Mysore MUDA Scam | ಸಿದ್ದರಾಮಯ್ಯಗೆ ಮತ್ತೆರಡು ದಿನ ರಿಲೀಫ್: ಆ.31ಕ್ಕೆ ವಿಚಾರಣೆ ಮುಂದೂಡಿಕೆ

ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಶನಿವಾರ (ಆ.31) ಬೆಳಿಗ್ಗೆ 10.30ಕ್ಕೆ ಮುಂದೂಡಿದರು. ಮಧ್ಯಂತರ ತಡೆ ಆದೇಶವೂ ಮುಂದುವರಿಕೆಯಾಗಿದೆ ಎಂದು ತಿಳಿಸಿದರು. ಇದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೆರಡು ದಿನ ರಿಲೀಫ್‌ ಸಿಕ್ಕಿದೆ.

Update: 2024-08-29 11:17 GMT

ಮೈಸೂರಿನ ಮುಡಾ ನಿವೇಶನ ಹಂಚಿಕೆ ವಿವಾದ ಸಂಬಂಧ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಗುರುವಾರ ನಡೆಯಿತು. ಪರ- ವಿರೋಧ ವಾದ ಆಲಿಸಿದ ನ್ಯಾಯಾಧೀಶರು ಆ.31ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದರು.

ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ಆರಂಭಿಸಿದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸುಧೀರ್ಘವಾಗಿ ವಾದ ಮಂಡಿಸಿದರು.

ʻʻಸಿಎಂ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿಯನ್ನು ನ್ಯಾಯಾಂಗ ಪರಿಶೀಲಿಸಬಹುದು. ಈಗಾಗಲೇ ಅದರ ಬಗ್ಗೆ ಎರಡು ತೀರ್ಪುಗಳು ಬಂದಿವೆ. ಗವರ್ನರ್ ವಿವೇಚನೆಯನ್ನೇ ಬಳಸಿಲ್ಲ, ಆದರೆ ಕ್ಯಾಬಿನೆಟ್ ನಿರ್ಧಾರಕ್ಕೆ ಬದ್ಧರಾಗಿಲ್ಲʼʼ ಎಂದಿರುವುದಾಗಿ ಹೇಳಿದರು. ಆಗ ಮಾತನಾಡಿದ ನ್ಯಾಯಮೂರ್ತಿಗಳು, ʻʻಕ್ಯಾಬಿನೆಟ್​ ನಿರ್ಧಾರಕ್ಕೆ ರಾಜ್ಯಪಾಲರು ಬದ್ಧರಾಗಬೇಕಿಲ್ಲ. ಸಿಎಂ ವಿರುದ್ಧ ನಿರ್ಧಾರ ತೆಗೆದುಕೊಳ್ಳುವುದು ರಾಜ್ಯಪಾಲರ ಸ್ವತಂತ್ರ ನಿರ್ಧಾರ. ಉಳಿದೆಲ್ಲ ಪ್ರಕರಣಗಳಲ್ಲಿ ರಾಜ್ಯಪಾಲರು ಕ್ಯಾಬಿನೆಟ್​ ಸಲಹೆ ಪರಿಗಣಿಸಬೇಕು. ಈ ಪ್ರಕರಣದಲ್ಲಿ ಸಲಹೆ ಪರಿಗಣಿಸಬೇಕೆಂದಿಲ್ಲʼʼ ಎಂದು ಹೇಳಿದರು. ಇದಕ್ಕೆ ವಿವರಣೆ ನೀಡಿದ ವಕೀಲ ಸಿಂಘ್ವಿ ʻʻಸಂಪುಟ​ ನಿರ್ಣಯಕ್ಕೆ ಬದ್ಧರಾಗಿಲ್ಲ ಎಂಬ ಏಕೈಕ ಕಾರಣಕ್ಕೆ ತನಿಖೆಗೆ ಅನುಮತಿಸುವ ನಿಲುವು ಸರಿಯಲ್ಲʼʼ ಎಂದು ಹೇಳಿದರು.

ʻʻ2004-05ರಲ್ಲಿ ಈ ಪ್ರಕರಣಗಳು ನಡೆದಿವೆ. ಘಟನೆ ನಡೆದ 10 -15 ವರ್ಷಗಳ ನಂತರ ದೂರು ಸಲ್ಲಿಸಿದ್ದಾರೆ. ಅರ್ಜಿ ವಜಾ ಮಾಡಲು ಇದೊಂದೇ ಕಾರಣ ಸಾಕು. ಕಳೆದ 10-15 ವರ್ಷ ಹಳೆ ಘಟನೆಗಳಿಗೆ ಈಗಿನ ಕಾನೂನು ಅನ್ವಯಿಸಲಾಗುತ್ತಿದೆ. ಹಲವು ಕೇಸುಗಳಲ್ಲಿ ತನಿಖೆ ನಡೆದು ಚಾರ್ಜ್‌ಶೀಟ್​ ಸಲ್ಲಿಸಿದ್ದರೂ ತನಿಖೆಗೆ ಅನುಮತಿಸಿಲ್ಲ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಪ್ರಕರಣಗಳಲ್ಲಿ ಪಾಸಿಕ್ಯೂಷನ್‌​ಗೆ ಅನುಮತಿಸಿಲ್ಲʼʼ ಎಂದು ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

ಆ ಬಳಿಕ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಶನಿವಾರ (ಆ.31) ಬೆಳಿಗ್ಗೆ 10.30ಕ್ಕೆ ಮುಂದೂಡಿದರು. ಮಧ್ಯಂತರ ತಡೆ ಆದೇಶವೂ ಮುಂದುವರಿಕೆಯಾಗಿದೆ ಎಂದು ತಿಳಿಸಿದರು. ಇದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೆರಡು ದಿನ ರಿಲೀಫ್‌ ಸಿಕ್ಕಿದೆ.

ಟಿ.ಜೆ. ಅಬ್ರಾಹಂ, ಸ್ನೇಹಮಯಿ ಕೃಷ್ಣ, ಪ್ರದೀಪ್‌ ಅವರು ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಖಾಸಗಿ ದೂರು ಸಲ್ಲಿಸಿದ್ದರು. ಅದರ ಅನ್ವಯ ಸಿದ್ದರಾಮಯ್ಯ ವಿರುದ್ಧ ಸಮರ್ಪಕ ತನಿಖೆ ಅಗತ್ಯವಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅಭಿಯೋಜನೆಗೆ ಅನುಮತಿ ನೀಡಿದ್ದಾರೆ. ಆದರೆ ಸಂಪುಟದ ಸಲಹೆಯನ್ನು ಧಿಕ್ಕರಿಸಿ ಸೆಕ್ಷನ್‌ 17 (ಎ) ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 128 ಅನ್ವಯ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ ಎಂದು ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

Tags:    

Similar News