Mysore MUDA Case | ಸಿಬಿಐ ತನಿಖೆ: ಇಂದು ಹೈಕೋರ್ಟ್ ಮಹತ್ವದ ತೀರ್ಮಾನ
Mysore MUDA Case ಮುಡಾ ಹಗರಣ ಹಂಚಿಕೆ ಅಕ್ರಮದ ಕುರಿತು ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಕೆ ಆಗಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಹೈಕೋರ್ಟ್, ಸೋಮವಾರ ಪ್ರಕಟಿಸಲಿರುವ ತೀರ್ಮಾನದ ಮೇಲೆ ಎಲ್ಲರ ಕಣ್ಣು ನೆಟ್ಟಿವೆ.;
ಮುಡಾ ನಿವೇಶನ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿದಂತೆ ಇಂದು(ಜ.27) ಹೈಕೋರ್ಟ್ ಮಹತ್ವದ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.
ಮುಡಾ ಹಗರಣ ಹಂಚಿಕೆ ಅಕ್ರಮದ ಕುರಿತು ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಕೆ ಆಗಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಹೈಕೋರ್ಟ್, ಸೋಮವಾರ ಪ್ರಕಟಿಸಲಿರುವ ತೀರ್ಮಾನದ ಮೇಲೆ ಎಲ್ಲರ ಕಣ್ಣು ನೆಟ್ಟಿವೆ.
ಈ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಸೂಚನೆಯಂತೆ ಮುಡಾ ಆಯುಕ್ತರು, 631 ನಿವೇಶನಗಳ ವಿವರಗಳನ್ನು ಇಡಿಗೆ ಸಲ್ಲಿಸಿದ್ದಾರೆ. ಹಂಚಿಕೆ ಅಕ್ರಮದ ಸುಳಿವಿನ ಹಿನ್ನೆಲೆಯಲ್ಲಿ ಇಡಿ, ಕಳೆದ ವಾರ 142 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಅದರ ಬೆನ್ನಲ್ಲೇ ಅಕ್ರಮ ಹಣಕಾಸು ವರ್ಗಾವಣೆ ಅನುಮಾನದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 631 ನಿವೇಶನಗಳ ಹಂಚಿಕೆ ಮತ್ತು ಹಣಕಾಸು ವ್ಯವಹಾರದ ವಿವರ ಸಲ್ಲಿಸುವಂತೆ ಇಡಿಗೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಮುಡಾ ಆಯುಕ್ತರು ಎಲ್ಲಾ ವಿವರ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಬೇನಾಮಿ ನಿವೇಶನಗಳೇ ಹೆಚ್ಚು!
ಇಡಿ ಕೋರಿರುವ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಮುಡಾ ಸಲ್ಲಿಸಿದ್ದು, ಆ ವಿವರಗಳಲ್ಲಿ ಬಹುತೇಕ ನಿವೇಶನಗಳು ಬೇನಾಯಿ ಹೆಸರಲ್ಲಿರುವುದು ಪತ್ತೆಯಾಗಿದೆ. ಪ್ರಭಾವಿ ರಾಜಕೀಯ ಮುಖಂಡರು, ಅಧಿಕಾರಿಗಳು ಮತ್ತು ಪ್ರತಿಷ್ಠಿತ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಏಜೆಂಟರುಗಳು ಕೂಡ ಬೇನಾಯಿ ಹೆಸರುಗಳಲ್ಲಿ ನಿವೇಶನ ಪಡೆದಿರುವುದು ಗೊತ್ತಾಗಿದೆ. ಆ ಹಿನ್ನೆಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಈ 631 ನಿವೇಶನಗಳನ್ನೂ ಇಡಿ ಮುಟ್ಟುಗೋಲು ಹಾಕಿಕೊಂಡು ತನಿಖೆಯನ್ನು ಚುರುಕುಗೊಳಿಸುವ ಸಾಧ್ಯತೆ ಹೆಚ್ಚಿದೆ.
ಕಳೆದ ವಾರವಷ್ಟೇ ಸುಮಾರು 300 ಕೋಟಿ ಮೌಲ್ಯದ 142 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಇಡಿ, ಮುಂದಿನ ದಿನಗಳಲ್ಲಿ ಮೈಸೂರು ಭಾಗದ ಹಲವು ಪ್ರಭಾವಿ ಮುಖಂಡರು, ಅಧಿಕಾರಿಗಳು ಮತ್ತು ಉದ್ಯಮಿಗಳ ಮನೆಮುಂದೆಯೂ ಹೋಗಿ ನಿಲ್ಲುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಈ ನಡುವೆ 142 ನಿವೇಶನಗಳನ್ನು ಯಾವುದೇ ಒಂದು ಪಕ್ಷ, ಅಥವಾ ವ್ಯಕ್ತಿಯ ಆಪ್ತರು ಪಡೆದುಕೊಂಡಿಲ್ಲ. ಎಲ್ಲಾ ಪಕ್ಷಗಳ, ಎಲ್ಲಾ ಮುಖಂಡರೂ ಬೇನಾಮಿ ಹೆಸರಲ್ಲಿ ನಿವೇಶನಗಳನ್ನು ಪಡೆದಿದ್ದಾರೆ. ಆ ಹಿನ್ನೆಲೆಯಲ್ಲಿ ಎಲ್ಲಾ 142 ನಿವೇಶನಗಳನ್ನು ಯಾರಿಗೆ ಹಂಚಲಾಗಿದೆ ಎಂಬುದನ್ನು ಹೆಸರು ಸಹಿತ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ದೂರುದಾರರಲ್ಲಿ ಒಬ್ಬರಾದ ಸ್ನೇಹಮಯಿ ಕೃಷ್ಣ ಕೋರಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕಳೆದ ವಾರ ಪ್ರಕರಣದ ಕುರಿತು ಲೋಕಾಯುಕ್ತ ತನಿಖೆಯ ವರದಿಯ ಅಂಶಗಳು ಕೂಡ ಸೋರಿಕೆಯಾಗಿದ್ದವು. ಲೋಕಾಯುಕ್ತ ಅಧಿಕಾರಿಗಳು ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಸಿಎಂ ಪತ್ನಿ ಪಾರ್ವತಿ ಅವರಿಗೆ ಹಂಚಿಕೆಯಾಗಿರುವ 14 ನಿವೇಶನಗಳ ವಿಷಯದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಕಂಡುಬಂದಿಲ್ಲ. ಬದಲಾಗಿ ಅಧಿಕಾರಿಗಳು ತಪ್ಪೆಸಗಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿದೆ ಎಂದು ವರದಿಯಾಗಿತ್ತು. ಆದರೆ, ಆ ಬಗ್ಗೆ ಆಕ್ಷೇಪವೆತ್ತಿರುವ ದೂರುದಾರ ಸ್ನೇಹಮಯಿ ಕೃಷ್ಣ, ಇದು ಸಿಎಂ ಅವರೇ ತಮಗೆ ಬೇಕಾದಂತೆ ತನಿಖೆ ಮಾಡಿಸಿ ವರದಿ ಸಿದ್ಧಪಡಿಸಿಕೊಂಡಿರುವುದು. ಆ ಕಾರಣಕ್ಕಾಗಿ ನಾನು ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿದ್ದೇನೆ ಎಂದು ಹೇಳಿದ್ದರು.