Mysore MUDA Scam | ಮಧ್ಯಾಹ್ನ ವಿಚಾರಣೆ ಪುನರಾರಂಭ: ಎಲ್ಲರ ಚಿತ್ರ ಹೈಕೋರ್ಟಿನತ್ತ

ಕಳೆದ ಶನಿವಾರ(ಆ.31) ಸತತ ಆರು ತಾಸು ವಾದ- ವಿವಾದ ಆಲಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕ ವ್ಯಕ್ತಿ ನ್ಯಾಯಪೀಠ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು. ಇಂದು ಮಧ್ಯಾಹ್ನ 2.30ರಿಂದ ಪ್ರಕರಣದ ವಿಚಾರಣೆ ಮುಂದುವರಿಯಲಿದ್ದು, ಸದ್ಯ ಇಡೀ ರಾಜ್ಯದ ಚಿತ್ತ ಪ್ರಕರಣದ ವಿಚಾರಣೆಯ ಮೇಲೆ ನೆಟ್ಟಿದೆ.

Update: 2024-09-02 06:54 GMT

ಮೈಸೂರು ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರಣೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ರಾಜ್ಯ ಹೈಕೋರ್ಟಿನಲ್ಲಿ ಸೋಮವಾರ(ಸೆ.2)ವೂ ಮುಂದುವರಿಯಲಿದೆ.

ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದರ ವಿರುದ್ಧ ಸಿದ್ದರಾಮಯ್ಯ ಕಾನೂನು ಸಮರ ಸಾರಿದ್ದು, ಕಳೆದ ಮೂರು ಕೆಲವು ದಿನಗಳಿಂದ ಹೈಕೋರ್ಟಿನಲ್ಲಿ ನಡೆಯುತ್ತಿರುವ ವಾದ- ಪ್ರತಿವಾದಗಳು ಭಾರೀ ಕುತೂಹಲಕ್ಕೆ ಕಾರಣವಾಗಿವೆ. ಈ ನಡುವೆ, ಕಳೆದ ಶನಿವಾರ(ಆ.31) ಸತತ ಆರು ತಾಸು ವಾದ- ವಿವಾದ ಆಲಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕ ವ್ಯಕ್ತಿ ನ್ಯಾಯಪೀಠ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು. ಇಂದು ಮಧ್ಯಾಹ್ನ 2.30ರಿಂದ ಪ್ರಕರಣದ ವಿಚಾರಣೆ ಮುಂದುವರಿಯಲಿದ್ದು, ಸದ್ಯ ಇಡೀ ರಾಜ್ಯದ ಚಿತ್ತ ಪ್ರಕರಣದ ವಿಚಾರಣೆಯ ಮೇಲೆ ನೆಟ್ಟಿದೆ.

ಇಂದು ಸಿಎಂ ಸಿದ್ದರಾಮಯ್ಯ ಅವರ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ. ರಾಜ್ಯಪಾಲರ ಕಾರ್ಯದರ್ಶಿ ಪರ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದ ಮಂಡಿಸಲಿದ್ದಾರೆ.

ಕಳೆದ ಶನಿವಾರ, ಪ್ರಕರಣ ವಿಚಾರಣೆ ವೇಳೆ ಎರಡೂ ಕಡೆಯ ವಕೀಲರು ವಾದ- ಪ್ರತಿವಾದ ಮಂಡಿಸಿದ್ದರು.

ಮುಖ್ಯವಾಗಿ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ವಾದ ಆಲಿಸುತ್ತಾ, ಎಲ್ಲವೂ ಸರಿ, ಇಡೀ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವೇನು? ಎಂಬುದನ್ನು ಯಾರೊಬ್ಬರೂ ಸರಿಯಾಗಿ ಹೇಳುತ್ತಿಲ್ಲವಲ್ಲ? ಅವರ ಪಾತ್ರ ಇದರಲ್ಲಿ ಏನಿದೆ? ಎಂದು ಕೇಳಿದ್ದ ವಿಡಿಯೋ ಕ್ಲಿಪಿಂಗ್ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಶನಿವಾರದ ವಾದ-ಪ್ರತಿವಾದಗಳೇನು?

ಸಿದ್ದರಾಮಯ್ಯ ಪರ ನ್ಯಾಯಪೀಠದ ಮುಂದೆ ವಾದ ಮಂಡಿಸಿದ್ದ ವಕೀಲರು, ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಾಗ ತಮ್ಮ ವಿವೇಚನೆ ಬಳಸಿಲ್ಲ. ಭ್ರಷ್ಟಾಚಾರ ಕಾಯ್ದೆ ಸೆಕ್ಷನ್ 17ಎ ಅಡಿ ಮಾನದಂಡ ಪಾಲನೆ ಮಾಡಿಲ್ಲ. ಟಿ.ಜೆ.ಅಬ್ರಹಾಂ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಮಾತ್ತ್ರ ಸಿಎಂಗೆ ಶೋಕಾಸ್ ನೋಟಿಸ್ ನೀಡಲಾಗಿದೆ, ಉಳಿದ ಇಬ್ಬರು ಅರ್ಜಿದಾರರ ಅರ್ಜಿಗಳಿಗೆ ಸಂಬಂಧಿಸಿದಂತೆ ಶೋಕಾಶ್ ನೋಟಿಸ್ ನೀಡಿಲ್ಲ ಹಾಗೂ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬಾರದು ಎಂಬ ಸಚಿವ ಸಂಪುಟ ನಿರ್ಣಯವನ್ನು ರಾಜ್ಯಪಾಲರು ಪರಿಗಣಿಸಿಲ್ಲ ಎಂಬ ಅಂಶಗಳನ್ನು ಪ್ರಸ್ತಾಪಿಸಿದ್ದರು.

ಅದಕ್ಕೆ ಪ್ರತಿಯಾಗಿ ರಾಜ್ಯಪಾಲರ ಕಾರ್ಯದರ್ಶಿ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್, ಮುಖ್ಯವಾಗಿ ಸೆಕ್ಷನ್ 17(A) ಪ್ರಕಾರ ಮೇಲ್ನೋಟಕ್ಕೆ ಅಪರಾಧ ಅಂಶಗಳನ್ನು ಪರಿಗಣಿಸಬೇಕು, ಅದರಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ, ಪ್ರದೀಪ್ ಕುಮಾರ್ರಿಂದ ದೂರು ಸಲ್ಲಿಕೆಯಾಗಿವೆ. ಈ ಮೂವರು ಸಿಎಂ ವಿರುದ್ಧ ಒಂದೇ ರೀತಿ ಆರೋಪ ಮುಂದಿಟ್ಟಿದ್ದಾರೆ. ಎಲ್ಲ ಪ್ರಕರಣಗಳಲ್ಲಿಯೂ ಅನುಮತಿ ಕೇಳಬೇಕು ಎಂಬ ನಿಯಮವಿಲ್ಲ. ಹೀಗಾಗಿ ಉಳಿದಿಬ್ಬರ ದೂರಿನಲ್ಲಿ ಶೋಕಾಸ್ ನೋಟಿಸ್ ನೀಡುವ ಅಗತ್ಯವಿಲ್ಲ. ಸ್ವತಃ ಸಿಎಂ ವಿರುದ್ಧ ಆರೋಪ ಎದುರಾದಾಗ ಸಂಪುಟ ಸಲಹೆ ಒಪ್ಪಲೇಬೇಕೆಂದಿಲ್ಲ. ಆದರೂ ಸಚಿವ ಸಂಪುಟದ ಸಲಹೆಗೆ ರಾಜ್ಯಪಾಲರು ಪರಿಶೀಲಿಸಿ ಉತ್ತರಿಸಿದ್ದಾರೆ. ಡಿಸಿಎಂ ಸಂಪುಟ ಸಭೆ ಅಧ್ಯಕ್ಷತೆ ವಹಿಸಿದ್ದರಿಂದ ಪಕ್ಷಪಾತದ ನಿರ್ಣಯವಾಗಬಹುದು ಎಂಬ ಅಂಶಗಳನ್ನು ಮಂಡಿಸಿದರು.

Tags:    

Similar News