ದಲಿತರು, ಹಿಂದುಳಿದವರಿಗೆ ಹಿಂದುತ್ವದಲ್ಲಿ ಬೆಂಬಲವಿಲ್ಲ: ಕೆ ಎಸ್‌ ಈಶ್ವರಪ್ಪ ವಿಷಾದ

Update: 2024-10-08 11:57 GMT

ಹಿಂದುತ್ವ ರಕ್ಷಣೆಗೆ ಹೊಸ ಪಕ್ಷ ಕಟ್ಟುತ್ತೇವೆ ಎಂದು ಹೇಳುತ್ತಿರುವ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ, ಹಿಂದೂ ಸಮಾಜದಲ್ಲಿ ಹಿಂದುಳಿದವರು ಮತ್ತು ದಲಿತರಿಗೆ ಯಾವ ಬೆಂಬಲವೂ ಇಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮಂಗಳವಾರ(ಅ.8) ಗದಗಿನಲ್ಲಿ ಮಾಧ್ಯಮಗಳಿಗೆ ಮಾತನಾಡಿರುವ ಅವರು, ಹಿಂದೂ ಸಮಾಜದಲ್ಲಿ ದಲಿತ ಸಮುದಾಯ, ಹಿಂದುಳಿದ ಸಮುದಾಯಗಳಿಗೆ ಬೆಲೆ ಇಲ್ಲ, ಬೆಂಬಲವೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಿಂದುತ್ವದ ಹೆಸರಿನಲ್ಲಿ ನಾಲ್ಕು ದಶಕಗಳ ಕಾಲ ರಾಜಕಾರಣ ಮಾಡಿದ ಈಶ್ವರಪ್ಪ ಅವರನ್ನು ಎರಡು ವರ್ಷಗಳ ಹಿಂದೆ ಗುತ್ತಿಗೆದಾರರಿಂದ ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಅಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಅಲ್ಲದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ನಿರಾಕರಿಸಿ ಬೇರೊಬ್ಬರನ್ನು ಕಣಕ್ಕಿಳಿಸಲಾಗಿತ್ತು. ಜೊತೆಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಅವರ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂಬ ಬೇಡಿಕೆಗೂ ಬಿಜೆಪಿ ವರಿಷ್ಠರು ಸೊಪ್ಪು ಹಾಕಿರಲಿಲ್ಲ. ಆ ಹಿನ್ನೆಲೆಯಲ್ಲಿ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿ ವೈ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಪಕ್ಷದ ವಿರುದ್ಧ ಬಂಡಾಯ ಸಾರಿದ್ದ ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾ ಮಾಡಲಾಗಿತ್ತು.

ಆ ಎಲ್ಲಾ ಹಿನ್ನೆಲೆಯಲ್ಲಿ ಹಿಂದೂ ಸಮಾಜದ ಕುರಿತ ಈಶ್ವರಪ್ಪ ಹೇಳಿಕೆ ತೀವ್ರ ಕುತೂಹಲ ಕೆರಳಿಸಿದೆ.

ರಾಯಣ್ಣ-ಚೆನ್ನಮ್ಮ ಬ್ರಿಗೇಡ್ ಸಮಾವೇಶ

ಈ ನಡುವೆ ಬಿಜೆಪಿ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರೊಂದಿಗೆ ತಾವು ಕಟ್ಟುತ್ತಿರುವ ರಾಯಣ್ಣ-ಚೆನ್ನಮ್ಮ ಬ್ರಿಗೇಡ್ ಕುರಿತು ಮಾಹಿತಿ ನೀಡಿರುವ ಈಶ್ವರಪ್ಪ, ‘ರಾಯಣ್ಣ, ಚೆನ್ನಮ್ಮ ಬ್ರಿಗೇಡ್ಗೆ ಯಾವ ಹೆಸರು ಇಡಬೇಕು ಎಂದು ಚರ್ಚೆಯಾಗಿದೆ. ಇದೇ ತಿಂಗಳು 20ರಂದು ಬೃಹತ್ ಸಮಾವೇಶ ನಡೆಸಲು ಯೋಜಿಸಲಾಗಿದೆʼ ಎಂದರು.

ʼಸಂಘಟನೆ ಕಟ್ಟಲು ಸಾಕಷ್ಟು ಕರೆಗಳು ಬರುತ್ತಿದೆ. ಹೀಗಾಗಿ ಸಾಧು- ಸಂತರ ಮಾರ್ಗದರ್ಶನದಲ್ಲಿ ಯಾವ ಹೆಸರು ಇಡಬೇಕು. ಯಾವ ರೂಪದಲ್ಲಿ ಸಂಘಟನೆ ತೆಗೆದುಕೊಂಡು ಹೋಗಬೇಕು ಎನ್ನುವುದು ತೀರ್ಮಾನವಾಗಲಿದೆ. ಆ ಸಮಾವೇಶದ ಬಳಿಕವೇ ಮುಂದಿನ ಚಟುವಟಿಕೆ ಆರಂಭ ಮಾಡುತ್ತೇವೆ. ಬಸವನಗೌಡ ಪಾಟೀಲ್ ಯತ್ನಾಳ್ ಕೂಡ ಬರುತ್ತಾರೆ. ಹಾಗಂತ ಇದು ಈಶ್ವರಪ್ಪ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವ ಅಲ್ಲ. ಇದು ಸಾಧು- ಸಂತರ ನೇತೃತ್ವದಲ್ಲಿ ನಡೆಯುತ್ತದೆ. ಜಯ ಮೃತ್ಯುಂಜಯ ಸ್ವಾಮೀಜಿ ಕೂಡ ನಮಗೆ ಸಾಥ್ ನೀಡಲಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

Tags:    

Similar News