ಸಂಕ್ರಾಂತಿಗೆ ನೂತನ 'ಬ್ರಿಗೇಡ್' ಅಸ್ತಿತ್ವಕ್ಕೆ: ಈಶ್ವರಪ್ಪ

ಜನವರಿಯ ಸಂಕ್ರಾಂತಿ ದಿನ ನೂತನ ಬ್ರಿಗೇಡ್‌ಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

Update: 2024-10-21 06:54 GMT
ಕೆ.ಎಸ್‌ ಈಶ್ವರಪ್ಪ
Click the Play button to listen to article

ಬರುವ ಜನವರಿಯ ಸಂಕ್ರಾಂತಿಯ ದಿನ ನೂತನ ಬ್ರಿಗೇಡ್‌ಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. 

ಬಾಗಲಕೋಟೆಯ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಭಾನುವಾರ, ಸಾಧು ಸಂತರು ಹಾಗೂ ಸ್ವಾಮೀಜಿಗಳ ನೇತೃತ್ವದಲ್ಲಿ ಜರುಗಿದ 'ಹಿಂದುಳಿದ, ದಲಿತ ಹಾಗೂ ಸಮಗ್ರ ಹಿಂದೂ ಸಮಾಜದ ಸಮಸ್ಯೆಗಳು ಮತ್ತು ಸವಾಲುಗಳು' ಚಿಂತನ- ಮಂಥನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

2025 ಜನವರಿಯಲ್ಲಿ 15 ರಂದು ನಡೆಯುವ ಸಂಕ್ರಾತಿಯ ದಿನ ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿ ಒಂದು ಸಾವಿರ ಸ್ವಾಮೀಜಿಗಳು ಸೇರಿ ಬ್ರಿಗೇಡ್ ಗೆ ಹೆಸರನ್ನು ತೀರ್ಮಾನಿಸಲಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ಬ್ರಿಗೇಡ್ ನ ಕಾರ್ಯಸೂಚಿ ತಯಾರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ನಾಡಿನ ಮೂಲೆ ಮೂಲೆಗಳಿಂದ 50 ಸಾವಿರಕ್ಕೂ ಹೆಚ್ಚು ಜನ ಸೇರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

'ಬ್ರಿಗೇಡ್‌ ಸ್ಥಾಪನೆ ನನಗಾಗಿಯೂ ಅಲ್ಲ, ನನ್ನ ಮಗನಿಗಾಗಿಯೂ ಅಲ್ಲ. ದಲಿತ ಮತ್ತು ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಅಪೇಕ್ಷೆಯಂತೆ ಸನಾತನ ಹಿಂದೂ ಧರ್ಮದ ಸಂಸ್ಕೃತಿ ಎತ್ತಿ ಹಿಡಿದು, ಹಿಂದುತ್ವ ರಕ್ಷಿಸಿ, ಹಿಂದುಳಿದವರು ಹಾಗೂ ದಲಿತ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ಕೊಡಿಸುವುದಕ್ಕಾಗಿ ಸ್ಥಾಪಿಸಲಾಗುತ್ತಿದೆ' ಎಂದರು.

ಕನಕ ಗುರುಪೀಠದ ತಿಂತಣಿ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಮಕನಾಪುರ ಸೋಮಲಿಂಗೇಶ್ವರ ಸ್ವಾಮೀಜಿ, ಹುಬ್ಬಳ್ಳಿಯ ಚಂದ್ರಶೇಖರ ಸ್ವಾಮೀಜಿ, ಅಭಿನವ ಬಸವರಾಜ ಸ್ವಾಮೀಜಿ, ಮಾಧುಲಿಂಗ ಸ್ವಾಮೀಜಿ, ಹುಲಿಜಂತಿ ಮಾಳಿಂಗರಾಯ ಸ್ವಾಮೀಜಿ, ಸೇಡಂನ ಮಾತಾ ನಂದೀಶ್ವರಿ, ಅಮರೇಶ್ವರ ಸ್ವಾಮೀಜಿ, ಈಶ್ವರಪ್ಪ ಪುತ್ರ ಕಾಂತೇಶ, ಮಾಜಿ ಸಚಿವ ಗೂಳಿಹಟ್ಟಿ ಶೇಖರ, ಹಾಲುಮತ ಸಮಾಜದ ಮುಖಂಡ ಮುಕುಡಪ್ಪ ಪಾಲ್ಗೊಂಡಿದ್ದರು.

Tags:    

Similar News