Mysore MUDA Scam | ವಿಚಾರಣೆ ಮುಕ್ತಾಯ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌ ಪೀಠ

ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ಕುರಿತ ವಾದ-ಪ್ರತಿವಾದವನ್ನು ಗುರುವಾರ ಪೂರ್ಣಗೊಳಿಸಿದ ಹೈಕೋರ್ಟ್‌, ಪ್ರಕರಣದ ತೀರ್ಪನ್ನು ಕಾಯ್ದಿರಿಸಿತು.

Update: 2024-09-12 13:30 GMT

ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ಕುರಿತ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿದ ಹೈಕೋರ್ಟ್‌, ಪ್ರಕರಣದ ತೀರ್ಪನ್ನು ಕಾಯ್ದಿರಿಸಿತು.

ಪ್ರಕರಣದ ಪರ- ವಿರುದ್ಧದ ವಾದ- ಪ್ರತಿವಾದವನ್ನು ಗುರುವಾರ ಮುಗಿಸಲು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಮೊದಲೇ ಎರಡೂ ಕಡೆಯ ವಕೀಲರಿಗೆ ಮತ್ತು ಅಡ್ವೋಕೇಟ್ ಜನರಲ್ ಗಳಿಗೆ ಸೂಚಿಸಿದ್ದರು.

ಆ ಹಿನ್ನೆಲೆಯಲ್ಲಿ ನ್ಯಾ. ನಾಗಪ್ರಸನ್ನ ಅವರ ಪೀಠದಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಆರಂಭವಾದ ಪ್ರಕರಣದ ವಿಚಾರಣೆ, ಸಂಜೆ ಏಳರವರೆಗೂ ನಡೆಯಿತು.

ಪ್ರಕರಣದ ಕುರಿತು ಈಗಾಗಲೇ ರಾಜ್ಯಪಾಲರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ರಾಜ್ಯ ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದರು.

ಆ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಮಂತ್ರಿಗಳ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು ತಮ್ಮ ವಾದ ಮುಂದುವರಿಸಿದರು. ಮಧ್ಯಾಹ್ನ 1.30ರ ವರೆಗೆ ವಾದ ಮಂಡಿಸಿದ ಬಳಿಕ ಭೋಜನ ವಿರಾಮದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿತ್ತು. ಬಳಿಕ ಮಧ್ಯಾಹ್ನ 2.30ಕ್ಕೆ ಮತ್ತೆ ವಿಚಾರಣೆ ಆರಂಭವಾಗುತ್ತಿದ್ದಂತೆ ಸಿಂಘ್ವಿ ತಮ್ಮ ವಾದ ಮುಂದುವರಿಸಿದರು.

ಬಳಿಕ ಹಿರಿಯ ವಕೀಲ ರವಿ ವರ್ಮ ಕುಮಾರ್ ಅವರು ಸಿದ್ದರಾಮಯ್ಯ ಪರವಾಗಿ ವಾದ ಮುಂದುವರಿಸಿದರು.

ಮುಖ್ಯವಾಗಿ ರಾಜ್ಯಪಾಲರು ನಿಯಮಗಳನ್ನು ಗಾಳಿಗೆ ತೂರಿ ರಾಜಕೀಯ ದಾಳವಾಗಿ ಜನಪ್ರಿಯ ಮುಖ್ಯಮಂತ್ರಿ ಹಾಗೂ ಸ್ಥಿರ ಆಡಳಿತ ಕೊಟ್ಟ ನಾಯಕನ ವಿರುದ್ಧ ದುರುದ್ದೇಶದಿಂದ ಪ್ರಾಸಿಕ್ಯೂಷನ್ಗೆ ಅವಕಾಶ ನೀಡಿದ್ದಾರೆ ಎಂಬುದನ್ನೇ ಸಿದ್ದರಾಮಯ್ಯ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ದೂರುದಾರರ ಪರ ವಕೀಲರ ಸ್ಪಷ್ಟನೆಗಳನ್ನೂ ಕೇಳಿಸಿಕೊಂಡ ಪೀಠ, ದಿನದ ಅಂತ್ಯಕ್ಕೆ ಕಲಾಪವನ್ನು ಮುಗಿಸಿದ್ದು, ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ, ತೀರ್ಪನ್ನು ಕಾಯ್ದಿರಿಸಿತು. ಸೆ.16ರಂದು ಪೀಠ ಪ್ರಕರಣದ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ತಮ್ಮ ಕುಟುಂಬಸ್ಥರಿಗೆ ಕಾನೂನುಬಾಹಿರವಾಗಿ ನಿವೇಶನ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ರಾಜ್ಯಪಾಲರು ಅನುಮತಿ ನೀಡಿದ್ದರು. ರಾಜ್ಯಪಾಲರ ಆ ಕ್ರಮವನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Tags:    

Similar News