ನೀಗದ ಕಲ್ಯಾಣ ಕರ್ನಾಟಕದ ನೀರಿನ ಬರ; ಶಾಶ್ವತ ನೀರಾವರಿ ಯೋಜನೆಗೆ ಬಡಿದಿದೆ ಗರ

ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಪ್ರಸ್ತಾಪ ಕೇವಲ ಚುನಾವಣಾ ಅಸ್ತ್ರವಾಗಿ ಮಾತ್ರ ಬಳಕೆಯಾಗುತ್ತಿದೆ. ಅಧಿಕಾರಕ್ಕೆ ಬರುವ ಸರ್ಕಾರಗಳು ಬಾಯಿ ಮಾತಿನಲ್ಲಷ್ಟೇ ನವಲಿ ಜಲಾಶಯ ಕಟ್ಟುತ್ತಿವೆ ಎಂಬುದು ರೈತರ ಆರೋಪವಾಗಿದೆ.;

Update: 2025-04-04 01:40 GMT

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ರೈತರ ಎರಡನೇ ಬೆಳೆಗೆ (ಬೇಸಿಗೆ ಬೆಳೆ) ರಾಜ್ಯ ಸರ್ಕಾರ ಭದ್ರಾ ಜಲಾಶಯದಿಂದ ನೀರು ಹರಿಸುತ್ತಿದೆ. ಏ.1 ರಿಂದ 5ರವರೆಗೆ ರಾಯಚೂರು, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳ ಕಾಲುವೆಗಳಿಗೆ ನೀರು ಹರಿಸುತ್ತಿದೆ. ಆದರೆ, ಜಲಾಶಯ ತುಂಬಿದರಷ್ಟೇ ನೀರು ಪಡೆಯುವ ಇಲ್ಲಿನ ರೈತರಿಗೆ ಸರ್ವ ಋತು ನೀರಾವರಿ ಸೌಲಭ್ಯ ಮರೀಚಿಕೆಯಾಗಿದೆ.

ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ತುಂಗಭದ್ರಾ ಜಲಾಶಯಕ್ಕೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಬೇಕೆಂಬ ರೈತರ ದಶಕಗಳ ಕೂಗು ಸರ್ಕಾರಕ್ಕೆ ಕೇಳದಾಗಿದೆ. 

ಮಳೆಗಾಲದಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗದೆ ವ್ಯರ್ಥವಾಗಿ ಆಂಧ್ರಪ್ರದೇಶಕ್ಕೆ ಹರಿಯುತ್ತಿದೆ. ಹೀಗಾಗಿ ಪ್ರತಿ ವರ್ಷ ಎರಡನೇ ಬೆಳೆಗೆ ನೀರಿಲ್ಲದೆ ರೈತರು ಪರಿತಪಿಸುವುದು ಸರ್ವೆ ಸಾಮಾನ್ಯವಾಗಿದೆ. ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಪ್ರಸ್ತಾಪ ಕೇವಲ ಚುನಾವಣಾ ಅಸ್ತ್ರವಾಗಿ ಮಾತ್ರ ಬಳಕೆಯಾಗುತ್ತಿದೆ.

ಅಧಿಕಾರಕ್ಕೆ ಬರುವ ಸರ್ಕಾರಗಳು ಬಾಯಿ ಮಾತಿನಲ್ಲಷ್ಟೇ ನವಲಿ ಜಲಾಶಯ ಕಟ್ಟುತ್ತಿವೆ. 

ಎರಡನೇ ಬೆಳೆಗೆ ನೀರು ಪೂರೈಕೆ

ಕಲ್ಯಾಣ ಕರ್ನಾಟಕದ ಮೂರು ಜಿಲ್ಲೆಗಳಿಗೆ ಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಏ. 1ರಿಂದ 5ರವರೆಗೆ ನೀರು ಹರಿಸುತ್ತಿದೆ. ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೊಯ್ಲಿಗೆ ಬಂದಿರುವ ಬೆಳೆಗಳು ಹಾಗೂ ಕುಡಿಯುವ ನೀರಿನ ಬಳಕೆಗೆ ಇದರಿಂದ ಅನುಕೂಲವಾಗಲಿದೆ. 

ಮಾರ್ಚ್ 30ರ ವೇಳೆಗೆ ಭದ್ರಾ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹವಿತ್ತು. ಇದರಲ್ಲಿ ಮೇ 8ರವರೆಗೆ ನೀರಾವರಿಗಾಗಿ 11ಟಿಎಂಸಿ ಹಾಗೂ ಕುಡಿಯುವ ನೀರಿಗಾಗಿ 14ಟಿಎಂಸಿ ಅಗತ್ಯವಿದೆ.  3ಟಿಎಂಸಿ ನೀರು ಜಲಾಶಯದಲ್ಲಿ ಉಳಿಸಿಕೊಳ್ಳಬೇಕಾಗಿದೆ. ಏಪ್ರಿಲ್ 6ರಿಂದ ಕಾಲುವೆಗಳಿಗೆ ಕೇವಲ ಕುಡಿಯುವ ನೀರು ಪೂರೈಸಲು ಸರ್ಕಾರ ತೀರ್ಮಾನಿಸಿದೆ.

50 ಸಾವಿರ ಎಕರೆಗೆ ನೀರು ಅಗತ್ಯ

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆ ಬೆಳೆಯಾಗಿ ಅತೀ ಹೆಚ್ಚು ಭತ್ತ ಬೆಳೆಯಲಾಗುತ್ತದೆ. ಕೊಯ್ಲಿಗೆ ಸಿದ್ದವಾಗಿರುವ ಭತ್ತಕ್ಕೆ ಇನ್ನೂ ಐದಾರು ದಿನ ನೀರು ಬೇಕಾಗಿದೆ. ಅಲ್ಲದೆ ಕುಡಿಯುವ ನೀರಿಗಾಗಿ ಗೆಣೆಕಲ್ ಜಲಾಶಯವನ್ನು ತುಂಬಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಚಾಮರಸಾ ಮಾಲಿ ಪಾಟೀಲ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ  ತಿಳಿಸಿದರು.

ಪ್ರಸಕ್ತ ಋತುವಿನಲ್ಲಿ ಚಳಿ ಅಧಿಕವಾಗಿದ್ದರಿಂದ ತಡವಾಗಿ ಭತ್ತ ತೆನೆ ಕಟ್ಟಿದೆ. ಬೇಸಿಗೆ ಬೆಳೆಗಳಾದ ಸಜ್ಜೆ, ಶೇಂಗಾಕ್ಕೂ ನೀರು ಅಗತ್ಯವಾಗಿದೆ.  ಅಂದಾಜು ಶೇ 30 ರಷ್ಟು ಅಂದರೆ 50-60 ಸಾವಿರ ಎಕರೆಗೆ ನೀರಿನ ಅವಶ್ಯಕತೆ ಇದೆ ಎಂದು ಹೇಳಿದರು.

ಕಳೆದ ವರ್ಷ ನೀರೇ ಇರಲಿಲ್ಲ

ಕಳೆದ ವರ್ಷ ಬರಗಾಲದಿಂದಾಗಿ ಎರಡನೇ ಬೆಳೆಗೆ ನೀರು ಹರಿಸಿರಲಿಲ್ಲ. ಕೇವಲ ಕುಡಿಯುವ ನೀರಿಗೆ ಅಷ್ಟೇ ನೀರು ಪೂರೈಸಲಾಗಿತ್ತು. ರೈತರ ಎರಡೂ ಬೆಳೆಗಳಿಗೆ ನೀರಾವರಿ ಸೌಲಭ್ಯ ಸಿಗಬೇಕಾದರೆ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಿಸುವುದು ಜರೂರಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಸುಮಾರು 30 ಅಡಿ ಟಿಎಂಸಿ ಹೂಳು ತುಂಬಿರುವುದರಿಂದ ಜಲಾಶಯದ ನೀರಿನ ಸಂಗ್ರಹ ಕಡಿಮೆಯಾಗಿದೆ.

ಪ್ರತಿ ವರ್ಷ 25 ರಿಂದ 30 ಟಿಎಂಸಿ ನೀರು ವ್ಯರ್ಥವಾಗಿ ಆಂಧ್ರಪ್ರದೇಶಕ್ಕೆ ಹರಿಯುತ್ತಿದೆ. ಈ ನೀರನ್ನು ತಡೆದು ಸಂಗ್ರಹಿಸಿದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಿದಂತಾಗುತ್ತದೆ. 35 ಟಿಎಂಸಿ ಸಾಮರ್ಥ್ಯದ ನವಲಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ 2022 ರಲ್ಲಿ ಬಿಜೆಪಿ ಸರ್ಕಾರ ಡಿಪಿಆರ್ ಸಿದ್ದಪಡಿಸಿತ್ತು. ಮಸ್ಕಿ ಉಪ ಚುನಾವಣೆ ವೇಳೆ ಅಂದಿನ ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು ತರಾತುರಿಯಲ್ಲಿ ಶಂಕುಸ್ಥಾಪನೆ ಕೂಡ ನೆರವೇರಿಸಿದ್ದರು. ಅದಾದ ಬಳಿಕ ಯಾರು ಇದರ ಬಗ್ಗೆ ಗಮನಹರಿಸಿಲ್ಲ. ಆಂಧ್ರಪ್ರದೇಶದ ಜೊತೆ ಮಾತುಕತೆ ನಡೆಸಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ಚಾಮರಸಾ ಮಾಲಿ ಪಾಟೀಲ ಅಭಿಪ್ರಾಯಪಟ್ಟರು.

ನೀರಿನ ನಿರ್ವಹಣೆ ನಿರ್ಲಕ್ಷ್ಯ

ತುಂಗಾ ಭದ್ರಾ ಹಾಗೂ ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಹರಿಸುವ ನೀರು ಕೇವಲ 50 ಕಿ. ಮೀ. ವರೆಗೆ ಸಮರ್ಪಕವಾಗಿ ಸಿಗಲಿದೆ. ಅದಾದ ಬಳಿಕ ಸಾಕಷ್ಟು ಜನ ಅನಧಿಕೃತವಾಗಿ ನೀರು ಹಾಯಿಸಿಕೊಳ್ಳುತ್ತಿದ್ದು, ತೆರಿಗೆಕಟ್ಟುವ ರೈತರಿಗೆ ನೀರಾವರಿ ಸೌಲಭ್ಯ ಸಿಗುತ್ತಿಲ್ಲ. ಸುಮಾರು 2 ಲಕ್ಷ ಎಕರೆಗೆ ನೀರಿನ ಅಭಾವತಲೆದೋರಿದೆ. ಶಿರವಾರ, ಮಾನ್ವಿ ತಾಲೂಕಿನ ರೈತರಿಗೆ ಬೆಳೆ ಬೆಳೆಯಲು ನೀರು ಸಿಗುತ್ತಿಲ್ಲ ಎಂದು ಚಾಮರಸಾ ಮಲಿಪಾಟೀಲ್ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು. 

ಎಂಜಿನಿಯರ್ ಗಳ ಕೊರತೆ

 ತುಂಗಭದ್ರಾ ಎಡದಂಡೆ ಹಾಗೂ ಬಲದಂಡೆ, ರಾಯಭರವ, ಆರ್ ಸಿಎಸ್ ಕಾಲುವೆಗಳಿಗೆ ಸುಮಾರು 150 ಇಂಜಿನಿಯರ್ ಗಳ ಕಿರಾಟೆ ಇದೆ. ಇದರಿಂದ ನೀರಿನ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲು ಬಂದಿದ್ದ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಲಾಗಿತ್ತು. ಇದಲ್ಲದೆ ಸ್ಥಳೀಯ ಶಾಸಕರು, ಸಚಿವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು

Tags:    

Similar News