Karnataka By-Election | ಚನ್ನಪಟ್ಟಣದಲ್ಲಿ ನಿಖಿಲ್‌ ಸೋಲು; ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

ನಾನು ನಿಖಿಲ್‌ ಅಭಿಮಾನಿ. ನನ್ನ ಸಾವಿಗೆ ನಾನೇ ಕಾರಣ, ಜೈ ಜೆಡಿಎಸ್‌ ಎಂದು ಬರೆದಿಟ್ಟು ವಿಷ ಸೇವಿಸಿದ್ದಾರೆ. ಚನ್ನಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.;

Update: 2024-11-24 06:26 GMT

ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್‌ -ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಸೋಲಿನಿಂದ ಮನನೊಂದ ಜೆಡಿಎಸ್‌ ಕಾರ್ಯಕರ್ತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ತಾಲೂಕಿನ ಕೂಡ್ಲೂರು ಸಮೀಪದ ಶ್ರೀರಾಮಪುರ ನಿವಾಸಿ ಮಂಜುನಾಥ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಮಂಜುನಾಥ್‌ ಅವರನ್ನು ಮಂಡ್ಯದ ಮೀಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾನು ನಿಖಿಲ್‌ ಅಭಿಮಾನಿ. ನನ್ನ ಸಾವಿಗೆ ನಾನೇ ಕಾರಣ, ಜೈ ಜೆಡಿಎಸ್‌ ಎಂದು ಬರೆದಿಟ್ಟು ವಿಷ ಸೇವಿಸಿದ್ದಾರೆ. ಚನ್ನಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಉಪಚುನಾವಣೆಗೆ ತೀವ್ರ ಕುತೂಹಲ ಕೆರಳಿಸಿತ್ತು. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಿಖಿಲ್‌ ಕುಮಾರಸ್ವಾಮಿ ಅವರನ್ನೇ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿತ್ತು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಆರ್‌.ಅಶೋಕ್‌, ಬಿ.ವೈ.ವಿಜಯೇಂದ್ರ ಸೇರಿದಂತೆ ಘಟಾನುಘಟಿ ನಾಯಕರು ನಿಖಿಲ್‌ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ್ದರು. ಆದರೂ, ನಿಖಿಲ್‌ ಕುಮಾರಸ್ವಾಮಿ ಸೋಲನುಭವಿಸಿದ ಕಾರಣ ಮನನೊಂದು ಜೆಡಿಎಸ್‌ ಕಾರ್ಯಕರ್ತನಾಗಿದ್ದ ಮಂಜುನಾಥ್‌ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಮಂಜುನಾಥ್‌ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಎದುರು 25,515 ಮತಗಳ ಅಂತರದಿಂದ ನಿಖಿಲ್‌ ಕುಮಾರಸ್ವಾಮಿ ಸೋಲು ಕಂಡಿದ್ದರು. ಸಿ.ಪಿ. ಯೋಗೇಶ್ವರ್ ಅವರು 1,12,642 ಮತ ಪಡೆದರೆ, ಎನ್ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ 87,229 ಮತಗಳನ್ನು ಮಾತ್ರ ಪಡೆದಿದ್ದರು.

Tags:    

Similar News