Mysore MUDA Case | ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿಗೆ ಲೋಕಾಯುಕ್ತ ಕ್ಲೀನ್ ಚಿಟ್?
ಡಿ ನೋಟಿಫೈ ಮಾಡುವಾಗ, ಭೂಪರಿವರ್ತನೆ ಮಾಡುವಾಗ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.;
ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ, ಅವರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ವರದಿಯಾಗಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಅವರಿಗೆ ಕ್ಲೀನ್‌ಚಿಟ್ ನೀಡಿದ್ದು, ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಎಲ್ಲೂ ಕಂಡು ಬಂದಿಲ್ಲ. ಡಿ ನೋಟಿಫೈ ಮಾಡುವಾಗ, ಭೂಪರಿವರ್ತನೆ ಮಾಡುವಾಗ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಗಳು ಹೇಳಿವೆ.
ಮುಡಾ ಆಯುಕ್ತರು, ರೆವಿನ್ಯೂ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿದೆ. ಅಧಿಕಾರಿಗಳು ಅಪರಾಧ ಎಸಗಿರುವ ಬಗ್ಗೆ ಮುಂದೇನು ಮಾಡಬೇಕೆಂಬುದರ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುವುದು ಎಂದು ಲೋಕಾಯುಕ್ತ ಹೇಳಿದೆ ಎಂದು ಲೋಕಾಯುಕ್ತ ಮೂಲವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಮುಡಾ ಹಗರಣದ ತನಿಖಾ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಕೋರ್ಟ್ಗೆ ಸಲ್ಲಿಕೆ ಮಾಡಲಿದ್ದಾರೆ. ಲೋಕಾಯುಕ್ತ ಎಸ್ಪಿ ಟಿಜೆ ಉದೇಶ್ ನೇತೃತ್ವದಲ್ಲಿ ತನಿಖೆ ನಡೆದು ವರದಿ ಸಿದ್ಧಪಡಿಸಲಾಗಿದೆ.
ಕೆಸರೆ ಜಮೀನು ಸರ್ವೇ ನಂ.464 ರ 3.16 ಎಕರೆ ಭೂಮಿ ಪರಿವರ್ತನೆಗೆ ಪ್ರತಿಯಾಗಿ ಮುಡಾದಿಂದ 14 ಸೈಟ್ ಗಳನ್ನ ಪಡೆದುಕೊಂಡ ನಿಯಮಾವಳಿಗಳ ಕುರಿತು ಎಲ್ಲಾ ಹಂತದಲ್ಲೂ ತನಿಖೆ ಮಾಡಲಾಗಿದೆ. ತನಿಖೆಯಲ್ಲಿ ಅಧಿಕಾರಿಗಳ ದೋಷಗಳು ಕಂಡು ಬಂದಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರಾಗಲೀ ಹಾಗೂ ಅವರ ಪತ್ನಿಯಾಗಲಿ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಲೋಕಾಯುಕ್ತ ತನ್ನ ವರದಿಯಲ್ಲೇ ಹೇಳಿದೆ ಎನ್ನಲಾಗಿದೆ. ಲೋಕಾಯುಕ್ತರು ಅಂತಿಮ ಹಂತದ ರಿಪೋರ್ಟ್ ತಯಾರಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಪ್ರಭಾವ ಇಲ್ಲದೆ ಸಾಧ್ಯವೇ ಇಲ್ಲ: ಸ್ನೇಹಮಯಿ ಕೃಷ್ಣ
ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ನೀಡಲಾಗಿದೆ ಎಂಬ ವರದಿಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮುಡಾ ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ, ಸಿಎಂ ಪ್ರಭಾವ ಇಲ್ಲದೆ ಅಧಿಕಾರಿಗಳು ಅಕ್ರಮ ಎಸಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಲೋಕಾಯುಕ್ತ ವರದಿಯಲ್ಲಿ ಸಿಎಂ ಹಾಗೂ ಅವರ ಪತ್ನಿಗೆ ಕ್ಲೀನ್‌ಚಿಟ್ ನೀಡಿರುವ ಬಗ್ಗೆ ಅಧಿಕೃತ ಮಾಹಿತಿ ನಮಗೆ ಬಂದಿಲ್ಲ. ಆದರೂ ಅದು ನಿರೀಕ್ಷಿತ. ಇದರಿಂದ ನನ್ನ ಹೋರಾಟಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ಸಿಎಂ ಪ್ರಭಾವ ಇಲ್ಲದೆ ಅಧಿಕಾರಿಗಳು ಅಪರಾಧವೆಸಗಲು ಸಾಧ್ಯವೇ ಇಲ್ಲ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ
ಲೋಕಾಯುಕ್ತ ತನಿಖೆಯಲ್ಲಿ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ಎಂದು ಕ್ಲೀನ್‌ಚಿಟ್ ನೀಡಿರುವ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಆ ವಿಷಯ ತಮಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ.
ಸಿಬಿಐ ತನಿಖೆ: ಸೋಮವಾರವೇ ತೀರ್ಪು?
ಪ್ರಕರಣದ ಕುರಿತು ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ರಾಜ್ಯ ಹೈಕೋರ್ಟ್, ಜ.27 ರ ಸೋಮವಾರ ತೀರ್ಪು ನೀಡುವ ನಿರೀಕ್ಷೆ ಇದೆ. ಆದರೆ, ಈ ನಡುವೆ, ಸೋಮವಾರ ಬೆಳಿಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ತಮ್ಮ ತನಿಖಾ ವರದಿಯನ್ನು ಕೋರ್ಟಿಗೆ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಈ ನಡುವೆ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಕೂಡ ಪ್ರಗತಿಯಲ್ಲಿದೆ.