Micro Finance | ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಹೊಸ ಕಾನೂನು: ಇಂದು ನಿರ್ಧಾರ
Micro Finance : ಮೈಕ್ರೋಫೈನಾನ್ಸ್ ಹಾವಳಿಗೆ ಕಡಿವಾಣ ಹಾಕುವ ನಿಯಮಗಳು ಕಠಿಣವಾಗಿಲ್ಲ ಎಂಬ ಅಪಸ್ವರಗಳೂ ಇವೆ. ಈ ಹಿನ್ನೆಲೆಯಲ್ಲಿ ಕಠಿಣ ಕಾಯ್ದೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.;
ರಾಜ್ಯಾದ್ಯಂತ ಭಾರೀ ಜನಾಕ್ರೋಶಕ್ಕೆ ಕಾರಣವಾಗಿರುವ ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ಶನಿವಾರ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲು ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಮೈಕ್ರೋಫೈನಾನ್ಸ್‌ಗಳ ಧೋರಣೆಯಿಂದ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಕೆಲವರು ಗ್ರಾಮಗಳನ್ನೇ ತೊರೆದು ಹೋಗಿದ್ದಾರೆ. ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿಪಕ್ಷಗಳು ಮತ್ತು ಹಲವು ಸಂಘಟನೆಗಳು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೆ ಒತ್ತಾಯಿಸುತ್ತಿವೆ.
ಮತ್ತೂಂದೆಡೆ ಈ ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕುವ ನಿಯಮಗಳು ಕಠಿಣವಾಗಿಲ್ಲ ಎಂಬ ಅಪಸ್ವರಗಳೂ ಇವೆ. ಈ ಹಿನ್ನೆಲೆಯಲ್ಲಿ ಕಠಿಣ ಕಾಯ್ದೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.
ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿರುವ ಗೃಹ ಸಚಿವ ಡಾ| ಪರಮೇಶ್ವರ, "ಬ್ಯಾಂಕ್‌ನ ನಿಯಮಗಳ ಪ್ರಕಾರ ಸಾಲ ನೀಡಿದವರು ಅದನ್ನು ವಸೂಲಿ ಮಾಡಲು ಒಂದಿಷ್ಟು ಕಾನೂನುಗಳಿವೆ. ಅದೇ ರೀತಿ, ಸಾಲಗಾರರ ರಕ್ಷಣೆಗೂ ಕಾನೂನುಗಳಿವೆ. ಅವು ಅಷ್ಟೊಂದು ಬಿಗಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಮೈಕ್ರೋಫೈನಾನ್ಸ್‌ಗಳ ಹಾವಳಿಗೆ ಕಡಿವಾಣ ಹಾಕಲು ಕಾನೂನುಗಳನ್ನು ಮತ್ತಷ್ಟು ಬಲಗೊಳಿಸುವ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಗಮನಹರಿಸಿದ್ದಾರೆ. ಮುಖ್ಯಮಂತ್ರಿ ಕೂಡ ಕಾನೂನು ತರುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಶನಿವಾರ ನಡೆಯಲಿರುವ ಸಭೆಯಲ್ಲಿ ಇದು ಚರ್ಚೆಗೆ ಬರಲಿದೆ' ಎಂದು ಹೇಳಿದ್ದಾರೆ.
ಸಭೆಯಲ್ಲಿ ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಗುರಿಯಾದ ಸಂತ್ರಸ್ತರ ಪ್ರಕರಣಗಳ ಬಗ್ಗೆ ಚರ್ಚೆ ಆಗಲಿದೆ. ಅದರ ಜತೆಗೆ ಇದಕ್ಕೆ ಕಡಿವಾಣ ಹಾಕಲು ಏನೇನು ಮಾಡಬಹುದು ಎಂಬುದರ ಬಗ್ಗೆಯೂ ಪ್ರಸ್ತಾವ ಆಗಲಿದೆ. ಒಟ್ಟಾರೆ ನಿಯಮಗಳನ್ನು ಬಿಗಿಗೊಳಿಸುವ ಆವಶ್ಯಕತೆಯೂ ಇದೆ ಎಂದು ಹೇಳಿದ್ದಾರೆ.
ಈ ಮಧ್ಯೆ ಮೈಕ್ರೋಫೈನಾನ್ಸ್‌ಗಳಿಂದ ಸಾಲಗಾರರಿಗೆ ಕಿರುಕುಳ ಆಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈಗಾಗಲೇ ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಸಾಲ ಮರುಪಾವತಿ ಮಾಡದಿದ್ದಾಗ ಆಸ್ತಿ ಅಥವಾ ಮನೆ ಜಪ್ತಿ ಮಾಡುವುದು, ವಶಕ್ಕೆ ಪಡೆಯುವುದು ಮತ್ತಿತರ ದೂರುಗಳು ಬಂದಿವೆ. ಸಾಲ ಪಡೆಯುವಾಗ ಸಾಲಗಾರರು ಯಾವ್ಯಾವುದಕ್ಕೆ ಸಹಿ ಮಾಡಿರುತ್ತಾರೆ ಎಂದು ಸ್ವತಃ ಅವರಿಗೇ ಗೊತ್ತಿರುವುದಿಲ್ಲ. ಇದು ಕೂಡ ಸಮಸ್ಯೆಗಳಿಗೆ ಕಾರಣ ಎಂದರು. ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳು, ಕಂದಾಯ, ಗೃಹ, ಕಾನೂನು ಸಚಿವರು ಸೇರಿ ಚರ್ಚೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.