ಗ್ರಾಮ ಪಂಚಾಯಿತಿ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ
ಅಧಿಕೃತ ಪ್ರಕಟಣೆ ಬರುವವರೆಗೂ ಯಾವುದೇ ಊಹಾಪೋಹಗಳಿಗೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಮನ್ನಣೆ ನೀಡಬಾರದು ಎಂದು ಆಯೋಗವು ಸಾರ್ವಜನಿಕರಲ್ಲಿ ವಿನಂತಿಸಿದೆ.;
ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯು ಸಂಪೂರ್ಣವಾಗಿ ಸುಳ್ಳು ಎಂದು ರಾಜ್ಯ ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ಸಾರ್ವಜನಿಕರು ಇಂತಹ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಆಯೋಗವು ಮನವಿ ಮಾಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು, "ರಾಜ್ಯ ಚುನಾವಣಾ ಆಯೋಗವು ಈವರೆಗೂ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೇಳಾಪಟ್ಟಿಯು ನಕಲಿಯಾಗಿದ್ದು, ಸಾರ್ವಜನಿಕರು ಇದನ್ನು ನಂಬಬಾರದು" ಎಂದು ತಿಳಿಸಿದ್ದಾರೆ.
ಚುನಾವಣಾ ವೇಳಾಪಟ್ಟಿಯನ್ನು ಘೋಷಿಸುವ ಮೊದಲು, ರಾಜ್ಯ ಚುನಾವಣಾ ಆಯೋಗವು ಅಧಿಕೃತವಾಗಿ ಪತ್ರಿಕಾಗೋಷ್ಠಿಯನ್ನು ಕರೆದು, ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುತ್ತದೆ. ಆದ್ದರಿಂದ, ಅಧಿಕೃತ ಪ್ರಕಟಣೆ ಬರುವವರೆಗೂ ಯಾವುದೇ ಊಹಾಪೋಹಗಳಿಗೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಮನ್ನಣೆ ನೀಡಬಾರದು ಎಂದು ಆಯೋಗವು ಸಾರ್ವಜನಿಕರಲ್ಲಿ ವಿನಂತಿಸಿದೆ.