NABARD Grant Cut | ನಬಾರ್ಡ್‌ ಕೃಷಿ ಸಾಲ ಹೆಚ್ಚಳ ಸಾಧ್ಯವಿಲ್ಲ: ಸಿಎಂ ಮನವಿಗೆ ಸೊಪ್ಪು ಹಾಕದ ಹಣಕಾಸು ಸಚಿವೆ

'ನಬಾರ್ಡ್‌ನಿಂದ ರಿಯಾಯಿತಿ ದರದಲ್ಲಿ ನೀಡಲಾಗುವ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ' ಎಂದು ಹೇಳುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿಯನ್ನು ಖಡಾಖಂಡಿತವಾಗಿ ತಳ್ಳಿಹಾಕಿದ್ದಾರೆ.;

Update: 2024-11-22 05:12 GMT
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿದರು.
Click the Play button to listen to article

'ನಬಾರ್ಡ್‌ನಿಂದ ರಿಯಾಯಿತಿ ಬಡ್ಡಿ ದರದಲ್ಲಿ ನೀಡಲಾಗುವ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

2024-25ನೇ ಹಣಕಾಸು ವರ್ಷದ ಸಾಲದ ಮಿತಿಯನ್ನು ಹೆಚ್ಚಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ನವದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.

ನಬಾರ್ಡ್ ಸಾಲದ ಮೊತ್ತ ಕಡಿತ ಮಾಡಿದ್ದರಿಂದಾಗಿ ರಾಜ್ಯದಲ್ಲಿ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ನೀಡಲಾಗುತ್ತಿರುವ ಕೃಷಿ ಸಾಲ ನೀಡಲು ಹಣಕಾಸಿನ ಕೊರತೆ ಉಂಟಾಗಿದೆ. ಇದರಿಂದಾಗಿ ಸಹಕಾರ ರಂಗದ ಸಾಲವನ್ನೇ ನಂಬಿಕೊಂಡಿರುವ ರಾಜ್ಯದ ಬಹುತೇಕ ರೈತರ ಕೃಷಿ ಚಟುವಟಿಕೆಗೆ ಭಾರೀ ಹೊಡೆತ ಬೀಳಿದೆ ಎಂದು ಸಿದ್ದರಾಮಯ್ಯ ತಮ್ಮ ಮನವಿಯಲ್ಲಿ ವಿವರಿಸಿದ್ದರು.

ಆದರೆ, ರಾಜ್ಯದ ಬಹುಪಾಲು ಕೃಷಿಕರ ಪರವಾಗಿ ಮುಖ್ಯಮಂತ್ರಿಗಳು ಮಾಡಿದ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಕೇಂದ್ರ ಹಣಕಾಸು ಸಚಿವರು, ರಾಷ್ಟ್ರೀಕೃತ ಬ್ಯಾಂಕ್‌ಗಳು ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ಹೀಗಾಗಿ, ನಬಾರ್ಡ್ ಮೂಲಕ ನೀಡುತ್ತಿರುವ ಕೃಷಿ ಸಾಲದ ಮೊತ್ತವನ್ನು ಕಡಿತಗೊಳಿಸಲಾಗಿದೆ. ಜತೆಗೆ, ಎಲ್ಲ ರಾಜ್ಯಗಳ ಸಾಲದ ಪ್ರಮಾಣವನ್ನೂ ಕಡಿತಗೊಳಿಸಲಾಗಿದೆ. ಕರ್ನಾಟಕದ ಸಾಲ ಮಾತ್ರ ಕಡಿತವಾಗಿಲ್ಲ. ಕರ್ನಾಟಕಕ್ಕೆ ಪ್ರತ್ಯೇಕ ನೀತಿ ರೂಪಿಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ ನಬಾರ್ಡ್‌ 5,600 ಕೋಟಿ ರೂ. ಸಾಲ ನೀಡಿತ್ತು. ಈ ವರ್ಷಕ್ಕೆ ನಾವು 9,162 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದೆವು. ಆದರೆ ಕೇವಲ 2,340 ಕೋಟಿ ರು. ಮಾತ್ರ ಸಾಲ ಘೋಷಿಸಲಾಗಿದೆ. ಇದು ಕಳೆದ ಬಾರಿಗಿಂತ ಶೇ.58ರಷ್ಟು ಕಡಿಮೆ ಎಂದು ದೆಹಲಿಯಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ನಿಯೋಗ ಹಣಕಾಸು ಸಚಿವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿತ್ತು. ಕೇಂದ್ರ ಸಚಿವೆಗೆ ಈ ಕುರಿತು ವಿವರವಾದ ವರದಿ ನೀಡಿದ ಸಿದ್ದರಾಮಯ್ಯ, 2023-24ನೇ ಸಾಲಿನಲ್ಲಿ ಕರ್ನಾಟಕ ರೈತರಿಗೆ 22,902 ಕೋಟಿ ರು. ಅಲ್ಪಾವಧಿ ಸಾಲ ನೀಡಿತ್ತು. 2024-25ರಲ್ಲಿ 35 ಲಕ್ಷ ರೈತರಿಗೆ 25,000 ಕೋಟಿ ರೂ. ಅಲ್ಪಾವಧಿ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ವಿವರಿಸಿದ್ದರು.

ನಬಾರ್ಡ್‌ ಸಾಲ ಮೊತ್ತ ದಿಢೀರ್‌ ಕಡಿತ ಮಾಡುವ ನಿರ್ಧಾರದಿಂದ ಕರ್ನಾಟಕದ ಕೃಷಿ ಸಹಕಾರ ಕ್ಷೇತ್ರಕ್ಕೆ ಹೊಡೆತ ಬೀಳಲಿದೆ. ಕರ್ನಾಟಕದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು ಬೆಳೆ ಚೆನ್ನಾಗಿ ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಕೃಷಿ ಕಾರ್ಯಗಳಿಗಾಗಿ ಸಾಲವನ್ನು ಅವರು ಎದುರು ನೋಡುತ್ತಿದ್ದಾರೆ. ಹೀಗಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ನಬಾರ್ಡ್‌ ಕೂಡಲೇ ಕರ್ನಾಟಕಕ್ಕೆ ನೀಡುವ ಅಲ್ಪಾವಧಿ ಕೃಷಿ ಸಾಲದ ಮೊತ್ತವನ್ನು ಪರಿಷ್ಕರಣೆ ಮಾಡಬೇಕು ಎಂದು ನಿರ್ಮಲಾ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದರು.

ಆದರೆ, ಇದೀಗ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ರಾಜ್ಯದ ರೈತರ ಹಿತ ಕಾಯುವ ವಿಷಯದಲ್ಲಿ ತಾವೇನೂ ಮಾಡಲಾಗದು ಎಂದು ಕೈಚೆಲ್ಲಿದ್ದಾರೆ. ಆ ಮೂಲಕ ಜಿಎಸ್‌ಟಿ ಪಾಲು ಹಂಚಿಕೆ, ವಿಶೇಷ ಅನುದಾನ ಬಾಕಿ ಬಿಡುಗಡೆ, ಕೇಂದ್ರದ ವಿವಿಧ ಯೋಜನೆ ಅನುದಾನ ಪಾಲು ಬಿಡುಗಡೆ ಸೇರಿದಂತೆ ಹಲವು ಆರ್ಥಿಕ ವಿಷಯಗಳಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಎಸಗುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪಗಳಿಗೆ ಇದೀಗ ನಬಾರ್ಡ್‌ ಸಾಲ ಹಂಚಿಕೆಯ ವಿಷಯ ಹೊಸ ಸೇರ್ಪಡೆಯಾದಂತಾಗಿದೆ.

Tags:    

Similar News