ಮಧ್ಯೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.
ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ ಮೂರು ವಾರಗಳ ಬಳಿಕ ರಾಜ್ಯ ಸರ್ಕಾರದ ಕ್ರಮಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಆರೋಪ ಆಕ್ಷೇಪ ವ್ಯಕ್ತಪಡಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.
ನನ್ನ ತೀರ್ಪೇ ಅಂತಿಮ
ಸಿ.ಟಿ.ರವಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸದನದಲ್ಲಿ ನಡೆದಿರುವ ಘಟನೆ ಬಗ್ಗೆ ತನಿಖೆ ನಡೆಸುವುದು, ಮುಕ್ತಾಯ ಮಾಡುವ ಸಾರ್ವಭೌಮ ಅಧಿಕಾರ ಸದನದ ಮುಖ್ಯಸ್ಥರಿಗೆ ಪ್ರದತ್ತವಾಗಿದೆ. ಈಗಾಗಲೇ ಡಿ.19 ರಂದು ನಡೆದ ಘಟನೆಗೆ ಸಂಬಂಧಿಸಿ ಪರಿಶೀಲಿಸಿದ್ದೇನೆ. ಆರೋಪ ಸಾಕ್ಷೀಕರಿಸಲು ಯಾವುದೇ ಪುರಾವೆ ಇಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಇಲ್ಲಿ ಸಭಾಪತಿ ತೀರ್ಮಾನವೇ ಅಂತಿಮ. ಹಾಗಿದ್ದರೂ ಸಿಐಡಿ ತನಿಖೆ ಮುಂದುವರಿಸುವುದು ಸರಿಯಲ್ಲ ಎಂದು ಉಲ್ಲೇಖಿಸಿದ್ದಾರೆ.
ಪ್ರಕರಣವನ್ನು ಸಿಐಡಿಗೆ ವಹಿಸುವ ಮೂಲಕ ಶಾಸಕಾಂಗ ಮತ್ತು ಸಭಾಪತಿಗೆ ಪ್ರದತ್ತವಾಗಿರುವ ವಿಶೇಷ ಅಧಿಕಾರಕ್ಕೆ ಚ್ಯುತಿ ಬರುವಂತೆ ಮಾಡಿದೆ. ಅಲ್ಲದೇ ಸಾಂವಿಧಾನಿಕ ಸಂಘರ್ಷಣೆಗೆ ಅವಕಾಶ ಮಾಡಿಕೊಡುತ್ತಿದೆ. ವಿನಾಕಾರಣ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಬಾರದು. ಈ ಘಟನೆ ನನ್ನ ಕಾರ್ಯವ್ಯಾಪ್ತಿಯಲ್ಲೇ ನಡೆದಿರುವುದರಿಂದ ನಾನು ನೀಡಿರುವ ತೀರ್ಪೇ ಅಂತಿಮ. ಕಾರ್ಯಾಂಗ ಹಾಗೂ ಶಾಸಕಾಂಗ ಪರಸ್ಪರ ಸೌಹಾರ್ಧವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದ್ದಾರೆ.
ನನಗೆ ಪತ್ರ ತಲುಪಿಲ್ಲ: ಪಮೇಶ್ವರ್
ಸಭಾಪತಿ ಬಸವರಾಜ ಹೊರಟ್ಟಿ ಅವರು ಬರೆದಿರುವ ಪತ್ರ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ನನಗೆ ಪತ್ರ ಇನ್ನೂ ತಲುಪಿಲ್ಲ. ಕಚೇರಿಗೆ ತಲುಪಿದ್ದರೆ ಪರಿಶೀಲಿಸುತತೇನೆ. ಪ್ರಕರಣ ಕುರಿತಂತೆ ಕಾನೂನು ಸಲಹೆ ಪಡೆದು ನಿರ್ಧಾರ ಕೈಗೊಳ್ಳುತ್ತೇವೆ. ಇನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೀಡಿರುವ ದೂರಿಗೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಪ್ರಕರಣದಲ್ಲಿ ಅನವಶ್ಯ ಗೊಂದಲಗಳಿಗೆ ಆಸ್ಪದ ನೀಡದಿರಲು ಸಿಐಡಿ ತನಿಖೆಗೆ ವಹಿಸಲಾಗಿದೆ. ಸಭಾಪತಿ ಮತ್ತು ಸರ್ಕಾರದ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದು ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಘಟನೆ ಹಿನ್ನೆಲೆ ಏನು?
ಬೆಳಗಾವಿ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಡಿ. 19 ರಂದು ಪರಿಷತ್ನಲ್ಲಿ ಅಮಿತ್ ಶಾ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಆಗ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಅಶ್ಲೀಲ ಪದ ಬಳಸಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗಂಭೀರ ಆರೋಪ ಮಾಡಿದ್ದರು. ಆದರೆ, ಈ ಆರೋಪವನ್ನು ಸಿ.ಟಿ. ರವಿ ನಿರಾಕರಿಸಿದ್ದರು.
ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಂಬಲಿಗರು ವಿಧಾನ ಪರಿಷತ್ ಕಾರಿಡಾರ್‌ನಲ್ಲೇ ಸಿ.ಟಿ. ರವಿ ಅವರ ಮೇಲೆ ಹಲ್ಲೆಗೂ ಯತ್ನಿಸಿದ್ದರು. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿ.ಟಿ. ರವಿ ವಿರುದ್ಧ ಅಶ್ಲೀಲ ಪದ ಬಳಸಿದ ಆರೋಪದ ಮೇಲೆ ದೂರು ದಾಖಲಿಸಿದ್ದರು. ಆಗ ಪೊಲೀಸರ ಸಿ.ಟಿ.ರವಿ ಅವರನ್ನು ಬಂಧಿಸಿ, ರಾತ್ರಿಯೆಲ್ಲಾ ವಿವಿಧ ಪ್ರದೇಶಗಳಲ್ಲಿ ಸುತ್ತಿಸಿದ್ದರು. ಇದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.