Horticulture Fair | ತೋಟಗಾರಿಕಾ ಮೇಳದಲ್ಲಿ ನವೀನ ತಂತ್ರಜ್ಞಾನ, ಬೆಳೆಯ ಹೊಸ ತಳಿಗಳ ಅನಾವರಣ
ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಮತ್ತು ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಆವರಣದಲ್ಲಿ ಫೆ.27 ರಿಂದ ಮಾರ್ಚ್ 1 ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳ ನಡೆಯಲಿದೆ.;
'ವಿಕಸಿತ ಭಾರತಕ್ಕಾಗಿ ತೋಟಗಾರಿಕೆ' ಎಂಬ ಘೋಷವಾಕ್ಯದೊಂದಿಗೆ 2025ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮೇಳ ಫೆ.27(ಇಂದಿನಿಂದ) ರಿಂದ ಆರಂಭವಾಗಲಿದೆ.
ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಮತ್ತು ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಆವರಣದಲ್ಲಿ ಮಾರ್ಚ್ 1 ರವರೆಗೆ ಮೇಳ ನಡೆಯಲಿದೆ.
ಹೊಸ ತಳಿಗಳು, ತಂತ್ರಜ್ಞಾನ ಸೇರಿದಂತೆ ರೈತರಿಗೆ ಉಪಯುಕ್ತ ಮಾಹಿತಿ ಮೇಳದಲ್ಲಿ ಸಿಗಲಿದೆ. ಪರಿಸರಕ್ಕೆ ಅನುಕೂಲಕರವಾದ ತೋಟಗಾರಿಕಾ ಬೆಳೆಗಳ ಮೂಲಕ ಉತ್ಪಾದನೆ, ಆದಾಯ ಮತ್ತು ಜೀವನೋಪಾಯ ಸುಧಾರಿಸುವ ಗುರಿಯನ್ನು ತೋಟಗಾರಿಕಾ ಮೇಳ ಹೊಂದಿದೆ ಎಂದು ರಾಷ್ಟ್ರೀಯ ತೋಟಗಾರಿಕೆ ಮೇಳದ ಆಯೋಜನಾ ಸಮಿತಿ ಅಧ್ಯಕ್ಷರೂ ಆಗಿರುವ ನಿರ್ದೇಶಕ ತುಷಾರ್ ಕಾಂತಿ ಬೆಹೇರಾ ತಿಳಿಸಿದ್ದಾರೆ.
ಭಾರತದಲ್ಲಿ ತೋಟಗಾರಿಕಾ ಉತ್ಪಾದನೆಯು ಕೃಷಿ ಉತ್ಪಾದನೆಯನ್ನೂ ಮೀರಿ ಬೆಳೆದಿದೆ. ಕೃಷಿ ಉತ್ಪಾದನೆ ವಾರ್ಷಿಕ 330 ಮಿಲಿಯನ್ ಟನ್ ಇದ್ದರೆ, ತೋಟಗಾರಿಕಾ ಉತ್ಪಾದನೆ 350 ಮಿಲಿಯನ್ ಟನ್ ಇದೆ. ಈ ಸಾಧನೆಯು ದೇಶದ ಪೌಷ್ಠಿಕತೆಗೆ ಸುರಕ್ಷತೆ ಒದಗಿಸಿದೆ. ಜೊತೆಗೆ ಅಗತ್ಯವಿರುವ ದೇಶಗಳಿಗೆ ರಫ್ತು ಮಾಡುವ ಅವಕಾಶವನ್ನೂ ನೀಡಿದೆ ಎಂದು ಹೇಳಿದ್ದಾರೆ.
ನವೀನ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ
ಮೇಳದಲ್ಲಿ 250 ಸಂಸ್ಥೆಗಳು ತೋಟಗಾರಿಕಾ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿವೆ.
ತಳಿಗಳ ಸುಧಾರಣೆ, ಬೆಳೆ ಉತ್ಪಾದನೆ, ಬೆಳೆ ಸಂರಕ್ಷಣೆ, ಮೇಲ್ಪಸಲು ನಿರ್ವಹಣೆ, ಮೌಲ್ಯ ವೃದ್ಧಿ, ತೋಟಗಾರಿಕಾ ಯಂತ್ರೋಪಕರಣಗಳು ಮತ್ತು ಉಪಕರಣಗಳನ್ನು ಇಲ್ಲಿ ಕಾಣಬಹುದಾಗಿದೆ. ಐಸಿಎಆರ್ ಸಂಸ್ಥೆ, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಖಾಸಗಿ ಕೈಗಾರಿಕೆಗಳು, ರೈತ ಉತ್ಪಾದಕರ ಸಂಘಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಉದ್ಯಮಿಗಳು ತೋಟಗಾರಿಕೆಗೆ ಸಂಬಂಧಿಸಿದ ತಮ್ಮ ನವೀನ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದ್ದಾರೆ.
ರೈತರಿಗೆ ವಾಹನ ವ್ಯವಸ್ಥೆ
ಮೂರು ದಿನಗಳ ಪ್ರದರ್ಶನದಲ್ಲಿ 75,000 ಕ್ಕೂ ಹೆಚ್ಚು ರೈತರು ಮತ್ತು ತೋಟಗಾರಿಕೆ ಕ್ಷೇತ್ರದ ಭಾಗೀದಾರರು ಭಾಗವಹಿಸುವ ನಿರೀಕ್ಷೆಯಿದೆ. ಇಲ್ಲಿಗೆ ಸಮೀಪದ ಟಿ.ಬಿ ಕ್ರಾಸ್ ನಿಂದ ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಭೇಟಿ ನೀಡುವವರ ಅನುಕೂಲಕ್ಕಾಗಿ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಹಿರಿಯ ನಾಗರಿಕರು, ವಿಶೇಷಚೇತನರಿಗಾಗಿ ಎಲೆಕ್ಟಿಕ್ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಹೊರ ಜಿಲ್ಲೆಗಳಿಂದ ನೋಂದಣಿ ಮಾಡಿಕೊಂಡಿರುವ ರೈತರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಮೇಳದಲ್ಲಿ ಐಐಎಚ್‌ಆರ್ ತಂತ್ರಜ್ಞಾನಗಳ ರಾಯಭಾರಿಗಳಾಗಿರುವ ಪ್ರಗತಿಪರ ರೈತರನ್ನು ಗೌರವಿಸಲಾಗುವುದು.
BESTT HORT, ಅಣಬೆ ಪ್ರಯೋಗಾಲಯ, ಮತ್ತು ತೋಟಗಾರಿಕಾ ಬೆಳೆಗಳ ಸಂರಕ್ಷಿತ ಕೃಷಿಯ ಕೇಂದ್ರವನ್ನು ಇದೇ ವೇಳೆ ಆಸಕ್ತರು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.