BJP Infighting | ಪಕ್ಷದ್ರೋಹ ಎಸಗಿದವರ ವಿರುದ್ಧ ನನ್ನ ಹೋರಾಟ; ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ
ನಾವು ಜೆಪಿಸಿ ಅಧ್ಯಕ್ಷರ ಭೇಟಿಗಾಗಿ ಬಂದಿದ್ದೇವೆ. ಆದರೆ, ವಿಜಯೇಂದ್ರ ಹಾಗೂ ಅವರ ಬೆಂಬಲಿಗರು ನಮ್ಮ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಯತ್ನಾಳ ಆರೋಪಿಸಿದ್ದಾರೆ.;
ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನಡುವಿನ ತಿಕ್ಕಾಟ ದೆಹಲಿಯಲ್ಲೂ ಸದ್ದು ಮಾಡುತ್ತಿದೆ.
ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದು ದೆಹಲಿಯಲ್ಲಿ ಠಿಕಾಣಿ ಹೂಡಿರುವ ಶಾಸಕ ಯತ್ನಾಳ್ ಮತ್ತೆ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ. ಪ್ರತ್ಯೇಕ ರಾಜಕೀಯ ಪಕ್ಷ ಕಟ್ಟಿ, ಮತ್ತೆ ವಾಪಸಾದವರ ವಿರುದ್ಧ ಚರ್ಚೆಯಾಗಬೇಕು. ಹೊಂದಾಣಿಕೆ ರಾಜಕಾರಣದ ಮೂಲಕ ಪಕ್ಷದ್ರೋಹ ಎಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಬಿಜೆಪಿ ಪಕ್ಷವನ್ನು ವಂಶಪಾರಾಂಪರ್ಯ ಹಾಗೂ ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕು ಎಂಬ ಒಂದೇ ಉದ್ದೇಶದಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಯಾವುದೇ ವೈಯಕ್ತಿಕ ಬೇಡಿಕೆಗಲ್ಲ ಎಂದು ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಾವು ಜೆಪಿಸಿ ಅಧ್ಯಕ್ಷರ ಭೇಟಿಗಾಗಿ ಬಂದಿದ್ದೇವೆ. ಆದರೆ, ವಿಜಯೇಂದ್ರ ಹಾಗೂ ಅವರ ಬೆಂಬಲಿಗರು ನಮ್ಮ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಅವರುಗಳೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನಾಯಕತ್ವ ಬದಲಾವಣೆಗೆ ಬೇಡಿಕೆ ಇಟ್ಟಿದ್ದೇವೆ. ಕಾರ್ಯಕರ್ತರ ಜೊತೆ ಚರ್ಚಿಸಿ, ಅವರ ಭಾವನೆಗಳಿಗೆ ಹೈಕಮಾಂಡ್ ಬೆಲೆಕೊಡಬೇಕು. ನಾವು ಯಾವುದೇ ಹೊಸ ಪಕ್ಷ ಕಟ್ಟುವ ಮೂರ್ಖತನದ ಕೆಲಸಕ್ಕೆ ಕೈ ಹಾಕುವುದಿಲ್ಲ. ನಾವೆಂದಿಗೂ ಬಿಜೆಪಿಗೆ ದ್ರೋಹ ಬಗೆಯುವುದಿಲ್ಲ. ಆದರೆ, ಹೊಸ ಪಕ್ಷ ಕಟ್ಟಿ, ವಾಪಸ್ ಬಂದವರ ಬಗ್ಗೆ ಚರ್ಚೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಪಕ್ಷದಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಬೇಕು. ಅದಕ್ಕಾಗಿಯೇ ನಾವು ಕಾಯುತ್ತಿದ್ದೇವೆ. ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕವಾಗಿ ಹೋರಾಟ ಮಾಡುತ್ತಿಲ್ಲ. ಪಕ್ಷದ ಹಿತದೃಷ್ಟಿಯಿಂದ ನಾಯಕತ್ವ ಬದಲಾವಣೆ ಬೇಡಿಕೆ ಇಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಜೆಪಿಸಿ ಅಧ್ಯಕ್ಷರಿಗೆ ವಕ್ಫ್ ವರದಿ
ರಾಜ್ಯದಲ್ಲಿ ವಕ್ಫ್‌ನಿಂದ ಅನ್ಯಾಯಕ್ಕೆ ಒಳಗಾದವರ ಅಹವಾಲು ಆಲಿಸಿದ್ದೇವೆ. ರೈತರು, ಸನಾತನ ಧರ್ಮ ಮತ್ತು ಹಿಂದೂಗಳನ್ನು ರಕ್ಷಿಸುವ ಗುರಿಯೊಂದಿಗೆ ನಾವು ಹೋರಾಟ ಮಾಡುತ್ತಿದ್ದೇವೆ. ಜನಜಾಗೃತಿ ಅಭಿಯಾನದಲ್ಲಿ ಪಟ್ಟಿ ಮಾಡಿರುವ ಸಮಸ್ಯೆಗಳ ಕುರಿತ ವರದಿಯನ್ನು ಜೆಪಿಸಿ ಅಧ್ಯಕ್ಷರಿಗೆ ನೀಡಿದ್ದೇವೆ ಎಂದು ಯತ್ನಾಳ್ ಹೇಳಿದ್ದಾರೆ. ಡಿ.5 ರಂದು ಜೆಪಿಸಿ ಸಭೆ ನಡೆಯಲಿದೆ.
ಜೆ.ಪಿ.ನಡ್ಡಾ ಭೇಟಿಗೆ ಪ್ರಯತ್ನ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಭೇಟಿಗೆ ಸಮಯ ಕೋರಿದ್ದು, ನಾಯಕತ್ವದ ಬದಲಾವಣೆ ಕುರಿತು ವಿವರಣೆ ನೀಡಲಿದ್ದೇವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಂಸತ್ ಅಧಿವೇಶನ ನಡೆಯುತ್ತಿದೆ. ನಡ್ಡಾ ಅವರು ಸಮಯ ನೀಡಿದರೆ, ರಾಜ್ಯ ಬಿಜೆಪಿಯ ಸ್ಥಿತಿಗತಿಗಳ ಕುರಿತು ವಿವರಿಸುತ್ತೇವೆ. ಇಲ್ಲವಾದಲ್ಲಿ ವಾಪಸ್ ತೆರಳಿ, ಮತ್ತೊಮ್ಮೆ ಭೇಟಿಗೆ ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.
ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುತ್ತಿರುವ ಕುರಿತು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಬಸನಗೌಡ ಪಾಟೀಲ ಯತ್ನಾಳ್‌ಗೆ ಷೋಕಾಸ್ ನೋಟಿಸ್ ಜಾರಿ ಮಾಡಿತ್ತು.