Mysore MUDA Case |ನ್ಯಾ.ಪಿ.ಎನ್‌.ದೇಸಾಯಿ ಆಯೋಗದ ವರದಿ; ಸಿಎಂ ಕುಟುಂಬಕ್ಕೆ ಕ್ಲೀನ್‌ಚಿಟ್?

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿಯವರಿಗೆ 14ನಿವೇಶನಗಳ ಹಂಚಿಕೆಯಲ್ಲಿ ಯಾವುದೇ ಅಕ್ರಮ ಆಗಿಲ್ಲ. ಯಾವುದೇ ಹಣ ವ್ಯವಹಾರವೂ ನಡೆದಿಲ್ಲ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.;

Update: 2025-07-31 07:27 GMT

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆ ನಡೆಸಿರುವ  ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌. ದೇಸಾಯಿ ನೇತೃತ್ವದ ಏಕ ಸದಸ್ಯ ಆಯೋಗ ಗುರುವಾರ ರಾಜ್ಯ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ. 

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿಯವರಿಗೆ 14ನಿವೇಶನಗಳ ಹಂಚಿಕೆಯಲ್ಲಿ ಯಾವುದೇ ಅಕ್ರಮ ಆಗಿಲ್ಲ. ಯಾವುದೇ ಹಣ ವ್ಯವಹಾರವೂ ನಡೆದಿಲ್ಲ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದ್ದು, ಸಿಎಂ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ 2024 ಜುಲೈ 14ರಂದು Commission of Inquiry Act, 1952ರ ನಿಯಮ 3 ರ ಉಪನಿಯಮ (1) ರನ್ವಯ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿತ್ತು. ಆರು 6 ತಿಂಗಳೊಳಗೆ ವರದಿ ನೀಡುವಂತೆ ಆಯೋಗಕ್ಕೆ ಸೂಚನೆ ನೀಡಿತ್ತು.

ಮುಡಾ ಅಕ್ರಮಗಳ ಬಗ್ಗೆ ವಿಸ್ತೃತ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌. ದೇಸಾಯಿ ಅವರು ಸರ್ಕಾರಕ್ಕೆ ಆರು ಸಂಪುಟಗಳ ವರದಿ ಸಲ್ಲಿಸಿದರು. ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವರದಿ ಸ್ವೀಕರಿಸಿದರು.

ಮುಡಾದಲ್ಲಿ 2006ರಿಂದ 2024ರ ಜುಲೈ 15ರವರೆಗೂ ನಡೆದಿರುವ ಭೂಸ್ವಾಧೀನ, ಬಡಾವಣೆಗಳ ನಿರ್ಮಾಣ, ನಿವೇಶನ ಹಂಚಿಕೆ, ಪರಿಹಾರ ವಿತರಣೆ ಮತ್ತು ಬದಲಿ ನಿವೇಶನಗಳ ಹಂಚಿಕೆ ಕುರಿತ ಆರೋಪಗಳ ವಿಚಾರಣೆ ನಡೆಸಲು ಪಿ.ಎನ್. ದೇಸಾಯಿ ನೇತೃತ್ವದ ಏಕ ಸದಸ್ಯ ಆಯೋಗಕ್ಕೆ ಸೂಚಿಸಿ 2025ಮೇ 31ರವರೆಗೆ ಗಡುವು ವಿಸ್ತರಿಸಿ, ಫೆ.4ರಂದು ಸರ್ಕಾರ ಆದೇಶಿಸಿತ್ತು.

ವಿಚಾರಣಾ ಆಯೋಗಕ್ಕೆ ಸಮಗ್ರ ಮಾಹಿತಿ, ದಾಖಲೆ ಒದಗಿಸಲು ತಾಂತ್ರಿಕ ಸಲಹೆಗಾರರು, ಆರ್ಥಿಕ ಸಲಹೆಗಾರರು, ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲಾಗಿತ್ತು.  

ಮಾಜಿ ಸಿಎಂಗಳ ಅವಧಿಯ ಅಕ್ರಮಗಳ ತನಿಖೆಗೂ ಸೂಚನೆ 

ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ (ಎರಡು ಅವಧಿ), ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್, ಸಿದ್ದರಾಮಯ್ಯ (ಎರಡು ಅವಧಿ) ಮತ್ತು ಬಸವರಾಜ ಬೊಮ್ಮಾಯಿ ಅವಧಿಯಲ್ಲಾದ ಅವ್ಯವಹಾರಗಳ ಕುರಿತು ವಿಚಾರಣೆ ನಡೆಸಿ, ವರದಿ ಸಲ್ಲಿಸುವ ಜವಾಬ್ದಾರಿಯನ್ನು ಆಯೋಗಕ್ಕೆ ವಹಿಸಲಾಗಿತ್ತು.

Tags:    

Similar News