ಮೇ 4ರಂದು ನೀಟ್- ಯುಜಿ ಪರೀಕ್ಷೆ: ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಗಳ ವಿವರ ಇಲ್ಲಿದೆ
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಾತಿ ಪತ್ರದೊಂದಿಗೆ ಕಾಲೇಜಿನಿಂದ ನೀಡಿರುವ ಐಡಿ/ಆಧಾರ್ ಕಾರ್ಡ್/ಪಾನ್ ಕಾರ್ಡ್/ಡಿ.ಎಲ್/ವೋಟರ್ ಐಡಿ ಅಥವಾ ಇತರೆ ಯಾವುದಾದರೂ ಅಂಗೀಕೃತ ಐಡಿ ಜೊತೆ, ಒಂದು ಪೋಸ್ಟ್ ಕಾರ್ಡ್ ಮತ್ತು ಎರಡು ಪಾಸ್ ಪೋರ್ಟ್ ಅಳತೆಯ ಫೋಟೋಗಳನ್ನು ಕಡ್ಡಾಯ ತೆಗೆದುಕೊಂಡು ಹೋಗಬೇಕು.;
ಎಐ ರಚಿತ ಚಿತ್ರ.
ರಾಷ್ಟ್ರದಾದ್ಯಂತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ವತಿಯಿಂದ 2025ರ NEET(UG) ಪರೀಕ್ಷೆಯು ಮೇ 4 ರಂದು ಮಧ್ಯಾಹ್ನ 2ರಿಂದ ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಕರ್ನಾಟಕದಲ್ಲಿ ಒಟ್ಟು 381 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 1,49,000 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಈ ಕುರಿತು ಪ್ರಕಟಣೆ ಹೊರಡಸಿ ನಿಯಮಗಳನ್ನು ಸೂಚಿಸಿದೆ.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಾತಿ ಪತ್ರದೊಂದಿಗೆ ಕಾಲೇಜಿನಿಂದ ನೀಡಿರುವ ಐಡಿ/ಆಧಾರ್ ಕಾರ್ಡ್/ಪಾನ್ ಕಾರ್ಡ್/ಡಿ.ಎಲ್/ವೋಟರ್ ಐಡಿ ಅಥವಾ ಇತರೆ ಯಾವುದಾದರೂ ಅಂಗೀಕೃತ ಐಡಿ ಜೊತೆ, ಒಂದು ಪೋಸ್ಟ್ ಕಾರ್ಡ್ ಮತ್ತು ಎರಡು ಪಾಸ್ ಪೋರ್ಟ್ ಅಳತೆಯ ಫೋಟೋಗಳನ್ನು ಕಡ್ಡಾಯ ತೆಗೆದುಕೊಂಡು ಹೋಗಬೇಕು. ಬೆಳಿಗ್ಗೆ 11ರಿಂದ ಎನ್ಟಿಎ ವತಿಯಿಂದ ನೇಮಿಸಿರುವ ಏಜೆನ್ಸಿಗಳಿಂದ ಸಂಬಂಧಪಟ್ಟ ರಿಜಿಸ್ಟ್ರೇಷನ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ನಿಯೋಜಿತ ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿಗಳ ಸುರಕ್ಷತಾ ತಪಾಸಣೆ ನಡೆಸಲಿದ್ದಾರೆ.
ಬಯೊಮೆಟ್ರಿಕ್ ಕಡ್ಡಾಯ
ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳು ಪ್ರವೇಶ ಪತ್ರದಲ್ಲಿ ನೀಡಲಾಗಿರುವ ಸೂಚನೆಗನ್ನು ಪಾಲಿಸಬೇಕು. ವಿದ್ಯಾರ್ಥಿಗಳು ಪೂರ್ಣ ತೋಳಿರುವ ಮೇಲಂಗಿ/ ದೊಡ್ಡ ಬಟನ್ ಗಳಿರುವ ಶರ್ಟ್ /ಪ್ಯಾಂಟ್/ಶೂ/ ಸಾಕ್ಸ್ / ಎತ್ತರದ ಚಪ್ಪಲಿಗಳು/ ಕಿವಿಯೋಲೆ/ಬಳೆ/ಸರ/ಕಾಲ್ಗೆಜ್ಜೆ/ಮೂಗುತಿ/ಜಡೆ ಕ್ಲಿಪ್ ಹಾಗೂ ಇತರ ಯಾವುದೇ ಮೆಟಲ್ ಉಪಕರಣಗಳನ್ನು ಧರಿಸುವಂತಿಲ್ಲ. ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ ಮತ್ತು ಧರಿಸುವಂತಿಲ್ಲ. ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಂಡ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಇರುವ ಕೊಠಡಿಗೆ ನೇರವಾಗಿ ತೆರಳಬೇಕು.
ಪರೀಕ್ಷೆ ನಡೆಯುವ ಅವಧಿಯಲ್ಲಿ ಪ್ರತಿ ಗಂಟೆಗೊಂದು ಬಾರಿ ಬೆಲ್ ಮೂಲಕ ಸೂಚನೆ ನೀಡಲಾಗುತ್ತದೆ. ಪರೀಕ್ಷಾ ಕೇಂದ್ರಗಳಿಗೆ ನಿರಂತರ ವಿದ್ಯುತ್ ವ್ಯವಸ್ಥೆ, ಆರೋಗ್ಯ ಸಿಬ್ಬಂದಿ ಹಾಗೂ ತುರ್ತು ಸೇವೆಗಳ ನಿಯೋಜನೆ, ಪರೀಕ್ಷಾ ಕೇಂದ್ರಗಳ ಸ್ವಚ್ಛತೆ ಮತ್ತು ಪರೀಕ್ಷೆಗೆ ಹಾಜರಾಗುವ ವಿಶೇಷ ಚೇತನರು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವೀಲ್ ಚೇರ್ ವ್ಯವಸ್ಥೆ ಜಿಲ್ಲಾಡಳಿತದ ವತಿಯಿಂದ ಮಾಡಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ನಿಯೋಜಿತ ಸಿಬ್ಬಂದಿಯು ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳನ್ನು ಸೂಕ್ತ ತಪಾಸಣೆ ನಡೆಸಲಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೆ ಕ್ರಮವಹಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ನಿಯೋಜಿತ ಅಧಿಕಾರಿ/ಸಿಬ್ಬಂದಿಯನ್ನು ಹೊರತುಪಡಿಸಿ, ಇತರೆ ಯಾವುದೇ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.