Mysore MUDA Case | ಅ.8ಕ್ಕೆ ಬಿ-ರಿಪೋರ್ಟ್‌ ಪ್ರಶ್ನಿಸಿದ ಅರ್ಜಿಯ ಅಂತಿಮ ಆದೇಶ

ಲೋಕಾಯುಕ್ತ ಪೊಲೀಸರ ಬಿ-ರಿಪೋರ್ಟ್‌ ಪ್ರಶ್ನಿಸಿ ಮತ್ತು ತನಿಖಾಧಿಕಾರಿ ಬದಲಿಸುವ ಕುರಿತ ಅರ್ಜಿಯ ವಿಚಾರಣೆ ಮುಗಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅ.8ರಂದು ಅಂತಿಮ ಆದೇಶ ಪ್ರಕಟಿಸಲಿದೆ.

Update: 2025-09-29 10:59 GMT
Click the Play button to listen to article

ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಹಾಗೂ ಕುಟುಂಬದವರ ಪಾತ್ರದ ಬಗ್ಗೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್‌ ಪ್ರಶ್ನಿಸಿ ಹಾಗೂ ತನಿಖಾಧಿಕಾರಿ ಬದಲಾವಣೆ ಕೋರಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡಿದೆ. ಅರ್ಜಿ ವಿಚಾರಣೆ ಮುಗಿಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅ.8ರಂದು ಅಂತಿಮ ಆದೇಶ ಪ್ರಕಟಿಸಲಿದೆ. 

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತ್ತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬವು ಅಕ್ರಮ ನಿವೇಶನ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಸಲ್ಲಿಸಿರುವ ಬಿ-  ರಿಪೋರ್ಟ್‌ ತಿರಸ್ಕರಿಸಬೇಕು. ತನಿಖಾಧಿಕಾರಿ ಸ್ಥಾನದಿಂದ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ ಅವರನ್ನು ಬದಲಿಸಬೇಕು. ಸುಳ್ಳು ವರದಿ ಸಲ್ಲಿಸಿದ ತನಿಖಾಧಿಕಾರಿ ವಿರುದ್ದ ಕ್ರಮ ತೆಗೆದುಕೊಳ್ಳಲು ಆದೇಶ ಮಾಡಬೇಕು. ಸರ್ವೆ ನಂಬರ್ ಅನುಗುಣವಾಗಿ ಪ್ರತ್ಯೇಕ ಮೊಕದ್ದಮೆಗಳನ್ನು ದಾಖಲು ಮಾಡಲು ಆದೇಶಿಸಬೇಕು ಎಂದು ಸ್ನೇಹಮಯಿ ಕೃಷ್ಣ ನ್ಯಾಯಾಲಯದ ಮೊರೆ ಹೋಗಿದ್ದರು. 

ನ್ಯಾಯಾಲಯವು ವಾದ-ಪ್ರತಿವಾದ ಆಲಿಸಿದ್ದು, ಅ.8ಕ್ಕೆ ಅಂತಿಮ ಆದೇಶ ನೀಡುವುದಾಗಿ ತಿಳಿಸಿದೆ. ಪ್ರಕರಣದಲ್ಲಿ ಮೊದಲ ನಾಲ್ಕು ಆರೋಪಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾಮೈದ ಮಲ್ಲಿಕಾರ್ಜುನ ಮತ್ತು ಭೂ ಮಾಲೀಕ ದೇವರಾಜ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆಯೇ?, ಇಲ್ಲವೇ? ಎಂಬುದರ ಮಾಹಿತಿಯನ್ನೂ ನೀಡಿಲ್ಲ. ತನಿಖಾಧಿಕಾರಿಗೆ ಮಾಹಿತಿ ನೀಡಲು ಸಮಸ್ಯೆ ಏನು? ಎಂಬುದನ್ನು ತಿಳಿಸಬೇಕು. ತನಿಖಾಧಿಕಾರಿಗೆ ಆರೋಪಿಗಳನ್ನು ಅದಷ್ಟು ಬೇಗ ಆರೋಪ ಮುಕ್ತರನ್ನಾಗಿಸುವ ದುರುದ್ದೇಶ ಇರುವುದು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ಸ್ನೇಹಮಯಿ ಕೃಷ್ಣ ದೂರಿದ್ದರು.

ಪೊಲೀಸರ ನಡೆಯ ಬಗ್ಗೆ ತಕರಾರು ಅರ್ಜಿಯಲ್ಲಿ ಏನನ್ನೂ ಹೇಳದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸ್ನೇಹಮಯಿ ಕೃಷ್ಣ ಅವರು ವಾದಿಸಿದ್ದರು. 

ಬಿ- ರಿಪೋರ್ಟ್‌ ಸಲ್ಲಿಸಿದ್ದ ಲೋಕಾಯುಕ್ತ ಪೊಲೀಸ್‌  

ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್‌ಪಿ ಉದೇಶ್ ಅವರು, 11 ಸಾವಿರ ಪುಟಗಳ ಬಿ-ರಿಪೋರ್ಟ್‌ ಸಲ್ಲಿಕೆ ಮಾಡಿದ್ದರು.  ಲೋಕಾಯುಕ್ತ ಸಿಬ್ಬಂದಿ ಮುಡಾ ವಿಚಾರಣೆಗೆ ಸಂಬಂಧಿಸಿದ 27 ಸಂಪುಟಗಳ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಡಿದ ಆರೋಪಗಳು ಸುಳ್ಳಾಗಿದ್ದು, ನಿವೇಶನ ಹಂಚಿಕೆಯಲ್ಲಿ ಸಿದ್ದರಾಮಯ್ಯ ಅವರು ಮುಡಾ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಕುಟುಂಬಸ್ಥರಿಗೆ ಪರಿಹಾರವಾಗಿ ಸಿಗಬೇಕಿದ್ದ ನಿವೇಶನಗಳು ಸಿಕ್ಕಿಲ್ಲ. ಸಿದ್ದರಾಮಯ್ಯ ಪತ್ನಿ ಪಾರ್ವತಿ ಪಡೆದಿದ್ದ 14 ಸೈಟ್‌ಗಳನ್ನು ಕೂಡ ವಾಪಸ್ ಕೊಟ್ಟಿದ್ದಾರೆ. ಜಮೀನು ವರ್ಗಾವಣೆ ಕಾನೂನಾತ್ಮಕವಾಗಿ ನಡೆದಿದೆ ಎಂದು ವರದಿಯಲ್ಲಿ ತಿಳಿಸಿತ್ತು.

ದೇವರಾಜುಗೆ ಸಂಬಂಧಿಸಿದಂತೆ ಡಿನೋಟಿಫೈ ಪ್ರಕ್ರಿಯೆಯಲ್ಲಿ ಕೆಲ ತಪ್ಪುಗಳಾಗಿವೆ. ದೇವರಾಜು ಜೀವನಕ್ಕೆ ಒಂದೇ ಜಮೀನು ಇರೋದು ಎಂದು ಹೇಳಿಕೊಂಡಿದ್ದರು. ಹೀಗಾಗಿ ಡಿನೋಟಿಫೈ ಮಾಡಬೇಕೆಂದು ದೇವರಾಜು ಕೇಳಿಕೊಂಡಿದ್ದರು. ದೇವರಾಜು ಈ ಮಾಹಿತಿ ಮರೆಮಾಚಿರುವುದು ಕಂಡು ಬಂದಿದೆ. ಹೀಗಾಗಿ ಪ್ರಕರಣದಲ್ಲಿ ಬೇರೆ ಯಾರದ್ದು ಪಾತ್ರ ಇಲ್ಲ ಎಂದು ವರದಿಯಲ್ಲಿ ಲೋಕಾಯುಕ್ತ ಪೊಲೀಸರು ಉಲ್ಲೇಖಿಸಿದ್ದರು. 

ಇಡಿಯಿಂದ ಪ್ರಕರಣ ದಾಖಲಿಸಿ, ಆಸ್ತಿ ಮುಟ್ಟುಗೋಲು

ಮುಡಾ ಹಗರಣದಲ್ಲಿ ಕೋಟ್ಯಂತರ ರೂ. ಅಕ್ರಮವಾಗಿ ವಹಿವಾಟು ನಡೆದಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಕೈಗೊಂಡಿತ್ತು. ತನಿಖೆ ವೇಳೆ ಇಡಿ ಅಧಿಕಾರಿಗಳು ಮುಡಾ ಕಚೇರಿ ಸೇರಿದಂತೆ ಹಲವೆಡೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ಸುಮಾರು 300 ಕೋಟಿ ರೂ.ಮೌಲ್ಯದ 160 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ವಸತಿ ಸಹಕಾರಿ ಸಂಘ, ಮುಡಾ ಅಧಿಕಾರಿಗಳು, ಪ್ರಭಾವಿಗಳ ಹೆಸರಿನಲ್ಲಿ ನಿವೇಶನಗಳು ನೋಂದಣಿಯಾಗಿದ್ದವು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮ ಎಸಗಿರುವುದು ಕಂಡು ಬಂದಿದ್ದು, ಲಂಚದ ಪುರಾವೆಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದರು. 

ಏನಿದು ಮುಡಾ ಹಗರಣ? 

2020ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ 50:50 ರ ಅನುಪಾತದಲ್ಲಿ ಭೂಮಿ ನೀಡಿದ ಸಂತ್ರಸ್ತರಿಗೆ ನಿವೇಶನಗಳನ್ನು ಹಂಚುವ ಪದ್ಧತಿ ಜಾರಿಗೆ ಬಂದಿತ್ತು. ಅದಕ್ಕೂ ಮೊದಲು 60:40ರ ಅನುಪಾತದಲ್ಲಿ ನಿವೇಶನ ಹಂಚಿಕೆ ಆಗುತ್ತಿತ್ತು. ಇದರಲ್ಲಿ ಭೂ ಸ್ವಾಧೀನವಾದ ಜಮೀನಿಗೆ ಹಣದ ರೂಪದಲ್ಲಿ ಪರಿಹಾರ ನೀಡದೆ ಇದ್ದರೆ ಮಾತ್ರ ಈ ನಿಯಮ ಅನ್ವಯ ಆಗುತ್ತಿತ್ತು. ಹಣ ಪಡೆದರೇ ಸೈಟ್ ಅನ್ನು ಭೂ ಮಾಲೀಕರಿಗೆ ಕೊಡುವಂತಿಲ್ಲ.

2020 ರ ನಂತರ ಅಭಿವೃದ್ಧಿಪಡಿಸಿದ ನಿವೇಶನಗಳಿಗೆ ಮಾತ್ರ 50:50 ರ ಅನುಪಾತ ಜಾರಿ ಅನ್ವಯವಾಗುತ್ತಿತ್ತು. ಆದರೆ, 40 ವರ್ಷ ಹಿಂದೆಯೇ ಮುಡಾಕ್ಕೆ ಜಮೀನು ನೀಡಿ ಹಣ ಪಡೆದವರು ಸಹ ಬದಲಿ ನಿವೇಶನವನ್ನು 2021ನಂತರ ಪಡೆದಿದ್ದರು. ಕಳೆದ 3 ವರ್ಷಗಳಲ್ಲಿ ಸುಮಾರು ಸಾವಿರಾರು ನಿವೇಶನಗಳನ್ನು ಪ್ರತಿಷ್ಟಿತ ಬಡಾವಣೆಗಳಲ್ಲಿ ಕಾನೂನು ಬಾಹಿರವಾಗಿ ಹಂಚಿ‌ಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

50:50ರ ಅನುಪಾತದ ನಿಯಮವನ್ನೇ ಮುಡಾ ಅಧಿಕಾರಿಗಳು ಅಸ್ತ್ರ ಮಾಡಿಕೊಂಡು ಹಗರಣ ಮಾಡಿರುವ ಆರೋಪವಿದೆ. 50:50 ರ ಅನುಪಾತದಲ್ಲಿ ನಿವೇಶನ ಹಂಚಿಕೆ ಸಂಬಂಧ ನಿವೇಶನ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ನಿರ್ಣಯಿಸುವ ಅಧಿಕಾರ ಆಯುಕ್ತರ ಹಂತದಲ್ಲಿ ನಿರ್ಣಯಿಸದೇ, ಪ್ರಾಧಿಕಾರದ ಮೂಲಕ ಮಂಡಿಸುವ ಕುರಿತು ಹಲವು ಬಾರಿ ಮುಡಾ ಅಧ್ಯಕ್ಷರು, ನಗರಾಭಿವೃದ್ಧಿ ಆಯುಕ್ತರಿಗೆ ಪತ್ರ ಬರೆದರು. ಆದರೆ, ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಬದಲಿಗೆ 2020ರಲ್ಲಿ ಶೇ.50ರಷ್ಟು ನಿವೇಶನ ಹಂಚಿಕೆ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಆದರೆ, ಈ ಆದೇಶವನ್ನು 2023ರ ಅಕ್ಟೋಬರ್​ನಲ್ಲಿ ರಾಜ್ಯ ಸರ್ಕಾರ 50:50 ಅನುಪಾತದ ನಿಯಮ ರದ್ದುಗೊಳಿಸಿ ಮುಡಾ ಆಯುಕ್ತರಿಗೆ ನಿರ್ದೇಶನ ನೀಡಿತು. ಆದರೂ ಸರ್ಕಾರದ ಆದೇಶ ಧಿಕ್ಕರಿಸಿ ಮುಡಾ ಅಧಿಕಾರಿಗಳು ನಿವೇಶನವನ್ನು ಅಕ್ರಮವಾಗಿ ಹಂಚಿರುವುದು ಕಂಡು ಬಂದಿದೆ. 

ಸಿದ್ದರಾಮಯ್ಯ ಅವರ ಪತ್ನಿಗೆ ಸೇರಿದ ಭೂಮಿಯಲ್ಲಿ ಮುಡಾ, ದೇವನೂರು ಬಡಾವಣೆಯನ್ನು ಅಭಿವೃದ್ಧಿಪಡಿಸಿದ ನಂತರ, ಅವರು ಭೂಮಿಯ ಬೆಲೆ ಹೆಚ್ಚಿರುವ ನೆರೆಹೊರೆಗಳಲ್ಲಿ ಒಂದಾದ ವಿಜಯನಗರದಲ್ಲಿ ಪರ್ಯಾಯ ಸೈಟ್ ಪಡೆದಿದ್ದಾರೆ. ಮುಡಾ ಅಭಿವೃದ್ಧಿ ಪಡಿಸಿದ ಬಡಾವಣೆಯಲ್ಲಿ ಪಾರ್ವತಿಗೆ ಮಂಜೂರು ಮಾಡಬಹುದಾದ ನಿವೇಶನಗಳನ್ನು ಹೊಂದಿದ್ದರೂ ಅಕ್ರಮವಾಗಿ ವಿಜಯನಗರದಲ್ಲಿ ಸೈಟ್‌ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ತೀವ್ರ ಚರ್ಚೆಗೆ ಕಾರಣವಾಗಿತ್ತು. 

Tags:    

Similar News