ಜನಿವಾರ ತೆಗೆಸಿದ ಪ್ರಕರಣ | ಸರ್ಕಾರದ ವಿರುದ್ಧ ಬ್ರಾಹ್ಮಣ ಸಮುದಾಯದ ಮಠಾಧೀಶರ ಆಕ್ರೋಶ
ಸಿಇಟಿ ಪರೀಕ್ಷೆ ಬರಲು ಬಂದಿದ್ದ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಪ್ರಕರಣ ರಾಜ್ಯಾಧ್ಯಂತ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ರಾಜಕೀಯ ಪಕ್ಷಗಳು, ಬ್ರಾಹ್ಮಣ ಸಮುದಾಯದ ಬಳಿಕ ಮಠಾಧೀಶರೂ ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.;
ಬೀದರ್ ನಲ್ಲಿ ಜನಿವಾರ ತೆಗೆಯದ ಕಾರಣ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡದ ಪ್ರಕರಣ ಸಂಬಂಧ ಬ್ರಾಹ್ಮಣ ಸಮುದಾಯ, ಪ್ರತಿಪಕ್ಷಗಳ ನಂತರ ಇದೀಗ ಮಠಾಧೀಶರೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಯಚೂರಿನ ಮಂತ್ರಾಲಯ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಪ್ರಕಾರಣವನ್ನು ಖಂಡಿಸಿದ್ದು, ಸರ್ಕಾರದ ಸಚಿವರು, ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಜನಿವಾರ ಹಾಕಿಕೊಳ್ಳುವುದು ಧರ್ಮ ಮತ್ತು ಸಂಪ್ರದಾಯದ ಸಂಕೇತ. ಪರೀಕ್ಷೆ ವೇಳೆ ವಿದ್ಯಾರ್ಥಿಯ ಜನಿವಾರ ತೆಗೆಯುವಂತೆ ಹೇಳಿರುವುದು ಖಂಡನೀಯ. ಸಂವಿಧಾನದಲ್ಲಿ ಅವರವರ ಸಂಪ್ರದಾಯ ಆಚರಣೆಗೆ ಧಾರ್ಮಿಕ ಸ್ವಾತಂತ್ರ್ಯ ಇದೆ. ಆದರೆ, ಕೆಲವರು ಸಂವಿಧಾನದ ಬಗ್ಗೆ ಮಾತನಾಡುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಸಂವಿಧಾನದ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ ಹರಣ ಮಾಡುವ ಕೆಲಸ ನಡೆಯುತ್ತದೇ ಎಂದು ಟೀಕಿಸಿದ್ದಾರೆ.
ಯಾವುದೇ ಸಮುದಾಯವು ಧರ್ಮ ವಿರೋಧಿ ಚಟುವಟಿಕೆ ಮಾಡುವುದು ಹೇಯ ಕೃತ್ಯ. ನಾವೆಲ್ಲ ಇದನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ, ಪ್ರತಿಭಟಿಸುತ್ತೇವೆ. ಇದು ಪುನರಾವರ್ತನೆಯಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಯ ಭವಿಷ್ಯ ಹಾಳಾಗಿರುವುದರ ಜೊತೆಗೆ ಧರ್ಮಕ್ಕೆ ಚ್ಯುತಿ ಬಂದಿದೆ. ಸಚಿವರು, ಶಾಸಕರು ಸರಿಪಡಿಸುತ್ತೇವೆ ಅನ್ನೋದು ಕಣ್ಣೊರಿಸುವ ತಂತ್ರ. ಈ ಮೂಲಕ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಕಟುವಾಗಿ ತಿಳಿಸುತ್ತೇವೆ. ಯಾವುದೇ ಜನಪ್ರತಿನಿಧಿ ಅಥವಾ ಸಚಿವರು ಎಚ್ಚೆತ್ತುಕೊಂಡು ಧರ್ಮ ವಿರೋಧಿ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು ಎಚ್ಚರಿಸಿದ್ದಾರೆ.
ಕರ್ನಾಟಕ ಸರ್ವಧರ್ಮದ ಶಾಂತಿಯ ತೋಟ. ಸರ್ಕಾರ ತಕ್ಷಣ ಗಮನಿಸಿ ವಿದ್ಯಾರ್ಥಿಗೆ ಭವಿಷ್ಯ ಸರಿಪಡಿಸಬೇಕು. ರಾಜ್ಯಾದ್ಯಂತ ಬೇರೆ ಧರ್ಮದವರಿಗೆ ಇರದ ಯಾವುದೇ ನಿಯಮಗಳು, ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಮಾಡಿರುವುದು ಅನ್ಯಾಯ ಎಂದು ಹೇಳಿದ್ದಾರೆ.
ಗೋಕರ್ಣದ ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಬಟ್ಟೆಯ ಒಳಗೆ ಧರಿಸುವ ಜನಿವಾರದಿಂದ ಪರೀಕ್ಷಾ ನಿಯಮಕ್ಕೆ ಯಾವ ತೊಂದರೆಯೂ ಇಲ್ಲ. ಆದರೆ, ಈ ಘಟನೆಯ ಹಿಂದೆ ದ್ವೇಷದ ಜ್ವಾಲೆ ಕಾಣುತ್ತಿದೆ. ಪರೀಕ್ಷಾ ಸಮಯ ಮಕ್ಕಳ ಪಾಲಿಗೆ ಮಾನಸಿಕ ಒತ್ತಡದ ಸಮಯ. ಅದರ ನಡುವೆ ಇಂತಹಾ ಕ್ರೌರ್ಯದ ಘಟನೆಗಳು ಅಮಾನವೀಯವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬ್ರಾಹ್ಮಣರು ಜನಿವಾರ ಧರಿಸಿದರೆ, ವೀರಶೈವರು ಲಿಂಗವನ್ನು ಧರಿಸುತ್ತಾರೆ. ಇಂದು ಬ್ರಾಹ್ಮಣ ಜನಾಂಗದ ಮೇಲೆ ಆಗುತ್ತಿರುವ ಕ್ರೌರ್ಯ ನಾಳೆ ಬೇರೆ ಸಮಾಜದ ಮೇಲೂ ಆಗಬಹುದು. ಹಾಗಾಗಿ ಸಮಸ್ತ ಹಿಂದೂ ಸಮಾಜ ಇಂತಹ ಕೃತ್ಯಗಳನ್ನು ಖಂಡಿಸಬೇಕು ಎಂದು ಕರೆ ನೀಡಿದ್ದಾರೆ.
ಧಾರ್ಮಿಕತೆಯ ಜತೆಗೆ ರಾಜಿ ಮಾಡಿಕೊಳ್ಳದೇ, ಪರೀಕ್ಷೆಯನ್ನೇ ತಿರಸ್ಕರಿಸಿದ ವಿದ್ಯಾರ್ಥಿಯ ಧೋರಣೆ ಮೆಚ್ಚುವಂತದ್ದು. ಆ ವಿದ್ಯಾರ್ಥಿಯ ಜತೆಗೆ ಶ್ರೀ ರಾಮಚಂದ್ರಾಪುರ ಮಠ ಇರಲಿದೆ. ವಿದ್ಯಾರ್ಥಿಗೆ ಅಗತ್ಯವಾದ ಎಲ್ಲಾ ರೀತಿಯ ಸಹಕಾರವನ್ನು ಮಠದಿಂದ ನೀಡಲಾಗುವುದು ಎಂದು ಸ್ವಾಮೀಜಿ ಭರವಸೆ ನೀಡಿದ್ದಾರೆ
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಪ್ರತಿಕ್ರಿಯಿಸಿ, ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ಸಮುದಾಯದ ಕೆಲವು ವಿದ್ಯಾರ್ಥಿಗಳಿಗೆ ಒಂದೆರಡು ಕಡೆ ಪವಿತ್ರ ಜನಿವಾರ ತೆಗೆಸಿರುವುದು ಬ್ರಾಹ್ಮಣ ಸಮಾಜಕ್ಕೆ ಆಘಾತ ಉಂಟು ಮಾಡಿದೆ. ಇದು ರಾಜ್ಯದ ಒಂದು ಸಣ್ಣ ಸಮುದಾಯದ ಮೇಲೆ ನಡೆದ ದೌರ್ಜನ್ಯ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಪರೀಕ್ಷೆಯಿಂದ ವಂಚಿತನಾಗಿರುವ ವಿದ್ಯಾರ್ಥಿಗೆ ಮರುಪರೀಕ್ಷೆ ಬರೆಯಲು ಸೂಕ್ತ ಅವಕಾಶ ಮಾಡಿಕೊಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅಸಗೋಡು ಜಯಸಿಂಹ ಅವರು, ಇಂತಹ ಘಟನೆಗಳು ಸುಸಂಸ್ಕೃತ ಮತ್ತು ನಾಗರಿಕ ಸಮಾಜದಲ್ಲಿ ನಡೆಯಬಾರದು. ಇದಕ್ಕಾಗಿ ನಾವೆಲ್ಲರೂ ತಲೆ ತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಬೀದರ್, ಶಿವಮೊಗ್ಗದಲ್ಲಿ ನಡೆದಿದ್ದೇನು?
ಬೀದರ್ ನ ಸಾಯಿ ಸ್ಫೂರ್ತಿ ಕಾಲೇಜಿನ ಸಿಇಟಿ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಸುಚಿವ್ರತ್ ಕುಲಕರ್ಣಿ ಎಂಬ ವಿದ್ಯಾರ್ಥಿ ಗೆ ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಯುವಂತೆ ಹೇಳಿದ್ದರು. ಆದರೆ, ವಿದ್ಯಾರ್ಥಿ ಸಾಕಷ್ಟು ಮನವಿ ಮಾಡಿದರೂ ಸಿಬ್ಬಂದಿ ಒಳಗೆ ಬಿಟ್ಟಿರಲಿಲ್ಲ.ಆಗ ಪರೀಕ್ಷೆ ಬರೆಯದೇ ವಾಪಸ್ ಮನೆಗೆ ಬಂದಿದ್ದರು.
ಇನ್ನು ಶಿವಮೊಗ್ಗ ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿಯಿಂದ ಜನಿವಾರ ತೆಗೆಸಿ ಡಸ್ಟ್ ಬಿನ್ ಗೆ ಹಾಕಲಾಗಿತ್ತು. ಪಾರ್ಥ ರವಫ್ ಎಂಬ ವಿದ್ಯಾರ್ಥಿ ಜನಿವಾರ ತೆಗೆಸಿದ ಬಳಿಕ ಪರೀಕ್ಷೆಗೆ ಅವಕಾಧ ನೀಡಲಾಗಿತ್ತು.
ರಾಜಕೀಯ ರೂಪ ಪಡೆದ ಪ್ರಕರಣ
ಜನಿವಾರ ತೆಗೆಸಿದ ಪ್ರಕರಣ ಇದೀಗ ರಾಜಕೀಯ ರೂಪ ಪಡೆದಿದೆ. ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿಗೆ ಈ ಪ್ರಕರಣವನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಜನಿವಾರಕ್ಕೆ ಕೈ ಹಾಕಿದ ಸರ್ಕಾರ ಮುಂದೆ ಶಿವದಾರಕ್ಕೂ ಕೈ ಹಾಕಬಹುದು. ಈ ನಿಟ್ಟಿನಲ್ಲಿ ಬಿಜೆಪಿ ಅಭಿಯಾನ ಆರಂಭಿಸಲಿದೆ ಎಂದು ರಾಜಕೀಯ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಬೀದರ್ ಹಾಗೂ ಶಿವಮೊಗ್ಗದಲ್ಲಿ ನಾಲ್ವರನ್ನು ಅಮಾನತು ಮಾಡಲಾಗಿದೆ.