Mysore Dasara 2025 | ನನ್ನ ಧಾರ್ಮಿಕ ನಂಬಿಕೆ, ಜೀವನ ಪಾಠ ಹೊಸ್ತಿಲು ದಾಟಿಲ್ಲ; ಬಾನು ಮುಷ್ತಾಕ್
ನನ್ನ ಸಂಸ್ಕೃತಿಯು ಹೃದಯವನ್ನು ಒಂದುಗೂಡಿಸುತ್ತದೆ. ದ್ವೇಷ ಬೆಳೆಸಲ್ಲ, ಬದಲಿ ಪ್ರೀತಿ ಹರಡುವುದೇ ಅದರ ಗುರಿ. ನನ್ನ ಧಾರ್ಮಿಕ ನಂಬಿಕೆ, ಜೀವನ ಪಾಠಗಳು ಹೊಸ್ತಿಲು ದಾಟಿಲ್ಲ ಎಂದು ಲೇಖಕಿ ಬಾನು ಮುಷ್ತಾಕ್ ಹೇಳಿದರು.
ಸಂಸ್ಕೃತಿ ಎಂದರೆ ದ್ವೇಷ ಬೆಳೆಸುವುದು ಅಲ್ಲ, ಅದು ಹೃದಯಗಳನ್ನು ಒಂದುಗೂಡಿಸುವ ಸೇತುವೆ. ನನ್ನ ಧಾರ್ಮಿಕ ಕಟ್ಟುಪಾಡುಗಳು ಎಂದಿಗೂ ಯಾವುದೇ ಪ್ರಾಣಿ, ಮನುಷ್ಯನನ್ನು ನೋಯಿಸಿಲ್ಲ. ಬದಲಿಗೆ ಮಾನವೀಯತೆ, ಶಾಂತಿ, ಪರಸ್ಪರ ಪ್ರೀತಿಯ ಪಾಠಗಳನ್ನು ಕಲಿಸಿವೆ ಎಂದು ಬೂಕರ್ ಪ್ರಶಸ್ತಿ ಲೇಖಕಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು.
ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ನೆರವೇರಿಸುವ ಮೂಲಕ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಇಡೀ ಜಗತ್ತು ಯುದ್ಧದ ಹಾದಿಯಲ್ಲಿ ನಡೆಯುತ್ತಿದೆ. ಮನುಕುಲವು ದ್ವೇಷ, ರಕ್ತಪಾತದಲ್ಲಿ ಮುಳುಗಿರುವಾಗ ಮೈಸೂರು ದಸರಾವು ಶಾಂತಿಯ ಹಬ್ಬವಾಗಿ, ಸೌಹಾರ್ದದ ಮೇಳವಾಗಿ ಪ್ರತಿಧ್ವನಿಸಬೇಕು ಎಂದು ಆಶಿಸಿದರು.
ನನ್ನ ಸಂಸ್ಕೃತಿಯು ಹೃದಯವನ್ನು ಒಂದುಗೂಡಿಸುತ್ತದೆ. ದ್ವೇಷ ಬೆಳೆಸಲ್ಲ, ಬದಲಿ ಪ್ರೀತಿ ಹರಡುವುದೇ ಅದರ ಗುರಿ. ನನ್ನ ಧಾರ್ಮಿಕ ನಂಬಿಕೆ, ಜೀವನ ಪಾಠಗಳು ಹೊಸ್ತಿಲು ದಾಟಿಲ್ಲ. ನಾನು ಬೂಕರ್ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ನನ್ನ ಆಪ್ತ ಗೆಳತಿಯೊಬ್ಬರು ನನ್ನನ್ನು ದೇವಸ್ಥಾನಕ್ಕೆ ಕರೆತಂದು ಪೂಜೆ ನೆರವೇರಿಸುವುದಾಗಿ ಚಾಮುಂಡೇಶ್ವರಿ ದೇವಿಗೆ ಹರಕೆ ಹೊತ್ತಿದ್ದರು. ಆದರೆ, ನನಗೆ ಆಗಿರಲಿಲ್ಲ, ಈಗ ಕರ್ನಾಟಕ ಸರ್ಕಾರವೇ ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದು, ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಕರೆಸಿಕೊಂಡಂತೆ ಅನುಭವವಾಗುತ್ತಿದೆ. ಇದು ನನಗೆ ಸಿಕ್ಕ ವಿಶೇಷ ಗೌರವದ ಕ್ಷಣ ಎಂದು ಹೇಳಿದರು.
ಈ ಪವಿತ್ರ ನೆಲದಲ್ಲಿ, ಚಾಮುಂಡಿ ಕೃಪೆಯ ನೆರಳಿನಲ್ಲಿ, ನಿಮ್ಮೆದುರು ನಿಲ್ಲಲು ಅಪರೂಪದ ಅವಕಾಶವೇ ಜೀವನದ ಅತ್ಯಂತ ದೊಡ್ಡ ಗೌರವ. ಮೈಸೂರು ದಸರಾ ಹಬ್ಬವು ಕೇವಲ ಒಂದು ಹಬ್ಬವಲ್ಲ, ಅದು ನಾಡಿನ ಮಿಡಿತ, ಸಂಸ್ಕೃತಿಯ ಉತ್ಸವ, ಎಲ್ಲರನ್ನು ಒಳಗೊಳ್ಳುವ ಜನಮೇಳ. ಇಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಈ ಮಣ್ಣಿನ ವಾರಸುದಾರಿಕೆ, ಸ್ಪಂದನೆ, ಜವಾಬ್ದಾರಿ ಮತ್ತು ನೆನಪುಗಳಿವೆ.
ಉರ್ದು ಭಾಷಿಕರಿಂದಲೂ ದಸರಾಗೆ ಕೊಡುಗೆ
ಮೈಸೂರಿನ ಉರ್ದು ಭಾಷಿಕರು ಸಹ ದಸರಾ ಹಬ್ಬದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ನವರಾತ್ರಿಯ ಹತ್ತು ದಿನಗಳ ಕಾಲ ಅವರು ಉರ್ದು ಕಾವ್ಯ, ಸಾಹಿತ್ಯದ ಮೂಲಕ ಹಬ್ಬಕ್ಕೆ ಸೊಬಗು ಹೆಚ್ಚಿಸಿದ್ದಾರೆ. ವಿಜಯದಶಮಿಯನ್ನು ಇಲ್ಲಿನ ಉರ್ದು ಭಾಷಿಕರು ‘ಸಿಲಿಂಗನ್’ ಎಂದು ಕರೆಯುತ್ತಾರೆ. ಇದು ಸಂಸ್ಕೃತಿ ಬದುಕಿನ ಭಾವಗಾನ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದರು.
ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸೋಣ. ಪರಸ್ಪರ ನಂಬಿಕೆ, ಗೌರವ, ಪ್ರೀತಿಗಳ ಮೂಲಕ ಬದುಕನ್ನು ಶ್ರೀಮಂತಗೊಳಿಸಿಕೊಳ್ಳೋಣ, ಈ ನೆಲದ ಸುಗಂಧವು ಐಕ್ಯತೆಯ ಪರಿಮಳ. ಈ ನೆಲದ ಹೂವುಗಳು ಸೌಹಾರ್ದತೆಯ ಸಂಕೇತ. ಈ ನಾಡಿನ ಉಸಿರೇ ಮಾನವೀಯತೆಯ ಪ್ರತೀಕ ಎಂದು ಕೊಂಡಾಡಿದರು.
ಚಾಮುಂಡಿ ದೇವಿಯು ನಮ್ಮೊಳಗಿನ ದ್ವೇಷ, ಅಸಹಿಷ್ಣುತೆಯನ್ನು ತೊಡೆದು ಹಾಕಲಿ. ಮೈಸೂರು ದಸರಾ ಹಬ್ಬವು ಮೈಸೂರಿಗಷ್ಟೇ ಸೀಮಿತವಾಗದೇ, ಕರ್ನಾಟಕವನ್ನಷ್ಟೇ ಸೀಮಿತವಾಗದೇ ಇಡೀ ದೇಶಕ್ಕೂ, ಜಗತ್ತಿನ ಮಾನವಕುಲಕ್ಕೂ ಶ್ರೇಯಸ್ಸು ತಂದುಕೊಡಲಿ ಎಂದು ಆಶಿಸಿದರು.
ಸರ್ವ ಜನಾಂಗದ ಶಾಂತಿಯ ತೋಟ
ಮೈಸೂರು ಅರಸರ ಸಂಸ್ಕೃತಿಯ ಪರಂಪರೆಯಿಂದ ಹಿಡಿದು,ಕನ್ನಡ ಭಾಷೆಯ ಅಂತರಾಳದ ಹೃದಯಸ್ಪಂದನದವರೆಗೆ ಈ ಹಬ್ಬವು ನಮಗೆ ಸ್ಮರಿಸುತ್ತದೆ. ಸಂಸ್ಕೃತಿ ಎಂದರೆ ಬೇರೆ ಬೇರೆ ಧ್ವನಿಗಳ ಸಂಗಮ. ವಿಭಿನ್ನತೆಯಲ್ಲೇ ಏಕತೆಯ ಸುಗಂಧ. ಮಹಾರಾಜರು ಜಯಚಾಮರಾಜೇಂದ್ರ ಒಡೆಯರು ಮುಸ್ಲಿಂರ ನಂಬಿ, ಅವರನ್ನು ಅನುಮಾನಿಸದೇ, ಅಂಗರಕ್ಷಕರ ಪಡೆಯ ಸದಸ್ಯರಾಗಿದ್ದರು, ಇದು ನಮಗೆ ಬಹಳ ಹೆಮ್ಮೆಯ ಮತ್ತು ಅಪ್ಯಾಯಮಾನವಾದ ವಿಷಯ. ಸಂಸ್ಕೃತಿ ಎಂದರೆ ಹೃದಯದಗಲವನ್ನು ಹುಟ್ಟಿಸುವ ನನ್ನ ಧಾರ್ಮಿಕ ನಂಬಿಕೆ, ಯಾವಗಾಗಲೂ ಜೀವ ಪರ ಮಾನವೀಯಪರ. ಈ ನೆಲದ ಸಂಸ್ಕೃತಿಯ ಮೂಲ- ಎಲ್ಲರನ್ನೊಳಗೊಳ್ಳುವ ಎಲ್ಲರ ಬದುಕನ್ನು ಗೌರವಿಸುವ , ನಮ್ಮೆಲ್ಲರ ಸರ್ವ ಜನಾಂಗದ ಶಾಂತಿಯ ತೋಟ ಎಂದರು.
ವ್ಯಕ್ತಿಯಿಂದ ಸಮಷ್ಠಿಯೆಡೆಗೆ ಸಾಗುವುದೇ ಬದುಕಿನ ದಾರಿ
ನನ್ನ ಬದುಕು ನನಗೆ ಅನೇಕ ಪಾಠಗಳನ್ನು ಕಲಿಸಿದೆ. ವ್ಯಕ್ತಿಯಿಂದ ಸಮಷ್ಠಿಯೆಡೆಗೆ ಸಾಗುವ ದಾರಿ ಮಾತ್ರ ನಿಜವಾದ ದಾರಿ. ನನ್ನ ಧಾರ್ಮಿಕ ನಂಬಿಕೆಗಳು, ನನ್ನ ಜೀವನ ದರ್ಶನ ಎಂದಿಗೂ ಜೀವಪರ. ಅವು ಮರದ ನೆರಳಿನಂತೆ,ತಂಪಾದ ನದಿಯಂತೆ, ಇಂದಿನ ಜಗತ್ತು ಯುದ್ಧದ ಜ್ವಾಲೆಯಲ್ಲಿ ಸುಡುತ್ತಿದೆ. ಇಂದು ಮನುಕುಲವು ದ್ವೇಷ ಮತ್ತು ರಕ್ತಪಾತದಲ್ಲಿ ಮುಳುಗಿರುವಾಗ, ದಸರಾ ಘೋಷಣೆಯು ಎಲ್ಲರ ಕಿವಿಯಲ್ಲಿ ಪ್ರತಿಧ್ವನಿಸಲಿ , ಇದು ಶಾಂತಿಯ ಹಬ್ಬ, ಸೌಹಾರ್ದದ ಮೇಳ. ಇದು ಸರ್ವಜನಾಂಗದ ಶಾಂತಿಯ ತೋಟ. ನನ್ನ ಜೀವನದ ದರ್ಶನ ಯಾವತ್ತಿಗೂ ಜೀವಪರ. ಅಸ್ತ್ರಗಳಿಂದಲ್ಲ, ಅಕ್ಷರದಿಂದ ಬದುಕನ್ನು ಗೆಲ್ಲಬಹುದು. ಹಗೆಗಳಿಂದಲ್ಲ, ಪ್ರೀತಿಯಿಂದ ಬದುಕನ್ನು ಅರಳಿಸಬಹುದು ಎಂದು ಹೇಳಿದರು.
ಪ್ರತಿಯೊಬ್ಬರ ಧ್ವನಿ ಗೌರವಿಸುವ ಮನೋಭಾವ
ಈ ನೆಲದ ಪರಂಪರೆಯೇ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಈ ತೋಟದಲ್ಲಿ ಪ್ರತಿ ಹೂವು ತನ್ನ ಬಣ್ಣದಲ್ಲೇ ಅರಳಲಿ, ಪ್ರತಿ ಹಕ್ಕಿ ತನ್ನ ರಾಗದಲ್ಲೇ ಹಾಡಲಿ, ಆದರೆ ಒಟ್ಟಿಗೆ ಸೇರಿದಾಗ ಅದು ಸೌಹಾರ್ದ ಸಿಂಫನಿಯಾಗಲಿ. ಪ್ರಜಾಪ್ರಭುತ್ವವು ಕೇವಲ ವ್ಯವಸ್ಥೆಯಲ್ಲ, ಅದು ಮೌಲ್ಯ. ಅದು ಪ್ರತಿಯೊಬ್ಬರ ಧ್ವನಿಯನ್ನು ಗೌರವಿಸುವ ಮನೋಭಾವ. ಅದು ಬೇರೆಯವರ ಬದುಕಿನಲ್ಲಿ ಅರ್ಥಪೂರ್ಣವಾಗಿ ನಡೆದುಕೊಳ್ಳುವ ಜವಾಬ್ದಾರಿ. ಅದನ್ನು ಗೌರವಿಸುವು ನಮ್ಮೆಲ್ಲರ ಕರ್ತವ್ಯ ಎಂದರು.
ನಾವೆಲ್ಲಾ ಒಂದೇ ಗಗನದಡಿಯ ಪಯಣಿಗರು
ನಾವು ಎಲ್ಲರೂ ಒಂದೇ ಗಗನದಡಿಯ ಪಯಣಿಗರು. ಆಕಾಶವು ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿ ಯಾರನ್ನೂ ತಳ್ಳುವುದಿಲ್ಲ. ಮನುಷ್ಯನು ಮಾತ್ರ ಗಡಿ ಹಾಕುತ್ತಾನೆ. ಆ ಗಡಿಗಳನ್ನು ನಾವೇ ಅಳಿಸಬೇಕು. ಇಂದು ಈ ಹಬ್ಬ ಮೈಸೂರಿನ ಬೀದಿಗಳಲ್ಲಿ ಮಾತ್ರವತ್ತ. ಇಡೀ ಜಗತ್ತಿನ ಹೃದಯಗಳಲ್ಲಿ ಬೆಳಗಲಿ ಎಂದು ಬಾನು ಮುಷ್ತಾಕ್ ಆಶಿಸಿದರು.
ಸಂಸ್ಕೃತಿ ನಮ್ಮ ಬೇರು ಸೌಹಾರ್ದ ನಮ್ಮ ಶಕ್ತಿ
ಸಂಸ್ಕೃತಿ ನಮ್ಮ ಬೇರು. ಸೌಹಾರ್ದ ನಮ್ಮ ಶಕ್ತಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ , ಪ್ರೀತಿಯ ಹೊಸ ಸುಧಾರಿತ ಸಮಾಜವನ್ನು ಕಟ್ಟೋಣ.
ತಾನೊಬ್ಬ ಕವಿಯತ್ರಿಯಾಗಿದ್ದು, ಕವಿತೆಯ ಮೂಲಕ ನನ್ನ ಸಂದೇಶವನ್ನು ತಿಳಿಸಲು ಬಯಸಿದ್ದು, ಮುಸ್ಲಿಂ ಹೆಣ್ಣುಮಗಳು ಬಾಗಿನವನ್ನು ಪಡೆದಾಗಿನ ತನ್ನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುವ ಕವಿತೆಯನ್ನು ಓದಿದರು.