ಸಿಎಂ ಬದಲಾವಣೆ ಹೇಳಿಕೆ ನೀಡಿದ ಇಕ್ಬಾಲ್‌ ಹುಸೇನ್‌ಗೆ ನೊಟೀಸ್‌

ಮುಖ್ಯಮಂತ್ರಿಗಳ ಬದಲಾವಣೆ ಸಂಬಂಧ ನೀಡಿರುವ ಹೇಳಿಕೆಯಿಂದ ಪಕ್ಷದಲ್ಲಿ ಗೊಂದಲ ಮತ್ತು ಮುಜುಗರ ಉಂಟಾಗಿದೆ. ಒಂದು ವಾರದಲ್ಲಿ ನೊಟೀಸ್‌ಗೆ ಉತ್ತರ ನೀಡುವಂತೆ ಸೂಚನೆ.;

Update: 2025-07-01 14:58 GMT

ರಾಜ್ಯ ಕಾಂಗ್ರೆಸ್‌ನಲ್ಲಿ ಶಾಸಕರ ಶಿಸ್ತಿಗೆ ಆದ್ಯತೆ ನೀಡುವ ಕಾರ್ಯ ಆರಂಭಿಸಿದ್ದು, ಮುಖ್ಯಮಂತ್ರಿ ಬದಲಾವಣೆ ಕುರಿತು ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ಹಿನ್ನೆಲೆಯಲ್ಲಿ ಕೆಪಿಸಿಸಿ ನೊಟೀಸ್‌ ನೀಡಿದೆ. 

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ ಬದಲಾವಣೆ ಸಂಬಂಧ ನೀಡಿರುವ ಹೇಳಿಕೆಗೆ ಕಾರಣ ಕೇಳಿ ನೊಟೀಸ್‌ ನೀಡಲಾಗಿದೆ. ಮುಖ್ಯಮಂತ್ರಿಗಳ ಬದಲಾವಣೆ ವಿಷಯ ಸಂಬಂಧ ನೀಡಿರುವ ಹೇಳಿಕೆಯಿಂದ ಪಕ್ಷದಲ್ಲಿ ಗೊಂದಲ ಮತ್ತು ಮುಜುಗರ ಉಂಟು  ಮಾಡಲಾಗಿದೆ. ಅಲ್ಲದೇ, ಪಕ್ಷದ ಶಿಸ್ತು ಉಲ್ಲಂಘನೆ ಸಹ ಆಗಿದೆ. ಈ ಕಾರಣಕ್ಕಾಗಿ ಇಕ್ಬಾಲ್‌ ಹುಸೇನ್‌ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪಕ್ಷವು ನೀಡಿರುವ ನೊಟೀಸ್‌ ತಲುಪಿದ ಒಂದು ವಾರದಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ. 

ಈ ನಡುವೆ, ಇಕ್ಬಾಲ್ ಹುಸೇನ್ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಯಾವ ನಾಯಕತ್ವ ಬದಲಾವಣೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಬಲಪಡಿಸುತ್ತೇವೆ.  ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಸಹ ನಡೆದಿಲ್ಲ. ಪಕ್ಷವನ್ನು ಸಂಘಟಿಸುವ ಬಗ್ಗೆ ಮಾತ್ರ ಚರ್ಚೆ ನಡೆದಿದೆ. ಇದು ಸಂಘಟನೆಯ ವರ್ಷವಾಗಿದೆ ಎಂದು ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟವಾಗಿ ಸಂದೇಶ ನೀಡಿದ್ದಾರೆ ಎಂದರು. ಈ ಮೂಲಕ ಎರಡುವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆ ಗೊಂದಲಗಳಿಗೆ ಸ್ವತಃ ಡಿಕೆ ಶಿವಕುಮಾರ್ ತೆರೆ ಎಳೆಯುವ ಕೆಲಸ ಮಾಡಿದ್ದಾರೆ. 

ಪಕ್ಷದ ಯಾರೊಬ್ಬರು ಶಿಸ್ತು ಉಲ್ಲಂಘನೆ ಮಾಡುವಂತಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಯಾರೂ ಸಹ ಮಾಧ್ಯಮದ ಮುಂದೆ ಮಾತನಾಡುವ ಅಗತ್ಯ ಇಲ್ಲ. ಪಕ್ಷವನ್ನು ಸಂಘಟಿಸಬೇಕು. ಈ ಬಗ್ಗೆ ಯಾರೊಬ್ಬರು ಪ್ರತಿಕ್ರಿಯೆ ನೀಡಬಾರದು ಎಂದಿದ್ದಾರೆ. ಪಕ್ಷದ ಮುಖಂಡರಾದ ಬಾಲಕೃಷ್ಣ, ಬಿ.ಆರ್‌. ಪಾಟೀಲ್‌ ಸೇರಿದಂತೆ ಪಕ್ಷದ ಶಾಸಕರೇ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನು ರವಾನಿಸಲಾಗುತ್ತಿದೆ. ರಾಜಕೀಯವಾಗಿಯೂ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗೆ ಕಾಂಗ್ರೆಸ್‌ ನಾಯಕ ಹೇಳಿಕೆಯು ಅಸ್ತ್ರವಾಗಿ ಸಿಕ್ಕಂತಾಗಿದೆ. ಇದು ಸರ್ಕಾರಕ್ಕೆ ಮುಜಗರಕ್ಕೀಡು ಮಾಡುವಂತಾಗಿದೆ. ಹೀಗಾಗಿ ಸರ್ಕಾರ ಮತ್ತು ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಬಾರದು ಎಂದು ಕೆಪಿಸಿಸಿ ಸೂಚನೆ ನೀಡಿದೆ.  

Tags:    

Similar News