ಪರಿಶಿಷ್ಟರ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸುವುದು ತಪ್ಪಲ್ಲ: ಡಿ.ಕೆ. ಶಿವಕುಮಾರ್‌

Update: 2024-07-11 10:57 GMT

ಎಸ್‌ಸಿಪಿ-ಟಿಪಿಎಸ್‌ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಇದಕ್ಕೆ ನೊಟೀಸ್ ನೀಡಿರುವ ರಾಷ್ಟ್ರೀಯ ಆಯೋಗಕ್ಕೆ ನಾಚಿಕೆಯಾಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಎಸ್ ಸಿಪಿ ಟಿಎಸ್ ಪಿ ಅನುದಾನ ಬಳಸಿರುವುದಕ್ಕೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ನೋಟೀಸ್ ಜಾರಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. 

“ಇಡೀ ದೇಶದಲ್ಲಿ ಆಂಧ್ರ ಪ್ರದೇಶದ ನಂತರ ಕರ್ನಾಟಕದಲ್ಲಿ ನಾವು ಪರಿಶಿಷ್ಟರ ಕಲ್ಯಾಣಕ್ಕಾಗಿ ಪ್ರತ್ಯೇಕ ಅನುದಾನ ನೀಡಿ ಬಳಸಲು ಕಾಯ್ದೆ ತಂದಿದ್ದೇವೆ. ರಾಷ್ಟ್ರೀಯ ಆಯೋಗ ನೊಟೀಸ್ ಜಾರಿ ಮಾಡುವುದೇ ಆದರೆ ಅದು ಕೇಂದ್ರ ಸರ್ಕಾರಕ್ಕೆ ನೀಡಬೇಕು. ಈ ಅನುದಾನವನ್ನು ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಅವರಿಗೆ ವಿನಿಯೋಗಿಸುತ್ತಿದೆ. ಇದಕ್ಕೆ ನೊಟೀಸ್ ನೀಡಿರುವ ರಾಷ್ಟ್ರೀಯ ಆಯೋಗಕ್ಕೆ ನಾಚಿಕೆಯಾಗಬೇಕು. ಎಸ್ ಸಿಪಿ, ಟಿಎಸ್ ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಅಭಿಪ್ರಾಯಪಟ್ಟರು.

ವಂಚನೆ ನಡೆದಿರುವುದು ಸತ್ಯ

ವಾಲ್ಮೀಕಿ ನಿಗಮ ಹಗರಣದ ಪ್ರಕರಣದಲ್ಲಿ ವಂಚನೆ ನಡೆದಿರುವುದು ಸತ್ಯ. ಈ ಪ್ರಕರಣದ ಸತ್ಯಾಸತ್ಯತೆ ನಮಗೆ ಗೊತ್ತಿದೆ. ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿದ್ದು, ಅಕ್ರಮವಾಗಿ ವರ್ಗಾವಣೆಯಾಗಿದ್ದ ಹಣವನ್ನು ಈಗಾಗಲೇ ವಶಪಡಿಸಿಕೊಳ್ಳುತ್ತಿದೆ. ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಪ್ರಮಾಣದ ಅವ್ಯವಹಾರವಾದರೆ ಸಿಬಿಐ ತನಿಖೆ ಮಾಡುವ ಅಧಿಕಾರವಿದೆ. ಈ ಎಲ್ಲಾ ತನಿಖೆ ಮುಕ್ತಾಯದ ನಂತರ ಈ ತನಿಖೆಗೆ ಸರಿಯಾಗಿ ನಡೆದಿದೆಯೇ ಎಂದು ಇ.ಡಿ ಪರಾಮರ್ಶನೆ ಮಾಡಬಹುದಿತ್ತು. ಆದರೆ ಇ.ಡಿ ಯವರು ಯಾವುದೇ ದೂರು ಇಲ್ಲದಿದ್ದ ಕಾರಣ, ದಾಳಿ ಮಾಡುವ ಅಗತ್ಯವಿರಲಿಲ್ಲ.ಇ.ಡಿ ಅವರು ಯಾವ ರೀತಿ ತನಿಖೆ ಮಾಡುತ್ತಿದ್ದಾರೆ, ಯಾವ ಪ್ರಕ್ರಿಯೆ ಮೇಲೆ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಎಸ್ಐಟಿ ತನಿಖೆ ಮುಕ್ತವಾಗಿ ನಡೆಯುತ್ತಿದ್ದು, ತನಿಖೆಗೆ ಅಡಚಣೆಯಾಗಬಾರದು ಎಂಬ ಉದ್ದೇಶಕ್ಕೆ ಮಂತ್ರಿಗಳು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ. ನಾವು ಕೂಡ ಕ್ರಾಸ್ ಚೆಕ್ ಮಾಡಿದ್ದು, ಸಚಿವರು ಯಾವುದೇ ಸಹಿ ಮಾಡಿಲ್ಲ. ಅವರ ಹಸ್ತಕ್ಷೇಪವಿಲ್ಲ. ಕಾನೂನು ಪ್ರಕಾರ ತನಿಖೆ ನಡೆಯುತ್ತಿದ್ದು, ಈ ಮಧ್ಯೆ ಇ.ಡಿ ದಾಳಿ ಮಾಡಿದೆ. ನೋಡೋಣ ಏನು ಮಾಡುತ್ತಾರೆ” ಎಂದು ಉತ್ತರಿಸಿದರು.

ಈ ಹಿಂದೆ ಇ.ಡಿ ವಿರುದ್ಧ ಹೋರಾಟ ಮಾಡಿದ್ದೀರಿ, ಈ ದಾಳಿಯೂ ರಾಜಕೀಯ ಪ್ರೇರಿತ ಎಂದು ಅನಿಸುತ್ತದೆಯೇ ಎಂದು ಕೇಳಿದಾಗ, “ಅವರ ತನಿಖೆ ಮುಗಿಯಲಿ ನಂತರ ಮಾತನಾಡುತ್ತೇನೆ.”


Tags:    

Similar News