ಶಕ್ತಿ ಸೌಧದ ಶ್ವಾನ ಪಡೆಗೆ ಪ್ರತ್ಯೇಕ ಆಶ್ರಯ; ಇದು ವಿಧಾನಸೌಧದ ಇತಿಹಾಸದಲ್ಲೇ ವಿಶಿಷ್ಟ ಯೋಜನೆ
ವಿಧಾನಸೌಧದಲ್ಲಿ ಬೀಡುಬಿಟ್ಟಿರುವ ಶ್ವಾನಗಳ ಹಿಂಡು ಯಾವುದೇ ಸರ್ಕಾರ ಬದಲಾದರೂ ಅವುಗಳ ಸ್ವಚ್ಛಂದ ಓಡಾಟಕ್ಕೆ ಮಾತ್ರ ಅಂಕುಶ ಬಿದ್ದಿಲ್ಲ.;
ಆಡಳಿತದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧ ಪ್ರವೇಶಿಸಬೇಕಾದರೆ ಅನುಮತಿ, ಪಾಸ್ ಇರಬೇಕು, ಪೊಲೀಸರ ಪರಿಶೀಲನೆಗೆ ಒಳಪಡಬೇಕು, ಸಕಾರಣವಿಲ್ಲದೇ ಅನುಮತಿ ನಿಷಿದ್ಧವಿದೆ. ಆದರೆ, ಹಲವು ವರ್ಷಗಳಿಂದ ಶಕ್ತಿ ಸೌಧದ ಕಾಯಂ ನಿವಾಸಿಗಳಂತಿರುವ ಶ್ವಾನಗಳಿಗೆ ಮಾತ್ರ ಇದ್ಯಾವುದರ ಗೊಡವೆ ಇಲ್ಲ. ವಿಧಾನಸೌಧವನ್ನು ತಮ್ಮದೇ ಆಶ್ರಯ ತಾಣದಂತೆ ಭಾವಿಸಿ, ನೆಲೆ ಕಂಡುಕೊಂಡಿರುವ ಶ್ವಾನಗಳ ಹಿಂಡು ರಾಜಾರೋಷವಾಗಿ ಶಕ್ತಿಸೌಧದಲ್ಲಿ ವಿಹರಿಸುತ್ತವೆ. ನೆಲಮಹಡಿಯಿಂದ ಸಿಎಂ ಕಚೇರಿ ಇರುವ ಮೂರನೇ ಮಹಡಿವರೆಗೂ ಮೂಲೆ ಮೂಲೆಯೂ ಶ್ವಾನಗಳು ರಹದಾರಿಯಂತಿದೆ.
ಕಾರ್ಯಾಂಗ ಹಾಗೂ ಶಾಸಕಾಂಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಂದಿಗೂ ಅನೋನ್ಯವಾಗಿ ವರ್ತಿಸುವ ಕಾರಣ ಈ ಶ್ವಾನಗಳಿಗೆ ಸಿಬ್ಬಂದಿ ಬರುವಾಗ ತಿಂಡಿಗಳನ್ನು ತಂದು ಹಾಕುತ್ತಾರೆ. ಶಕ್ತಿಸೌಧದಲ್ಲಿ ಎಂತಹದ್ದೇ ಮಹತ್ವದ ಸಭೆಗಳು ನಡೆದರೂ, ರಾಜಕೀಯ ಕ್ಷಿಪ್ರ ಬೆಳವಣಿಗೆಗಳಾದರೂ ಶ್ವಾನಗಳು ಮಾತ್ರ ನಿರುಮ್ಮಳವಾಗಿ ಅಡ್ಡಾಡುತ್ತವೆ. ವಿಧಾನಸೌಧದ ಕ್ಯಾಂಟೀನ್ ನಲ್ಲೂ ಉಳಿದ ಆಹಾರವನ್ನು ನಾಯಿಗಳಿಗೆ ನೀಡುತ್ತವೆ. ಹೊಟ್ಟೆಯ ತುಂಬ ಉಂಡು ಗುಂಡನೆ ಇರುವ ಶ್ವಾನಗಳು ಇಡೀ ಶಕ್ತಿಸೌಧದ ಕಚೇರಿಗಳಿಗೆ ಲಿಫ್ಟ್ ನಲ್ಲಿಯೂ ಹೋಗುವ ಚಾಕಚಕ್ಯತೆ ಬೆಳೆಸಿಕೊಂಡಿವೆ. ಪ್ರಾಂಗಣ, ಬ್ಯಾಂಕ್ವೆಟ್ ಹಾಲ್ ಸೇರಿ ಎಲ್ಲೆಡೆ ವಿಶ್ರಾಂತಿ ಪಡೆಯಲಿವೆ. ಶಕ್ತಿಸೌಧಕ್ಕೆ ನಾನಾ ಕೆಲಸಗಳಿಗಾಗಿ ಸಾರ್ವಜನಿಕರು ಬರುವಾಗ ಅಡ್ಡಾದಿಡ್ಡಿ ಓಡಾಡಿದರೂ ಯಾರಿಗೂ ತೊಂದರೆ ನೀಡಿಲ್ಲ. ಶಕ್ತಿಸೌಧಕ್ಕೆ ಭದ್ರತೆ ಒದಗಿಸಿರುವ ಪೊಲೀಸರ ಜೊತೆಯಲ್ಲಿ ರಾತ್ರಿಯಲ್ಲಿ ವಿಧಾನಸೌಧದ ಕಾವಲು ಕಾಯುತ್ತಿವೆ.
ಶಾಸಕರು ವಾಕಿಂಗ್ ಮಾಡುವಾಗ ಅಡ್ಡಾದಿಡ್ಡಿ ಓಡಾಡುವುದರಿಂದ ಶ್ವಾನಗಳಿಗೆ ಕಡಿವಾಣ ಹಾಕುವಂತೆ ಹಲವರು ಸ್ಪೀಕರ್ ಅವರಿಗೆ ದೂರು ನೀಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಬಳಿಕ ಕ್ರಮದ ಮಾತು
ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಸುಪ್ರೀಂಕೋರ್ಟ್ ತೀರ್ಪು ಹೊರಡಿಸಿದ ಬಳಿಕ ವಿಧಾನಸಭೆಯಲ್ಲಿ ಬೀಡು ಬಿಟ್ಟಿರುವ ಶ್ವಾನಗಳಿಗೆ ಪ್ರತ್ಯೇಕ ಆಶ್ರಯ ಕಲ್ಪಿಸುವ ಕುರಿತು ಸಭೆ ನಡೆಸಿ ನಿರ್ಧರಿಸಲಾಗಿದೆ.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪರಿಷತ್ ಸಭಾಪತಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಪಾಲಿಕೆ ಅಧಿಕಾರಿಗಳು ಹಾಗೂ ವಿಧಾನಸೌದ ಡಿಜಿಪಿ ಜೊತೆ ಹಲವು ತಿಂಗಳಿಂದ ಸಭೆಗಳನ್ನು ನಡೆಸಿದ್ದು, ಇದೀಗ ಅಂತಿಮವಾಗಿ ನಾಯಿಗಳಿಗೆ ವಿಧಾನಸೌಧ ಆವರಣದಲ್ಲೇ ಆಶ್ರಯ ಕಲ್ಪಿಸುವ ತೀರ್ಮಾನಕ್ಕೆ ಬಂದಿದ್ದಾರೆ.
ಸ್ಥಳಾಂತರವಿಲ್ಲ, ಪ್ರತ್ಯೇಕ ವ್ಯವಸ್ಥೆ
ವಿಧಾನಸೌಧದಲ್ಲಿ ಒಟ್ಟು 53 ನಾಯಿಗಳಿದ್ದು, ಶಾಸಕರ ಒತ್ತಾಯದ ಮೇರೆಗೆ ಅವುಗಳನ್ನು ನಿರ್ದಿಷ್ಟ ಪ್ರದೇಶದಲ್ಲಿ ಆಶ್ರಯ ಒದಗಿಸಿ, ನಿರ್ವಹಣೆಯನ್ನು ಸರ್ಕಾರೇತರ ಸಂಸ್ಥೆಗೆ ವಹಿಸಲು ಸ್ಪೀಕರ್ ನಿರ್ಧರಿಸಿದ್ದಾರೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಆದೇಶಕ್ಕಾಗಿ ಕಾಯುತ್ತಿದ್ದಾರೆ.
ವಿಧಾನಸೌಧದಲ್ಲಿ ಇರುವ ಶ್ವಾನಗಳು ಎಲ್ಲರೊಂದಿಗೆ ಅನೋನ್ಯವಾಗಿವೆ. ಅವುಗಳನ್ನು ಬೇರೆ ಸ್ಥಳಾಂತರಿಸಲು ಆಗುವುದಿಲ್ಲ. ಅಲ್ಲದೇ ಬೇರೆ ನಾಯಿಗಳ ಜೊತೆ ಹೊಂದಿಕೊಳ್ಳುವುದಿಲ್ಲ. ಹಾಗಾಗಿ ಇಲ್ಲಿನ 53 ಶ್ವಾನಗಳಿಗೆ ಶಕ್ತಿಸೌಧದ ಆವರಣದಲ್ಲೇ ಸೂಕ್ತ ಜಾಗದಲ್ಲಿ ಆಶ್ರಯ ಕಲ್ಪಿಸಬೇಕು. ಎಲ್ಲೆಂದರಲ್ಲಿ ಓಡಾಡಲು ಬಿಡಬಾರದು ಎಂದು ಸ್ಪೀಕರ್ ಸೂಚಿಸಿದ್ದಾರೆ.
ಇರುವಷ್ಟು ದಿನ ಆಶ್ರಯ
ಪ್ರಾಣಿಗಳಿಗೆ ನಮಗಿಂತ ಹೆಚ್ಚು ಬದುಕುವ ಹಕ್ಕಿದೆ. ನಾಯಿಗಳು ಗರಿಷ್ಠ 15 ವರ್ಷ ಬದುಕಬಲ್ಲವು. ಇಲ್ಲಿರುವ ಶ್ವಾನಗಳು ಬದುಕಿರುವಷ್ಟು ದಿನ ಅವುಗಳ ನಿರ್ವಹಣೆ ನೋಡಿಕೊಳ್ಳಬೇಕು. ಕ್ರಮೇಣ ಅವುಗಳ ಸಂತತಿ ಕ್ಷೀಣಿಸಿದ ಬಳಿಕ ಶಕ್ತಿಸೌಧವನ್ನು ಶ್ವಾನ ಮುಕ್ತ ಮಾಡಬಹುದು ಎಂಬುದು ಸ್ಪೀಕರ್ ಅವರ ಅಭಿಪ್ರಾಯವಾಗಿದೆ.
ಶ್ವಾನಗಳನ್ನು ಹೊರಹಾಕಲು ಸಾಧ್ಯವೇ ಇಲ್ಲ
ಕಳೆದ ಫೆ. 4 ರಂದು ಕೂಡ ಸಭೆ ನಡೆಸಿದ್ದ ಸ್ಪೀಕರ್ ಯು.ಟಿ ಖಾದರ್ ಅವರು ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮತ್ತು ಅವುಗಳ ರಕ್ಷಣೆ ಕುರಿತು ಚರ್ಚಿಸಿದ್ದರು.
ಇಲ್ಲಿನ ವಾತಾವರಣಕ್ಕೆ ಅವು ಯಾವ ರೀತಿ ಹೊಂದಿಕೊಂಡಿವೆ ಎಂಬುದನ್ನು ಸ್ಪೀಕರ್ ಅವರು ವಿವರಿಸಿದ್ದರು. "ನಾವು ವಿಧಾನಸೌಧದಿಂದ ಶಾಸಕರನ್ನು ಬೇಕಾದರೆ ಹೊರಕಳುಹಿಸಬಹುದು. ಆದರೆ, ಶ್ವಾನಗಳನ್ನು ಹೊರಹಾಕಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಅವು ಹೊಂದಿಕೊಂಡಿವೆ ಎಂದು ಹೇಳಿದ್ದರು.
ಬಿಜೆಪಿ ಸರ್ಕಾರದಲ್ಲೂ ಕಡಿವಾಣಕ್ಕೆ ಸರ್ಕಸ್
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆಯೂ ವಿಧಾನಸೌಧದಲ್ಲಿ ಶ್ವಾನಗಳ ಉಪಟಳ ತಡೆಗೆ ಸರ್ಕಸ್ ನಡೆಸಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಗೆ ಆಗಮಿಸಿದ್ದ ವೇಳೆ ಶ್ವಾನಗಳು ಎಲ್ಲೆಂದರಲ್ಲಿ ಓಡಾಡುತ್ತಿದ್ದವು. ಅವುಗಳನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ.
ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲೂ ಬಿಜೆಪಿ ಶಾಸಕರಾದ ಡಾ.ಭರತ್ ಶೆಟ್ಟಿ, ಎಸ್.ಸುರೇಶ್ ಕುಮಾರ್, ಡಾ.ಅಶ್ವತ್ಥನಾರಾಯಣ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಸೇರಿದಂತೆ ಹಲವರು ಸದನದಲ್ಲೂ ಶ್ವಾನಗಳ ಉಪಟಳದ ಕುರಿತು ಚರ್ಚಿಸಿ, ನಿಯಂತ್ರಣಕ್ಕೆ ಒತ್ತಾಯಿಸಿದ್ದರು.
ಸ್ಥಳಾಂತರ ಬೇಡವೆಂದಿದ್ದ ತಜ್ಞರು
ಇಲ್ಲಿಯ ಶ್ವಾನಗಳು ಬೇರೆ ಪರಿಸರಕ್ಕೆ ಹೊಂದಿಕೊಳ್ಳುವುದಿಲ್ಲ. ಹಾಗಾಗಿ ಇಲ್ಲಿಯೇ ಉಳಿಸಿಕೊಂಡು ಸಂತಾನಹರಣ ಚಿಕಿತ್ಸೆ, ರೇಬಿಸ್ ಔಷಧ ನೀಡಬೇಕು ಎಂದು ಸಲಹೆ ನೀಡಿದ್ದರು.
ಅದರಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. 53 ನಾಯಿಗಳು ಇನ್ನು ಕೆಲ ವರ್ಷ ಇರಬಹುದು, ಅವುಗಳ ಜೀವಿತಾವಧಿ ಮುಗಿದ ಬಳಿಕ ಅಥವಾ ಮೃತಪಟ್ಟ ಬಳಿಕ ವಿಧಾನಸೌಧವನ್ನು ಶ್ವಾನ ಮುಕ್ತ ಮಾಡಬಹುದು ಎಂದು ಹೇಳಿದ್ದರು.
ಒಟ್ಟಾರೆ ಈಗ ವಿಧಾನಸೌಧದ ಶ್ವಾನಗಳಿಗಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡುತ್ತಿದ್ದು, ನಿರ್ದಿಷ್ಟ ಪ್ರದೇಶದಲ್ಲಿ ಅವುಗಳನ್ನು ಕೂಡಿ ಹಾಕಿ, ನಿರ್ವಹಣೆ ನೋಡಿಕೊಳ್ಳಲು ತೀರ್ಮಾನಿಸಲಾಗಿದೆ.