Namma Metro | ಮೆಟ್ರೋ ದರ ಹೆಚ್ಚಳ; ಜನಾಭಿಪ್ರಾಯ ಕೋರಿದ ಬಿಎಂಆರ್​ಸಿಎಲ್

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಆರಂಭವಾದ ನಂತರ 2017 ರಲ್ಲಿ ಟಿಕೆಟ್ ದರವನ್ನು ಶೇ 10-15 ರಷ್ಟು ಹೆಚ್ಚಿಸಲಾಗಿತ್ತು. ಪ್ರಸ್ತುತ, ನಮ್ಮ ಮೆಟ್ರೋ ಟಿಕೆಟ್ ಕನಿಷ್ಠ ದರವು 10 ರೂ. ಮತ್ತು ಗರಿಷ್ಠ 60 ರೂ. ಇದೆ.;

Update: 2024-10-04 08:40 GMT
ನಮ್ಮ ಮೆಟ್ರೋ
Click the Play button to listen to article

ನಮ್ಮ ಮೆಟ್ರೋ ಎರಡನೇ ಬಾರಿಗೆ ಟಿಕೆಟ್‌ ದರ ಹೆಚ್ಚಳ ಮಾಡಲು ಮುಂದಾಗಿದೆ. ಈ ವಿಚಾರವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬುಧವಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ‘ಮೆಟ್ರೊ ರೈಲು ದರ ನಿಗದಿ ಸಮಿತಿ’ಗೆ ಅಕ್ಟೋಬರ್ 21 ರೊಳಗೆ ಸಲಹೆಗಳನ್ನು ನೀಡುವಂತೆ ನಾಗರಿಕರನ್ನು ಕೋರಿದೆ.

ಸಾರ್ವಜನಿಕರ ಅಭಿಪ್ರಾಯ ಕೇಳಿದ ನಮ್ಮ ಮೆಟ್ರೋ 

ನಾಗರಿಕರು ತಮ್ಮ ಸಲಹೆಗಳನ್ನು ffc@bmrc.co.in ಗೆ ಇಮೇಲ್ ಮಾಡಬಹುದು ಅಥವಾ 3ನೇ ಮಹಡಿ, ‘ಸಿ’ ಬ್ಲಾಕ್, ಬಿಎಂಟಿಸಿ ಕಾಂಪ್ಲೆಕ್ಸ್, ಕೆಹೆಚ್​​ ರಸ್ತೆ, ಶಾಂತಿನಗರ, ಬೆಂಗಳೂರು-560027 ಈ ವಿಳಾಸಕ್ಕೆ ಪತ್ರ ಬರೆದು ‘ಮೆಟ್ರೊ ರೈಲು ದರ ನಿಗದಿ ಸಮಿತಿ’ ಅಧ್ಯಕ್ಷರಿಗೆ ಅಭಿಪ್ರಾಯ ತಿಳಿಸಬಹುದು ಎಂದು ಬಿಎಂಆರ್​​ಸಿಎಲ್ ತಿಳಿಸಿದೆ.

ಇದು ಮೆಟ್ರೋ ರೈಲ್ವೇ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002 ರ ಸೆಕ್ಷನ್ 33 ಮತ್ತು 34 ರ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ರಚಿಸಲಾದ ಬಿಎಂಆರ್​ಸಿಎಲ್​​ನ ಮೊದಲ ದರ ನಿಗದಿ ಸಮಿತಿಯಾಗಿದೆ.

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಆರಂಭವಾದ ನಂತರ 2017 ರಲ್ಲಿ ಟಿಕೆಟ್ ದರವನ್ನು ಶೇ 10-15 ರಷ್ಟು ಹೆಚ್ಚಿಸಲಾಗಿತ್ತು. ಪ್ರಸ್ತುತ, ನಮ್ಮ ಮೆಟ್ರೋ ಟಿಕೆಟ್ ಕನಿಷ್ಠ ದರವು 10 ರೂ. ಮತ್ತು ಗರಿಷ್ಠ 60 ರೂ. ಇದೆ. ಗರಿಷ್ಠ ದರವು ನೇರಳೆ ಮತ್ತು ಹಸಿರು ಮಾರ್ಗಗಳೆರಡರಲ್ಲೂ ದೀರ್ಘ ಪ್ರಯಾಣಕ್ಕೆ ಅನ್ವಯಿಸುತ್ತದೆ. ವೈಟ್‌ಫೀಲ್ಡ್-ಚಲ್ಲಘಟ್ಟ ನಡುವಣ ದೂರ 43.49 ಕಿಮೀ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್-ನಾಗಸಂದ್ರ ನಡುವಣ ದೂರ 30.32 ಕಿಮೀ ಇದ್ದರೂ ಅವುಗಳ ದರ ಒಂದೇ (60 ರೂ) ಆಗಿದೆ. ಸ್ಮಾರ್ಟ್‌ಕಾರ್ಡ್‌ಗಳು ಮತ್ತು ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಬಳಸುವ ಪ್ರಯಾಣಿಕರಿಗೆ ಶೇ.5 ರಷ್ಟು ರಿಯಾಯಿತಿ ಸಿಗುತ್ತದೆ.

ನಮ್ಮ ಮೆಟ್ರೋ ಆರಂಭವಾದಾಗಿನಿಂದ ಉತ್ತಮ ಲಾಭದಲ್ಲಿದೆ. 2022-23ರಲ್ಲಿ 422.61 ಕೋಟಿ ಹಾಗೂ 2023-24ರಲ್ಲಿ 573.91 ಕೋಟಿ ಆದಾಯವಿತ್ತು ಎಂದು ಮೆಟ್ರೋ ರೈಲು ನಿಗಮ ನಿಯಮಿತ  ತಿಳಿಸಿದೆ. ಆದರೆ ಸದ್ಯ ಹೊಸ ಮಾರ್ಗಗಳನ್ನು ವಿಸ್ತರಿಸುತ್ತಿರುವ ಹಿನ್ನಲೆ ವೆಚ್ಚ ಹೆಚ್ಚಳವಾಗುತ್ತಿದೆ. ಇದಕ್ಕಾಗಿ ಪಡೆದ ಸಾಲವನ್ನು ಮರುಪಾವತಿ ಮಾಡಬೇಕಿದೆ. ಹೀಗಾಗಿ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಮೆಟ್ರೋದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೀಗಾಗಿ ಶೀಘ್ರದಲ್ಲಿಯೇ ಮೆಟ್ರೋ ಟಿಕೆಟ್ ದರದಲ್ಲಿ ಹೆಚ್ಚಳವಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

Tags:    

Similar News