Namma Metro Fare Hike | ಶೇ 20ಕ್ಕೆ ಕುಸಿದ ಪ್ರಯಾಣಿಕರ ಸಂಖ್ಯೆ; ಶೇ 75.4 ಮಂದಿಯಿಂದ ಅನಗತ್ಯ ಪ್ರಯಾಣ ರದ್ದು
ಗ್ರೀನ್‌ಪೀಸ್ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 72.9ರಷ್ಟು ಮಂದಿ ಪರಿಷ್ಕೃತ ಸಾರಿಗೆ ವೆಚ್ಚವು "ನಾವು ಒಂದು ಹೊತ್ತಿನ ಊಟಕ್ಕೆ ವ್ಯಯಿಸುವ ಖರ್ಚಿಗೆ ಸಮನಾಗಿದೆ ಅಥವಾ ಅದಕ್ಕಿಂತಲೂ ತುಸು ಹೆಚ್ಚೇ ಇದೆ," ಎಂದು ಅಭಿಪ್ರಾಯ ಪಟ್ಟಿದ್ದಾರೆ.;
"ನಮ್ಮ ಮೆಟ್ರೋ" ಪ್ರಯಾಣ ದರ ಏರಿಕೆಯಿಂದ ಪ್ರಯಾಣಿಕರ ಜೇಬು ಸುಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸಮೀಕ್ಷೆಯೊಂದರ ಪ್ರಕಾರ ಮೆಟ್ರೋ ಪ್ರಯಾಣ ದರ ಏರಿಕೆಯಿಂದಾಗಿ ಶೇಕಡಾ 75.4 ರಷ್ಟು ಪ್ರಯಾಣಿಕರು ಅನಿವಾರ್ಯವಲ್ಲದ ಮೆಟ್ರೋ ಪ್ರಯಾಣವನ್ನು ರದ್ದುಗೊಳಿಸುತ್ತಿದ್ದಾರೆ. ವಿಶೇಷವೆಂದರೆ, ಶೇಕಡಾ 38.2 ರಷ್ಟು ಮಹಿಳೆಯರು ತಮ್ಮ ಅಗತ್ಯದ ಪ್ರಯಾಣವನ್ನು ಹೊರತುಪಡಿಸಿ ಇತರೆ ಪ್ರಯಾಣಗಳನ್ನು ಮೊಟಕುಗೊಳಿಸಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆಯ ನಂತರ ಗ್ರೀನ್‌ಪೀಸ್ ಇಂಡಿಯಾ ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಕಡಿಮೆ ಆದಾಯ ಹೊಂದಿರುವ ವರ್ಗ, ವಿದ್ಯಾರ್ಥಿಗಳು ಮತ್ತು ಕೆಲಸಕ್ಕೆ ಹೋಗುವವರ ಮೇಲೆ ಪ್ರಯಾಣ ದರ ಏರಿಕೆ ಹೆಚ್ಚಿನ ಹೊರೆ ಹೊರಿಸಿದೆ ಎಂಬುದನ್ನು ವಿವರಿಸಿದೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇಕಡಾ 72.9ರಷ್ಟು ಮಂದಿ ಪರಿಷ್ಕೃತ ಸಾರಿಗೆ ವೆಚ್ಚವು "ನಾವು ಒಂದು ಹೊತ್ತಿನ ಊಟಕ್ಕೆ ವ್ಯಯಿಸುವ ಖರ್ಚಿಗೆ ಸಮನಾಗಿದೆ ಅಥವಾ ಅದಕ್ಕಿಂತಲೂ ತುಸು ಹೆಚ್ಚೇ ಇದೆ," ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪುರುಷರಿಗಿಂತ ಹೆಚ್ಚಾಗಿ ತಮ್ಮ ಓಡಾಟಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಮಹಿಳೆಯರು ಮೆಟ್ರೋ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸುತ್ತಿದ್ದಾರೆ. ಇದು ಅವರ ಓಡಾಟ ಮತ್ತು ಸುರಕ್ಷತೆ ಎರಡರ ಮೇಲೂ ಪ್ರಭಾವ ಬೀರುತ್ತಿದೆ. ಇದಲ್ಲದೆ ದರ ಏರಿಕೆಯು ವಿದ್ಯಾರ್ಥಿಗಳು ಮತ್ತು ಕೆಲಸ ಹೋಗಲು ನಿತ್ಯವೂ ಮೆಟ್ರೋ ಅವಲಂಬಿಸಿರುವವರನ್ನು ಮೆಟ್ರೋ ಸಂಚಾರದಿಂದ ವಿಮುಖರಾಗುವಂತೆ ಮಾಡುತ್ತಿದೆ.
ದರ ಏರಿಕೆಯಿಂದಾದ ಪರಿಣಾಮ
"ನಮ್ಮ ಮೆಟ್ರೋ"ದ ಪ್ರಯಾಣ ದರ ಏರಿಕೆಯನ್ನು ವಿರೋಧಿಸುವುದರೊಂದಿಗೆ, ಪರಿಷ್ಕೃತ ದರವನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ, ಮೆಟ್ರೋ ಪ್ರಯಾಣಿಕರು ಮತ್ತು ಬೆಂಗಳೂರಿನ ನಾಗರಿಕರು ನಮ್ಮ ಮೆಟ್ರೋದ ಒಳಗೆ ಪ್ರತಿಭಟನೆ ನಡೆಸಿದ್ದರು.ಮೊದಲು ಎಂದರೆ ಫೆಬ್ರವರಿ 9 ರಂದು ಮೆಟ್ರೋದ ಸಂಚಾರ ದರವನ್ನು ಏರಿಸಲಾಗಿತ್ತು.
ಒಟ್ಟಾರೆಯಾಗಿ ಪ್ರಯಾಣ ದರ ಏರಿಕೆಯ ನಂತರ ನಮ್ಮ ಮೆಟ್ರೋ ಪ್ರಯಾಣಿಕರ ಪ್ರಮಾಣ ಒಟ್ಟಾರೆಯಾಗಿ ಶೇಕಡಾ 13 ರಷ್ಟು ಕುಸಿತ ಕಂಡಿದೆ. ಫೆಬ್ರವರಿಯಲ್ಲಿ ತಿಂಗಳೊಂದರಲ್ಲಿಯೇ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 20 ರಷ್ಟು ಇಳಿಕೆ ಕಂಡುಬಂದಿದ್ದು, ಇದು ಪ್ರಯಾಣಿಕರಿಗೆ ಬೆಲೆ ಏರಿಕೆ ಹೊರೆಯಾಗಿದೆ ಎಂಬುದನ್ನು ಸೂಚಿಸುತ್ತಿದೆ.
ಸಮೀಕ್ಷೆಯಲ್ಲಿ ಕಂಡುಬಂದ ಪ್ರಮುಖ ಅಂಶಗಳು
• ಈ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇಕಡಾ 40.4 ಜನರು ಮೆಟ್ರೋವನ್ನು ತಮ್ಮ ಪ್ರಾಥಮಿಕ ಸಾರಿಗೆ ವಿಧಾನವಾಗಿ ಬಳಸುತ್ತಾರೆ.
• ಶೇಕಡಾ 62.9 ರಷ್ಟು ಜನರು ತಮ್ಮ ಸಂಚಾರಕ್ಕಾಗಿ ಮೆಟ್ರೋ ಮತ್ತು ಬಸ್ಸುಗಳು ಸೇರಿದಂತೆ ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿದ್ದಾರೆ
• ಶೇಕಡಾ 73.4 ರಷ್ಟು ಜನರು ಸಾರಿಗೆಗಾಗಿ ದಿನವೊಂದಕ್ಕೆ ಸುಮಾರು 50 ರಿಂದ150 ರೂ. ಖರ್ಚು ಮಾಡುತ್ತಾರೆ.
• ದರ ಹೆಚ್ಚಳವು ಮೆಟ್ರೋ ಪ್ರಯಾಣವನ್ನು ದುಬಾರಿಯನ್ನಾಗಿ ಮಾಡಿದೆ ಎಂದು ಶೇಕಡಾ 68 ರಷ್ಟು ಪ್ರಯಾಣಿಕರು ಅಭಿಪ್ರಾಯಪಡುತ್ತಾರೆ.
• ಶೇಕಡಾ 75.4 ರಷ್ಟು ಪ್ರಯಾಣಿಕರು ಹೆಚ್ಚುತ್ತಿರುವ ಸಾರಿಗೆ ವೆಚ್ಚದಿಂದಾಗಿ ಅನಿವಾರ್ಯವಲ್ಲದ ಪ್ರಯಾಣವನ್ನು ರದ್ದುಗೊಳಿಸುತ್ತಿದ್ದಾರೆ.
• ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆಯಿಂದಾಗಿ ಶೇಕಡಾ 38.2 ರಷ್ಟು ಮಹಿಳೆಯರು ತಮ್ಮ ಅಗತ್ಯದ ಪ್ರಯಾಣವನ್ನು ಹೊರತುಪಡಿಸಿ ಇತರೆ ಪ್ರಯಾಣಗಳನ್ನು ಮೊಟಕುಗೊಳಿಸಿದ್ದಾರೆ.
• ಹೆಚ್ಚಿನವರು ಈ ದರ ಏರಿಕೆಯು ಅನ್ಯಾಯ ಮತ್ತು ನಗರದಲ್ಲಿ ಸುಗಮ ಸಂಚಾರಕ್ಕೆ ಅಡ್ಡಿ ಒಡ್ಡುತ್ತಿದೆ ಎಂದು ಭಾವಿಸುತ್ತಾರೆ.
• ದುಬಾರಿ ಪ್ರಯಾಣದರವನ್ನು ರದ್ದುಗೊಳಿಸಿ ಕೈಗೆಟುಕುವ ದರವನ್ನುನಿಗದಿಪಡಿಸಿಲು ಅನೇಕ ಪ್ರಯಾಣಿಕರು ಸಮೀಕ್ಷೆಯಲ್ಲಿ ಒತ್ತಾಯಿಸಿದ್ದಾರೆ.
ಗ್ರೀನ್‌ಪೀಸ್ ಒತ್ತಾಯ
ದರ ಏರಿಕೆಯನ್ನು ವಿರೋಧಿಸಿ ಗ್ರೀನ್‌ಪೀಸ್ ಇಂಡಿಯಾ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ಗೆ ಪತ್ರ ಬರೆದಿದ್ದು ಈ ಮೂಲಕ ನಮ್ಮ ಮೆಟ್ರೋ ಪರಿಷ್ಕೃತ ದರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಇದರೊಂದಿಗೆ ಪ್ರಯಾಣಿಕರ ಮೇಲೆ ತನ್ನ ಖರ್ಚು ವೆಚ್ಚದ ಹೊರೆಯನ್ನು ವರ್ಗಾಯಿಸುವ ಬದಲು ಎಲ್ಲರ ಕೈಗೆಟುಕುವ, ಲಿಂಗ ಸೂಕ್ಷ್ಮ ಮತ್ತು ಅಂಗವಿಕಲ ಸ್ನೇಹಿ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ. ಪ್ರಯಾಣ ದರ ಏರಿಕೆಯು ನಗರದ ಜನರ ಜೀವನದಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿದೆ, ಹಲವಾರು ಪೋಷಕರು ತಮ್ಮ ಮಕ್ಕಳ ಶಾಲೆಗಳನ್ನು ಬದಲಾಯಿಸಲು ಮತ್ತು ಕಡಿಮೆ ಆದಾಯದ ಗುಂಪುಗಳ ಜನರು ಇತರ ಸಾರ್ವಜನಿಕ ಸಾರಿಗೆಯನ್ನು ಬಳಸಲು ಮುಂದಾಗುತ್ತಿದ್ದಾರೆ.
ವಾಯು ಮಾಲಿನ್ಯಕ್ಕೆ ಕೊಡುಗೆ
ಬೆಂಗಳೂರು ಈಗಾಗಲೇ ವಾಯುಮಾಲಿನ್ಯ ಮತ್ತು ಬಿಸಿಗಾಳಿಗಳಂತಹ ಹವಾಮಾನ ಬದಲಾವಣೆಯ ತೀವ್ರ ಪರಿಣಾಮಗಳನ್ನು ಎದುರಿಸುತ್ತಿದೆ ಮತ್ತು ಇದರೊಂದಿಗೆ ಇತರ ಪ್ರಮುಖ ನಗರಗಳಿಗೆ ಹೋಲಿಸಿದಾಗ ಹೆಚ್ಚಿನ ಮಟ್ಟದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳಿಗೂ ಗುರಿಯಾಗುತ್ತಿದೆ. ಸಂಚಾರ ದಟ್ಟಣೆಯನ್ನು ನಿಭಾಯಿಸಲು ಮತ್ತು ಹವಾಮಾನ ಬದಲಾವಣೆಯ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ದಕ್ಷತೆಯಿಂದ ಕಾರ್ಯ ನಿರ್ವಹಿಸಬಲ್ಲ ಸಾರ್ವಜನಿಕ ಸಾರಿಗೆಯಲ್ಲಿ ಹೆಚ್ಚಿನ ಹೂಡಿಕೆಯ ಅಗತ್ಯವಿದೆ ಎಂದು ಗ್ರೀನ್‌ಪೀಸ್ ಅಭಿಪ್ರಾಯಪಟ್ಟಿದೆ.
ಕಠಿಣ ಪಾರ್ಕಿಂಗ್ ನೀತಿ ಬೇಕು
ದರ ಹೆಚ್ಚಳದ ಬದಲು, ಸಾರಿಗೆ ದಟ್ಟಣೆ ಉಂಟುಮಾಡುವ ವಾಹನಗಳಿಂದ ಪಡೆಯುವ ಶುಲ್ಕಗಳು ಮತ್ತು ಕಠಿಣ ಪಾರ್ಕಿಂಗ್ ನೀತಿಗಳಂತಹ ಕ್ರಮಗಳು ಅತಿಯಾದ ಕಾರು ಬಳಕೆಯನ್ನು ತಡೆಯುವುದರ ಜೊತೆಗೆ ಸರ್ಕಾರಕ್ಕೆ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ. ಪ್ರಸ್ತಾವಿತ ₹19,000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುರಂಗ ಯೋಜನೆಯಂತಹ ಕಾರು ಕೇಂದ್ರಿತ ಮೂಲಸೌಕರ್ಯವು ಸಾರಿಗೆ ದಟ್ಟಣೆಗೆ ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತದೆ. ಇದರ ಅರಿವಿದ್ದೂ ಸುಸ್ಥಿರ ಸಾರಿಗೆ ಪರಿಹಾರಗಳಿಗೆ ಮೀಸಲಾದ ಹಣವನ್ನು ಬೇರೆ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿರುವುದು ವಿಪರ್ಯಾಸ ಎಂದು ಅದು ಅಭಿಪ್ರಾಯಪಟ್ಟಿದೆ.
ಗ್ರೀನ್‌ಪೀಸ್ ಇಂಡಿಯಾದ ಪ್ರಚಾರಕ ಆಕಿಜ್ ಫಾರೂಕ್ ಮಾತನಾಡಿ, “ಸಾರ್ವಜನಿಕ ಸಾರಿಗೆಯು ಜನರಿಗೆ ಸಾರಿಗೆ ಸೇವಾಸೌಲಭ್ಯವನ್ನು ಒದಗಿಸಬೇಕೆ ಹೊರತು ಲಾಭ ಮಾಡುವ ಉದ್ಯಮವಾಗಬಾರದು. ಬೆಂಗಳೂರಿನ ಮೆಟ್ರೋ ಪ್ರಯಾಣ ದರ ಏರಿಕೆಯು ಈಗಾಗಲೇ ಕೈಗೆಟುಕುವ ದರದಲ್ಲಿ ಒದಗಬಲ್ಲ, ಎಲ್ಲರಿಗೂ ಪ್ರವೇಶವಿರುವ ಸಾರಿಗೆ ವ್ಯವಸ್ಥೆಗಾಗಿ ಹೋರಾಡುತ್ತಿರುವ ಪ್ರಯಾಣಿಕರ ಮೇಲೆ ಮತ್ತಷ್ಟು ದರ ಏರಿಕೆಯ ಬರೆ ಎಳೆದಿದೆ. ನಮ್ಮ ನಗರಗಳು ತೀವ್ರ ಪರಿಸರ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವಾಗ, ಕೈಗೆಟುಕುವ ಮತ್ತು ಪರಿಣಾಮಕಾರಿ ಸಾಮೂಹಿಕ ಸಾರಿಗೆಯಲ್ಲಿ ಹೂಡಿಕೆ ಮಾಡುವುದು ಅತ್ಯಗತ್ಯ. ಸಾರ್ವಜನಿಕ ಸಾರಿಗೆಗಾಗಿಯೇ ಒಂದು ಮೀಸಲಾದ ಬಜೆಟ್ ಅಗತ್ಯವಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ನಿಟ್ಟಿನಲ್ಲಿ ಸಾಮೂಹಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಬೇಕು. ಪ್ರಯಾಣಿಕರು ಸಾರ್ವಜನಿಕ ಸಾರಿಗೆಯಲ್ಲಿಯೇ ಪ್ರಯಾಣಿಸುವಂತೆ ಅವರನ್ನು ಉತ್ತೇಜಿಸಲು ಸರ್ಕಾರವು ಹವಾಮಾನ ಟಿಕೆಟ್‌ಗಳನ್ನು ಪರಿಚಯಿಸಬೇಕು” ಎಂದರು.
ಭಾನುವಾರವೂ ಪ್ರತಿಭಟನೆ
ʻಮೆಟ್ರೋ ಬೆಲೆ ಏರಿಕೆ ಅನ್ಯಾಯʼ, ʻಅಹಿತಕರ ಬೆಲೆ ಏರಿಕೆʼ, ʻಅಸಮಾನ ನಗರಗಳುʼ, ʻಮೆಟ್ರೋ ಜನರಿಗೆ, ಲಾಭ ಯಾರಿಗೆ?ʼ ಮುಂತಾದ ಘೋಷಣೆಗಳನ್ನು ಹೊಂದಿದ ಫಲಕಗಳನ್ನು ಹಿಡಿದ ಪ್ರಯಾಣಿಕರು ಮತ್ತು ನಗರ ನಿವಾಸಿಗಳು ಭಾನುವಾರ ಬೆಳಗ್ಗೆ ನಗರದ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಒಟ್ಟುಗೂಡಿ ಶಾಂತಿಯುತ ಪ್ರತಿಭಟನೆ ನಡೆಸಿದರು.
ನ್ಯಾಯಯುತ ಪ್ರಯಾಣ ದರಗಳಿಗಾಗಿ ಆಗ್ರಹಿಸುವ ಫಲಕಗಳು, ಮತ್ತು ಬ್ಯಾನರ್‌ಗಳನ್ನು ಹಿಡಿದು ಈ ಗುಂಪು ಎಂಜಿ ರಸ್ತೆಗೆ ಹೋಗುವ ಮೆಟ್ರೋ ರೈಲಿನಲ್ಲಿ ಪ್ರಯಾಣಿತು. ಈ ಮೌನ ಆದರೆ ದಿಟ್ಟ ಪ್ರತಿಭಟನೆಯು ಶ್ರೀ ಸಾಮಾನ್ಯರ ಮೇಲೆ ತೆರಿಗೆ ಹೆಚ್ಚಳದ ಹೊರೆಯನ್ನು ಖಂಡಿಸುತ್ತದೆ. ಈ ಪ್ರತಿಭಟನೆಗೆ ಮೆಟ್ರೋ ಪ್ರಯಾಣಿಕರ ಸಹಕಾರವೂ ವ್ಯಕ್ತವಾಯಿತು.
ಒಂದು ಕಾಲದಲ್ಲಿ ಎಲ್ಲರ ಕೈಗೆಟುಕುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಾರ್ವಜನಿಕ ವ್ಯವಸ್ಥೆಯಾಗಿದ್ದ ಬೆಂಗಳೂರಿನ ನಮ್ಮ ಮೆಟ್ರೋ , ಪ್ರಯಾಣ ದರ ಹೆಚ್ಚಳದೊಂದಿಗೆ ಇಂದು ಎಲ್ಲರನ್ನು ಹೊರಗಿಡುವ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ಈ ಬೆಲೆ ಏರಿಕೆಯು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ಅನೌಪಚಾರಿಕ ವಲಯದ ಕಾರ್ಮಿಕರು, ಮಹಿಳೆಯರು ಮತ್ತು ಕಡಿಮೆ ಆದಾಯದ ಗುಂಪುಗಳು, ಕಚೇರಿಗೆ ಹೋಗುವವರು ಸೇರಿದಂತೆ ಇತರರ ಮೇಲೆ ಅಸಮಾನವಾಗಿ ಪರಿಣಾಮ ಬೀರುತ್ತದೆ. ಇದರಿಂದಾಗಿ ಅನೇಕ ಪ್ರಯಾಣಿಕರು ಈಗ ದುಬಾರಿ ಮತ್ತು ಹೆಚ್ಚು ಮಾಲಿನ್ಯಕಾರಕ ಸಂಚಾರ ಪರ್ಯಾಯಗಳಿಗೆ ಬದಲಾಗಬೇಕಾದ ಒತ್ತಡ ಹೆಚ್ಚಿದೆ. ಇದರಿಂದಾಗಿ ರಸ್ತೆ ದಟ್ಟಣೆ ಮತ್ತು ವಾಯು ಮಾಲಿನ್ಯ ಹೆಚ್ಚುತ್ತಿದೆ. ಈ ಮಾಲಿನ್ಯವು ನಾಗರಿಕರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಮತ್ತು ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯಪಡಲಾಗಿದೆ.