ಗೌಡರ ಕುಟುಂಬದ ಕುಡಿ ನಿಖಿಲ್ ಸತತ ಸೋಲು; ಒಕ್ಕಲಿಗ ನಾಯಕತ್ವದ ಆಸೆಗೆ ತಣ್ಣೀರೆರೆಚಿದ ಮತದಾರ
ಚನ್ನಪಟ್ಟಣದಲ್ಲಿ ಮೊಮ್ಮಗನನ್ನು ಗೆಲ್ಲಿಸಲೇಬೇಕೆಂದು ಹಠ ತೊಟ್ಟಿದ್ದ ದೇವೇಗೌಡರು ಚುನಾವಣಾ ಭಾಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಸೋಲಿಸಿ ಗರ್ವಭಂಗ ಮಾಡುವ ಸವಾಲು ಹಾಕಿದ್ದರು. ಈಗ ದೇವೇಗೌಡರ ಕುಟುಂಬದ ಗರ್ವಭಂಗವಂತಾಗಿದೆ ಎಂದು ಕಾಂಗ್ರೆಸ್ ಮೂದಲಿಸಿದೆ.
ಸತತ ಎರಡು ಚುನಾವಣೆಗಳಲ್ಲಿ ಸೋಲನುಭವಿಸಿ ಚುನಾವಣಾ ರಾಜಕೀಯದಲ್ಲಿ ಮೆರೆಯಬೇಕೆಂದಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಕುಡಿ ನಿಖಿಲ್ ಕುಮಾರಸ್ವಾಮಿ, ಮೂರನೆಯ ಬಾರಿಯೂ ಅಪಯಶಸ್ಸು ಕಂಡಿದ್ದಾರೆ. ಚನ್ನಪಟ್ಟಣ ಕ್ಷೇತ್ರವನ್ನು ಸುಪರ್ದಿಯಲ್ಲಿಟ್ಟುಕೊಳ್ಳಬೇಕೆಂಬ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕನಸು ಕನಸಾಗಿಯೇ ಉಳಿದಿದೆ.
ಹಳೇಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯದ ಈ ಕ್ಷೇತ್ರ ಕುಮಾರಸ್ವಾಮಿ ಹಿಡಿತದಿಂದ ತಪ್ಪಿಹೋಗಿದೆ. ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳನ್ನು ಸುಪರ್ದಿಯಲ್ಲಿಟ್ಟುಕೊಂಡಿದ್ದ ಕುಟುಂಬಕ್ಕೆ ಚನ್ನಪಟ್ಟಣ ಕಾಂಗ್ರೆಸ್ ಕೈವಶವಾಗಿರುವುದು ಉತ್ತರವಿಲ್ಲದ ಪ್ರಶ್ನೆಯಾಗಿದೆ. ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನೇತಾರನಾಗಿದ್ದ ಎಚ್.ಡಿ. ದೇವೇಗೌಡ ಮತ್ತವರ ಕುಟುಂಬದ ವಿರುದ್ಧ ತೊಡೆತಟ್ಟಿರುವ ಡಿ.ಕೆ. ಶಿವಕುಮಾರ್ ಒಕ್ಕಲಿಗರ ಪ್ರಬಲ ನಾಯಕನಾಗುವತ್ತ ಹೆಜ್ಜೆ ಹಾಕುತ್ತಿರುವುದು ನಿಖಿಲ್ ಸೋಲಿನಿಂದ ದೃಢಪಟ್ಟಿದೆ.
ಗರ್ವಭಂಗ
ಚನ್ನಪಟ್ಟಣದಲ್ಲಿ ಮೊಮ್ಮಗನನ್ನು ಗೆಲ್ಲಿಸಲೇಬೇಕೆಂದು ಹಠ ತೊಟ್ಟಿದ್ದ ಎಚ್.ಡಿ.ದೇವೇಗೌಡರು ಚುನಾವಣಾ ಭಾಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಸೋಲಿಸಿ ಗರ್ವಭಂಗ ಮಾಡುವ ಸವಾಲು ಹಾಕಿದ್ದರು. ಆದರೆ, ಅದು ಸಾಧ್ಯವಾಗದೆ ದೇವೇಗೌಡರ ಕುಟುಂಬದ ಗರ್ವಭಂಗವಾದಂತಾಗಿದೆ ಎಂದು ಕಾಂಗ್ರೆಸ್ ಮೂದಲಿಸಿದೆ.
ದೇವೇಗೌಡರು ಮತ್ತು ಡಿ.ಕೆ. ಶಿವಕುಮಾರ್ ಕುಟುಂಬಗಳ ರಾಜಕೀಯ ಜಿದ್ದಾಜಿದ್ದಿಯಲ್ಲಿ ಈ ಬಾರಿ ನಿಖಿಲ್ ಕುಮಾರಸ್ವಾಮಿ ಮತ್ತೆ ಬಲಿಪಶುವಾಗಿದ್ದಾರೆ. ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಟ್ಟು ಕೇಂದ್ರ ರಾಜಕೀಯಕ್ಕೆ ಧುಮುಕಿ ಮಂತ್ರಿಯಾದ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಸೋಲಿಗೆ ಪ್ರತೀಕಾರ ಸಾಧಿಸಲು ಕಾದಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ರಹದಾರಿ ಮಾಡಿಕೊಟ್ಟರು. ಸೋದರ ಡಿ.ಕೆ. ಸುರೇಶ್ ಅವರನ್ನು ಶಾಸಕನಾಗಿ ಮಾಡಬೇಕೆಂಬ ಆಸೆಯಿದ್ದರೂ, ಅದನ್ನು ಅದುಮಿಕೊಂಡು ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲ್ಲಿಸುವ ಮೂಲಕ ರಾಜಕೀಯ ಹಗೆಯನ್ನು ತೀರಿಸಿಕೊಂಡಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಸತತ ಮೂರು ಬಾರಿ ಸ್ಪರ್ಧಿಸಿ ಸೋಲನುಭವಿಸಿದ್ದ ಯೋಗೇಶ್ವರ್ ಅವರದೇ ಆದ ಶಕ್ತಿ ಹಾಗೂ ಡಿ.ಕೆ. ಶಿವಕುಮಾರ್ ಶಕ್ತಿ ಸೇರಿಕೊಂಡು ನಿಖಿಲ್ ಅವರನ್ನು ಭಾರೀ ಅಂತರದಿಂದ ಮಣಿಸಲು ಸಾಧ್ಯವಾಯಿತು.
ದಾಯಾದಿ ಕಲಹ
ದೇವೇಗೌಡರ ಕುಟುಂಬ ರಾಜಕಾರಣದಲ್ಲಿ ರಾಮನಗರ, ಚನ್ನಪಟ್ಟಣ ಎಚ್.ಡಿ. ಕುಮಾರಸ್ವಾಮಿ ಅವರಿಗೆ, ಹಾಸನ ಅವರ ಹಿರಿಯ ಸೋದರ ಎಚ್.ಡಿ. ರೇವಣ್ಣ ಅವರಿಗೆ ಎಂಬ ಮಾತು ಜನಜನಿತ. ಹಾಸನ ರಿಪಬ್ಲಿಕ್ ನಾಯಕ ಎಂದೇ ಹೆಸರಾದ ರೇವಣ್ಣ ಮತ್ತವರ ಕುಟುಂಬ ಮತ್ತು ಕುಮಾರಸ್ವಾಮಿ ಕುಟುಂಬದ ನಡುವಿನ ಮುನಿಸು ಆಗಾಗ ಸ್ಫೋಟಿಸುತ್ತಲೇ ಇತ್ತು.
ರೇವಣ್ಣ ಅವರ ಹಿರಿಯ ಪುತ್ರ ಪ್ರಜ್ವಲ್ ರೇವಣ್ಣ ೨೦೧೯ರಲ್ಲಿ ಅಜ್ಜ ಎಚ್.ಡಿ. ದೇವೇಗೌಡರ ತವರು ಕ್ಷೇತ್ರ ಹಾಸನದಿಂದ ಚುನಾವಣಾ ಕಣಕ್ಕೆ ಧುಮುಕಿದಾಗ (ದೇವೇಗೌಡರು ಆ ಬಾರಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋತರು) ಕುಮಾರಸ್ವಾಮಿ ಕುಟುಂಬವೂ ನಿಖಲ್‌ನನ್ನು ಚುನಾವಣಾ ಕಣಕ್ಕಿಳಿಯುವಂತೆ ಅವಕಾಶ ಕಲ್ಪಿಸಿತು. ರೇವಣ್ಣ, ಕುಮಾರಸ್ವಾಮಿ ಕುಟುಂಬಗಳ ಒತ್ತಡಗಳಿಗೆ ದೇವೇಗೌಡರು ಮಣಿದು ಈ ನಿರ್ಧಾರಕ್ಕೆ ಬಂದಿದ್ದರು. ಅಂತೆಯೇ ನಿಖಿಲ್ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾದರು.
ಆದರೆ, ದೇವೇಗೌಡರ ಪಾರುಪತ್ಯ ಹಾಸನದಲ್ಲಿ ಪ್ರಜ್ವಲ್ ಗೆದ್ದು ಬೀಗಿದರು. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಆ ಅವಧಿಯಲ್ಲಿ ನಿಖಲ್ ಪರ ಕಾಂಗ್ರೆಸ್ ಕೆಲಸ ಮಾಡುತ್ತದೆ ಎಂಬ ನಂಬಿಕೆ ಹುಸಿಯಾಗಿತ್ತು. ಮಾಜಿ ಸಂಸದ, ಚಿತ್ರನಟ ಅಂಬರೀಶ್ ನಿಧನದ ಬಳಿಕ ಅವರ ಪತ್ನಿ ಚಿತ್ರನಟಿ ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಚಿತ್ರಣ ಬದಲಾಯಿತು. ಅನುಕಂಪದ ಅಲೆ, ಕಾಂಗ್ರೆಸ್‌ನ ಅಘೋಷಿತ ಬೆಂಬಲದ ನಡುವೆ ನಿಖಿಲ್ ಅಬ್ಬರ ತಣ್ಣಗಾಯಿತು.
ಬಳಿಕ ೨೦೨೩ರ ವಿದಾನಸಭಾ ಚುನಾವನೆಯಲ್ಲಿ ತಾಯಿ ಅನಿತಾ ಕುಮಾರಸ್ವಾಮಿ ಅವರು ಪ್ರತಿನಿಧಿಸುತ್ತಿದ್ದ ರಾಮನಗರ ಕ್ಷೇತ್ರದ ಮೂಲಕ ವಿಧಾನಸಭೆ ಪ್ರವೇಶಿಸಲು ಹವಣಿಸಿದರು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಎಚ್.ಎ. ಇಕ್ಬಾಲ್ ಹುಸೇನ್ ಅವರ ಎದುರು, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಣೆದ ತಂತ್ರಕ್ಕೆ ಸೋಲನುಭವಿಸಿದರು.
ಶತಾಯಗತಾಯ ನಿಖಿಲ್‌ನನ್ನು ವಿಧಾನಸಭೆಗೆ ಕಳುಹಿಸಲೇಬೇಕೆಂಬ ಹಠದಿಂದ ಲೋಕಸಭಾ ಸದಸ್ಯನಾದ ಬಳಿಕ ತೆರವಾದ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದರು. ಆದರೆ, ಒಂದು ಕಡೆ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸ್ವಂತ ಶಕ್ತಿಯನ್ನೂ ಹೊಂದಿರುವ "ಹಳೆಯ ಹುಲಿ" ಸಿ.ಪಿ. ಯೋಗೇಶ್ವರ ಮುಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಅವರ ಪ್ರಭಾವ ಕಳೆಗುಂದುವಂತಾಯಿತು. ಅಬ್ಬರದ ನಡುವೆ ನಿಖಿಲ್ ವಿಧಾನಸಭೆ ಪ್ರವೇಶಕ್ಕೆ ಇನ್ನೂ ಕಾಯುವಂತಾಗಿದೆ.
ಲೈಂಗಿಕ ಹಗರಣದಲ್ಲಿ ಸಿಲುಕಿ ಜೈಲು ಪಾಲಾಗಿರುವ ದಾಯಾದಿ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಇಬ್ಬರೂ ಲೋಕಸಭೆ ಮತ್ತು ವಿಧಾನಪರಿಷತ್ ಪಡಸಾಲೆ ಪ್ರವೇಶಿಸಿದವರೇ. ರೇವಣ್ಣ ಮಕ್ಕಳಾದ ಪ್ರಜ್ವಲ್ ಮತ್ತು ಸೂರಜ್ ಚುನಾವಣಾ ರಾಜಕಾರಣದಲ್ಲಿ ಒಂದು ಹಂತದ ಯಶಸ್ಸು ಪಡೆದರೂ, ಲೈಂಗಿಕ ಹಗರಣದ ಕಾರಣಕ್ಕೆ ಜೈಲು ಸೇರುವಂತಾಗಿ ದೇವೇಗೌಡರ ವಂಶದ ಮೂರನೇ ತಲೆಮಾರು ರಾಜಕಾರಣದಿಂದ ಕ್ರಮೇಣ ಮರೆಯಾಗುವ ಹಂತದಲ್ಲಿದೆ. ಆ ಸಂದರ್ಭದಲ್ಲಿ ನಿಖಿಲ್ ಗೆಲ್ಲುವಂತೆ ಮಾಡಿ, ವಂಶದ ಮೂರನೇ ಕುಡಿ ಜೆಡಿಎಸ್ ಮಾತ್ರವಲ್ಲದೆ ಹಳೇಮೈಸೂರು ಭಾಗದ ಭವಿಷ್ಯದ ಒಕ್ಕಲಿಗ ನಾಯಕನಾಗಿ ರೂಪಿಸುವ ಕುಮಾರಸ್ವಾಮಿ ಅವರ ಆಸೆ ಸದ್ಯಕ್ಕೆ ಕಮರಿಹೋಗಿದೆ. ಆ ಮೂಲಕ ದೇವೇಗೌಡ ಕುಟುಂಬದ ದಾಯಾದಿ ಕಲಹದಲ್ಲಿ ಯಾರೂ ಯಶಸ್ಸಿನ ಮೆಟ್ಟಿಲು ಹತ್ತಲಾರದೆ ಪರದಾಡುವಂತಾಗಿದೆ.
ಸೋಲು ಸ್ವೀಕಾರ
ಅಜ್ಜ ದೇವೇಗೌಡರ ಹಾಗೂ ಅಪ್ಪ ಕುಮಾರಸ್ವಾಮಿ ಅವರ ಗರಡಿಯಲ್ಲೇ ಪಳಗಿದರೂ, ರಾಜಕೀಯವಾಗಿ ಅವರಿಗಿದ್ದ ತಂತ್ರಗಾರಿಕೆಯನ್ನು ಪ್ರದರ್ಶಿಸಲು ಜನತಾದಳದ ಯುವನಾಯಕ ನಿಖಿಲ್ ಗೆ ಸಾಧ್ಯವಾಗಿಲ್ಲ.
ಲೈಂಗಿಕ ಹಗರಣಗಳ ಬಳಿಕ ಸಾರ್ವಜನಿಕವಾಗಿ ಅಷ್ಟೇನೂ ಕಾಣಿಸಿಕೊಳ್ಳದ ಎಚ್.ಡಿ. ರೇವಣ್ಣ ಹಾಗೂ ಕೇಂದ್ರ ರಾಜಕಾರಣದತ್ತ ಮುಖಮಾಡಿರುವ ಕುಮಾರಸ್ವಾಮಿ ನಡುವೆ ನಿಖಿಲ್ ಅವರನ್ನು ಜೆಡಿಎಸ್ ರಾಜ್ಯನಾಯಕನಾಗಿ ಮಾಡುವ ಆಸೆಯೂ ಕುಟುಂಬಕ್ಕಿತ್ತು. ಆದರೆ, ಪ್ರತಿ ಚುನಾವಣೆಯಲ್ಲಿ ಹಾಗೂ ಅಧಿಕಾರದಲ್ಲಿ ದೇವೇಗೌಡರ ಕುಟುಂಬ ಸದಸ್ಯರಿಗಿರುವ ಅವಕಾಶ ಒಕ್ಕಲಿಗ ಮುಖಂಡರೂ ಸೇರಿದಂತೆ ಇತರ ನಾಯಕರಿಗೆ ಇಲ್ಲದೇ ಇರುವುದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಜೆಡಿಎಸ್ ಪಕ್ಷದ ನಾಯಕತ್ವಕ್ಕೆ ನಿಖಿಲ್ ಹತ್ತಿರವಾಗುವುದನ್ನು ತಡೆಯಲು ಕೆಲ ನಾಯಕರು ಶ್ರಮಿಸುತ್ತಲೇ ಇದ್ದರು. ಇದೂ ಚನ್ನಪಟ್ಟಣದಲ್ಲಿ ಸೋಲಿಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
"ಈ ಸೋಲನ್ನು ನಾನು ಸ್ವೀಕಾರ ಮಾಡ್ತೇನೆ. ಆದರೆ ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಹೋರಾಟ ಮಾಡುತ್ತೇನೆ," ಎಂದು ನಿಖಿಲ್ ಸೋಲಿನ ಬಳಿಕ ಶಪಥತೊಟ್ಟಿದ್ದಾರೆ. ಆದರೆ, ಮತ್ತೆ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆವರೆಗೆ ಕಾಯಬೇಕು. ಮುಂಬರುವ ದಿನಗಳಲ್ಲಿ ಅವಕಾಶ ದೊರೆತಾಗ ವಿಧಾನಪರಿಷತ್ ಪ್ರವೇಸಿಸುವುದು ಒಂದೇ ಉಳಿದಿರುವ ದಾರಿಯಾಗಿದೆ.