Waqf Asset Issue | ವಕ್ಫ್ ಆಸ್ತಿ ರಾಷ್ಟ್ರೀಕರಣಕ್ಕೆ ಒತ್ತಾಯ; ಪ್ರಧಾನಿಗೆ ಪತ್ರ ಬರೆದ ಯತ್ನಾಳ್
ವಕ್ಫ್ ಕಾಯ್ದೆ ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ. ಕೃಷಿ ಭೂಮಿ, ಐತಿಹಾಸಿಕ ಸ್ಥಳ ಹಾಗೂ ಸ್ವಾತಂತ್ರ್ಯ ಪೂರ್ವದ ಆಸ್ತಿಗಳ ಒತ್ತುವರಿ ನಡೆಯುತ್ತಿದೆ. ಆದ್ದರಿಂದ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಶಾಸಕ ಯತ್ನಾಳ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.;
ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ವಕ್ಫ್ ಸ್ವತ್ತುಗಳ ರಾಷ್ಟ್ರೀಕರಣಕ್ಕೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ರೈತರು, ಮಠ ಮಂದಿರಗಳ ಜಾಗಕ್ಕೂ ವಕ್ಫ್ ನೋಟಿಸ್ ನೀಡುತ್ತಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ವಕ್ಫ್ ಮಂಡಳಿಯ ಈ ನಡೆ ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ. ಕೃಷಿ ಭೂಮಿ, ಐತಿಹಾಸಿಕ ಸ್ಥಳ ಹಾಗೂ ಸ್ವಾತಂತ್ರ್ಯ ಪೂರ್ವದ ಆಸ್ತಿಗಳ ಒತ್ತುವರಿ ನಡೆಯುತ್ತಿದೆ. ಆದ್ದರಿಂದ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ವಕ್ಫ್ ಆಸ್ತಿಗಳ ರಾಷ್ಟ್ರೀಕರಣದಿಂದ ಪಾರದರ್ಶಕತೆ ಜೊತೆಗೆ ಅರ್ಹ ಭೂ ಮಾಲೀಕರಿಗೆ ಭೂಮಿ ಸಿಗಲಿದೆ. ಈ ಆಸ್ತಿಗಳು ಸಾರ್ವಜನಿಕ ಬಳಕೆಗೂ ಮುಕ್ತವಾಗಲಿದೆ. ಧರ್ಮಾತೀತವಾಗಿ ಶಾಲೆ, ಕಾಲೇಜು, ಆಸ್ಪತ್ರೆ, ಸಂಶೋಧನಾ ಕೇಂದ್ರ ನಿರ್ಮಿಸಲು ಸಹಕಾರಿಯಾಗಲಿದೆ. ಹಾಗಾಗಿ ವಕ್ಫ್ ಆಸ್ತಿಗಳ ನಿರ್ವಹಣೆಗೆ ಪರಿಣಾಮಕಾರಿ ನೀತಿ ರೂಪಿಸಬೇಕು ಎಂದು ಕೋರಿದ್ದಾರೆ.
ವಕ್ಫ್ ರೀತಿಯ ಕಾನೂನು ಹಿಂದೂ, ಜೈನ್, ಸಿಖ್ ಸಮುದಾಯಗಳಲ್ಲಿ ಇಲ್ಲ. ಆದರೆ, ಈಗ ಚಾಲ್ತಿಯಲ್ಲಿರುವ ವಕ್ಫ್ ಕಾಯ್ದೆಯು ಜಾತ್ಯತೀತತೆ, ಏಕತೆ, ಸಮಗ್ರತೆಗೆ ವಿರುದ್ಧವಾಗಿದೆ. ಸಂವಿಧಾನದಲ್ಲಿ ವಕ್ಫ್ ಎಂಬ ಪದ ಎಲ್ಲೂ ಬಳಸಿಲ್ಲ. ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಇದನ್ನು ಅಸ್ತ್ರವಾಗಿ ಬಳಸಿಕೊಂಡಿದೆ. ವಕ್ಫ್ ಕಾನೂನು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಆರೋಪಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಸಿಂಧಗಿಯ ವಿರಕ್ತ ಮಠಕ್ಕೆ 12-13ನೇ ಶತಮಾನದಲ್ಲಿ ರಾಣಿ ಅಬ್ಬಕ್ಕ ಅವರು ಆಸ್ತಿ ದಾನ ಮಾಡಿದ್ದರು. ಆದರೆ, ಈಗ ಮಠದ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ವಕ್ಫ್ ಮಂಡಳಿ ಅಸ್ತಿತ್ವಕ್ಕೆ ಬಂದದ್ದು 19ನೇ ಶತಮಾನದಲ್ಲಿ. ವಿರಕ್ತ ಮಠದ ಆಸ್ತಿ ವಕ್ಫ್ ಮಂಡಳಿಗೆ ಹೇಗೆ ಸೇರುತ್ತದೆ ಎಂದು ಉದಾಹರಿಸಿ, ಉಲ್ಲೇಖಿಸಿದ್ದಾರೆ.
ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆ ಜಾರಿ ಸಂಬಂಧ ಜಂಟಿ ಸದನ ಸಮಿತಿ ರಚಿಸಿದ ನಂತರದಲ್ಲಿ ಈ ಬೆಳವಣಿಗೆಗಳು ಹೆಚ್ಚು ನಡೆಯುತ್ತಿವೆ. ಆದ್ದರಿಂದ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸಿ, ಭೂಮಿಯ ಸಮಾನ ಹಂಚಿಕೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ನೋಟಿಸ್ ಹಿಂಪಡೆಯಲು ಸೂಚನೆ
ವಕ್ಫ್ ಆಸ್ತಿ ಕುರಿತು ರೈತರಿಗೆ ನೀಡಿರುವ ನೋಟಿಸ್ ಅನ್ನು ಹಿಂಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಪುನರುಚ್ಚರಿಸಿದ್ದಾರೆ.
ವಿಜಯನಗರದಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರ ಒಂದಿಂಚು ಭೂಮಿಯನ್ನು ವಶಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಜಯಪುರದಲ್ಲಿ ವಕ್ಫ್ ಆಸ್ತಿ ಇರುವುದೇ 12 ಎಕರೆ, ಬಿಜೆಪಿಯವರು ಅನಗತ್ಯವಾಗಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯ ಕಡಕೋಳದಲ್ಲಿ ನಡೆದ ಕಲ್ಲುತೂರಾಟ ದುರದೃಷ್ಟಕರ. ಇಲ್ಲಿ ಪೆಟ್ಟು ತಿಂದವರೇ ಸುಮ್ಮನಿದ್ದಾರೆ. ಎಲ್ಲರೂ ಅನೋನ್ಯವಾಗಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೂ ಬಿಜೆಪಿ ತುಚ್ಛ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ 1.12 ಲಕ್ಷ ಎಕರೆ ದಾನಿಗಳು ಕೊಟ್ಟಿರುವ ಜಾಗ, ಸರ್ಕಾರ ಕೊಟ್ಟಿಲ್ಲ. ರೈತರಿಗೆ ಕೊಟ್ಟಿರುವ ನೋಟಿಸ್ ಹಿಂಪಡೆಯಲು ಸೂಚಿಸಲಾಗಿದೆ. ಒಂದು ವೇಳೆ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರೆ, ಚಿಂತಿಸಬೇಡಿ. ಯಾವುದೇ ಕಾರಣಕ್ಕೂ ಭೂಮಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಊಹಾಪೋಹಗಳಿಗೆ ರೈತಲು ಕಿವಿಗಿಡಬೇಡಿ ಎಂದು ಮನವಿ ಮಾಡಿದ್ದಾರೆ.
ವಕ್ಫ್ ಆಸ್ತಿ ಸಂಬಂಧ ನೋಟಿಸ್ ಕೊಡುತ್ತಿರುವ ಬೆಳವಣಿಗೆ ಇದೇ ಮೊದಲಲ್ಲ. ಈ ಹಿಂದೆ ಬಿಜೆಪಿ ಅವಧಿಯಲ್ಲೂ ನೋಟಿಸ್ ನೀಡಲಾಗಿದೆ. ಆದರೆ, ಬಿಜೆಪಿಯವರು ಇದನ್ನು ಮರೆ ಮಾಚಿ, ರಾಜಕೀಯ ಕಾರಣಕ್ಕಾಗಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಸ್ಲಿಮರ ಪಹಣಿಯಲ್ಲೂ ವಕ್ಫ್ ಆಸ್ತಿ ನಮೂದು
ಧಾರವಾಡ ಜಿಲ್ಲೆಯ ಹಲವು ಮುಸ್ಲಿ ಸಮುದಾಯದ ರೈತರ ಪಹಣಿಗಳಲ್ಲಿಯೂ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಬೆಳಕಿಗೆ ಬಂದಿದೆ.
ನವಲಗುಂದದ 20ಕ್ಕೂ ಹೆಚ್ಚು ಮುಸ್ಲಿಂ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಬೆಣ್ಣೆಹಳ್ಳದ ಆಸುಪಾಸಿನ ರೈತರ 40 ಎಕರೆ ಜಮೀನಿನ ಪಹಣಿಗಳಲ್ಲಿ ವಕ್ಫ್ ಹೆಸರು ದಾಖಲಾಗಿದ್ದು, ಮುಸ್ಲಿಮರ ಆಕ್ರೋಶಕ್ಕೂ ಗುರಿಯಾಗಿದೆ.