ರಾಜೀನಾಮೆ ಕೊಟ್ಟಿಲ್ಲ; ವೈರಲ್ ಆದ ಪತ್ರದ ಬಗ್ಗೆ ಬಸವರಾಜ್ ಹೊರಟ್ಟಿ ಸ್ಪಷ್ಟನೆ!
ಹೊರಟ್ಟಿ ಅವರು ರಾಜೀನಾಮೆ ಪತ್ರವನ್ನು ವಿಧಾನ ಪರಿಷತ್ ಉಪಸಭಾಪತಿ ಡಾ. ಪ್ರಾಣೇಶ್ ಅವರಿಗೆ ರವಾನಿಸಿದ್ದಾರೆ ಎನ್ನಲಾಗಿತ್ತು. ಮಾರ್ಚ್ 18ರಂದೇ ಅವರು ರಾಜೀನಾಮೆ ಪತ್ರ ಕಳಿಸಿದ್ದಾಗಿ ಹೇಳಲಾಗಿತ್ತು.;
ತಮ್ಮ ರಾಜೀನಾಮೆ ಪತ್ರ ವೈರಲ್ ಆಗುತ್ತಿರುವ ಬೆನ್ನಲ್ಲೇ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪತ್ರ ಬರೆದಿಟ್ಟಿದ್ದು ಹೌದು, ಆದರೆ, ಸಹಿ ಹಾಕಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
"ಟೈಪಿಸ್ಟ್ ಕಡೆಯಿಂದ ಟೈಪ್ ಮಾಡಿಸಿಟ್ಟಿದ್ದ ರಾಜೀನಾಮೆ ಪತ್ರವನ್ನು ನಾನು ಲಾಕರ್‌ನಲ್ಲಿಟ್ಟಿದ್ದೆ. ಆದರೆ ನನ್ನ ಆಪ್ತ ಸಹಾಯಕ ಆ ಪತ್ರವನ್ನು ವೈರಲ್ ಮಾಡಿದ್ದಾನೆ. ನಾನಿನ್ನೂ ಅಧಿಕೃತವಾಗಿ ರಾಜೀನಾಮೆ ನೀಡಿಲ್ಲ.." ಎಂದು ಬಸವರಾಜ್ ಹೊರಟ್ಟಿ ಸ್ಪಷ್ಟೀಕರಣ ನೀಡಿದ್ದಾರೆ.
ವೈರಲ್ ಆದ ಪತ್ರದಲ್ಲೇನಿತ್ತು?
ಹೊರಟ್ಟಿ ಅವರು ರಾಜೀನಾಮೆ ಪತ್ರವನ್ನು ವಿಧಾನ ಪರಿಷತ್ ಉಪಸಭಾಪತಿ ಡಾ. ಪ್ರಾಣೇಶ್ ಅವರಿಗೆ ರವಾನಿಸಿದ್ದಾರೆ ಎನ್ನಲಾಗಿತ್ತು. ಮಾರ್ಚ್ 18ರಂದೇ ಅವರು ರಾಜೀನಾಮೆ ಪತ್ರ ಕಳಿಸಿದ್ದಾಗಿ ಹೇಳಲಾಗಿತ್ತು. , "ವೈಯಕ್ತಿಕ ಕಾರಣಗಳಿಂದ ನಾನು ಮೇ 1, 2025ರಿಂದ ಸಭಾಪತಿ ಹುದ್ದೆಯನ್ನು ಹೊಂದುವುದಿಲ್ಲ. ಹೀಗಾಗಿ ಮಾರ್ಚ್ 31ರೊಳಗೆ ರಾಜೀನಾಮೆ ಅಂಗೀಕರಿಸಿ, ಹುದ್ದೆಯಿಂದ ಮುಕ್ತಿಗೊಳಿಸಬೇಕಾಗಿ ವಿನಂತಿಸುತ್ತೇನೆ," ಎಂದು ಪತ್ರದಲ್ಲಿ ಬರೆಯಲಾಗಿದೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೊರಟ್ಟಿ, “ಸದನದೊಳಗೆ ಸದಸ್ಯರ ವರ್ತನೆಗಳಿಂದ ನಾನು ಬೇಸರಗೊಂಡಿದ್ದೇನೆ. ಭಿತ್ತಿ ಪತ್ರಗಳ ಪ್ರದರ್ಶನ, ಸಭಾಪತಿ ಮಾತಿಗೆ ಅಗೌರವ ಅಸಹನೀಯವಾಗಿದೆ. ಹೀಗಿರುವಾಗ ಸದನದಲ್ಲಿ ನನ್ನ ಪಾತ್ರಕ್ಕೆ ಅರ್ಥವಿಲ್ಲ ಅನ್ನಿಸುತ್ತಿದೆ,” ಎಂದು ಹೇಳಿದ್ದರು.
“ನಾನು 45 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ಹುದ್ದೆ ತ್ಯಜಿಸಿ ಶಿಕ್ಷಕ ವೃತ್ತಿಗೆ ಮರಳುವ ಚಿಂತೆಯಲ್ಲಿದ್ದೇನೆ,” ಎಂದು ಅವರು ಹೇಳಿದರು.