Namma Metro | ವೈಟ್‌ಫೀಲ್ಡ್‌ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷ; ಮೆಟ್ರೋ ರೈಲು ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

ನೇರಳೆ ಮಾರ್ಗದ ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ಸ್ಟೇಷನ್‌ನಲ್ಲಿ ಶುಕ್ರವಾರ ಬೆಳಿಗ್ಗೆ 5 ಗಂಟೆಗೆ ತಾಂತ್ರಿಕ ದೋಷ ಕಂಡುಬಂದಿದ್ದು, ಈ ಸ್ಟೇಷನ್‌ನಿಂದ ರೈಲುಗಳ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ;

Update: 2025-05-23 04:03 GMT

'ನಮ್ಮ ಮೆಟ್ರೋ ' ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮೆಟ್ರೋ ರೈಲುಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ನೇರಳೆ ಮಾರ್ಗದ ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ಸ್ಟೇಷನ್‌ನಲ್ಲಿ ಶುಕ್ರವಾರ ಬೆಳಿಗ್ಗೆ 5 ಗಂಟೆಗೆ ತಾಂತ್ರಿಕ ದೋಷ ಕಂಡುಬಂದಿದ್ದು, ಈ ಸ್ಟೇಷನ್‌ನಿಂದ ರೈಲುಗಳ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೋಪ್‌ಫಾರ್ಮ್ ಚನ್ನಸಂದ್ರ ನಿಲ್ದಾಣ ಮತ್ತು ಚಲ್ಲಘಟ್ಟ ನಿಲ್ದಾಣಗಳ ನಡುವೆ ಮಾತ್ರ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಹಸಿರು ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಸಂಚಾರ ಮುಂದುವರಿದಿದೆ.

ಪ್ರಯಾಣಿಕರಿಗೆ ಉಂಟಾಗಿರುವ ಅನನುಕೂಲತೆಗೆ ಬಿಎಂಆರ್ ಸಿಎಲ್ ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.

ತಾಂತ್ರಿಕ ದೋಷ ಸರಿಪಡಿಸುವಲ್ಲಿ ತಂತ್ರಜ್ಞರು ಕಾರ್ಯ ನಿರತರಾಗಿದ್ದಾರೆ. ಮೆಜೆಸ್ಟಿಕ್ ಹಾಗೂ ಇತರೆ ಭಾಗಗಳಿಗೆ ತೆರಳುವ ಪ್ರಯಾಣಿಕರು ಇದರಿಂದ ಪರದಾಡುವಂತಾಗಿದೆ.

ವೈಟ್‌ಫೀಲ್ಡ್‌ ನಿಲ್ದಾಣದಲ್ಲಿ ತಾಂತ್ರಿಕ ದೋಷವನ್ನು ಬೆಳಿಗ್ಗೆ 9.55 ಕ್ಕೆ ಸರಿಪಡಿಸಿದ್ದು, ಕಾಡುಗೋಡಿ ಹಾಗೂ ಚೆಲ್ಲಘಟ್ಟ ನಡುವೆ ಮೆಟ್ರೋ ಸಂಚಾರ ಯಥಾಸ್ಥಿತಿಯಂತೆ ಮುಂದುವರಿದಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.



2024 ಜೂನ್ ತಿಂಗಳಲ್ಲಿ ಕೂಡ ಟ್ರಿನಿಟಿ ಮೆಟ್ರೊ ನಿಲ್ದಾಣದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಪ್ರಯಾಣಿಕರು ಪರಿತಪಿಸಿದ್ದರು. ಇದೇ ಅವಧಿಯಲ್ಲಿ

ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲೂ ಮೆಟ್ರೋ ರೈಲು ಕೆಟ್ಟು ನಿಂತಿತ್ತು. ಬೆಳಿಗ್ಗೆ 9. 58ಕ್ಕೆ ಮೆಟ್ರೋ ರೈಲು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿತ್ತು, ಆದರೆ ಬಿಎಂಆರ್ ಸಿಎಲ್ ಅಧಿಕಾರಿಗಳು 11.30 ಕ್ಕೆ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದರು. ನಿಗಮದ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

Tags:    

Similar News