Bangalore News | ಹಸುಗಳ ಕೆಚ್ಚಲು ಕೊಯ್ದು ವಿಕೃತಿ; ತಪ್ಪಿತಸ್ಥರ ಬಂಧನಕ್ಕೆ ಆಗ್ರಹ
Bangalore News | ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದಿರುವ ಘಟನೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.;
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಶನಿವಾರ ರಾತ್ರಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಚಾಮರಾಜಪೇಟೆಯ ಪೆನ್ಷನ್ ಮೊಹಲ್ಲಾ ನಿವಾಸಿ ಕರ್ಣ ಎಂಬುವವರು ಸಾಕಿದ್ದ ಎಂಟು ಹಸುಗಳ ಪೈಕಿ ಮೂರು ಹಸುಗಳ ಕೆಚ್ಚಲು ಕೊಯ್ದಿದ್ದು, ರಸ್ತೆಯಲ್ಲಿ ರಕ್ತ ಹರಿದಿದೆ. ಭಾನುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದ ಬಳಿಕ ಹಿಂದೂಪರ ಸಂಘಟನೆಗಳು, ಪ್ರಾಣಪ್ರಿಯರು ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಂಸದ ಪಿ.ಸಿ. ಮೋಹನ್ ಭೇಟಿ ನೀಡಿದ್ದು, ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿದ್ದಾರೆ. ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮೂಕ ಪ್ರಾಣಿಗಳ ಮೇಲಿನ ಕೃತ್ಯಕ್ಕೆ ಖಂಡನೆ
ಹಸುಗಳ ಕೆಚ್ಚಲು ಕೊಯ್ದಿರುವ ಘಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಬಿಜೆಪಿ ನಾಯಕರು, ಹಿಂದೂಪರ ಸಂಘಟನೆಗಳ ಮುಖಂಡರು ಕಿಡಿಕಾರಿದ್ದಾರೆ.
ಹಿಂದೂ ಧರ್ಮದಲ್ಲಿ ಗೋವನ್ನು ಕಾಮಧೇನು ಎಂದು ಪೂಜಿಸಲಾಗುತ್ತದೆ. ಸಂಕ್ರಾಂತಿ ಹಬ್ಬದಂದು ಗೋಮಾತೆಗೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ಹಬ್ಬದ ಮುನ್ನವೇ ದುಷ್ಕರ್ಮಿಗಳು ಚಾಮರಾಜಪೇಟೆಯಲ್ಲಿ ರಾಕ್ಷಸಿ ಕೃತ್ಯ ಎಸಗಿರುವುದು ಖಂಡನೀಯ ಎಂದು ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿನಾಯಕನಗರದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್, ಹಸುಗಳ ಕೆಚ್ಚಲು ಕೊಯ್ದ ಜಿಹಾದಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಕರಾಳ ಸಂಕ್ರಾಂತಿ ಆಚರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇಡೀ ದೇಶ ಗೋವನ್ನು ಮಾತೆಯಂತೆ ಕಾಣುತ್ತದೆ. ಕಾಂಗ್ರೆಸ್ ಸರ್ಕಾರ ಹೊಸ ವರ್ಷಕ್ಕೆ ಬೆಲೆ ಏರಿಕೆಯ ಕೊಡುಗೆ ನೀಡಿದೆ. ಅದೇ ರೀತಿ ಸಂಕ್ರಾಂತಿ ಹಬ್ಬದಂದು ಹಸುವಿನ ಕೆಚ್ಚಲು ಕೊಯ್ದು ಹಾಕುವ ಕೊಡುಗೆ ನೀಡಿದೆ. ಇಂತಹ ಜಿಹಾದಿ ಮನಸ್ಥಿತಿಯನ್ನು ನಾನು ನೋಡಿಲ್ಲ ಎಂದು ಕಿಡಿಕಾರಿದ್ದಾರೆ.
ಚಾಮರಾಜಪೇಟೆಯಲ್ಲಿ ಪಶು ಆಸ್ಪತ್ರೆಯ ಭೂಮಿಯನ್ನು ವಕ್ಫ್ ಮಂಡಳಿಗೆ ಸೇರಿಸುವ ಪ್ರಯತ್ನ ನಡೆದಿತ್ತು. ಆಗ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಆಸ್ಪತ್ರೆ ಜಾಗ ಕಬಳಿಸುವ ಸಲುವಾಗಿಯೇ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಸಂಸದ ಪಿಸಿ ಮೋಹನ್ ಮಾತನಾಡಿ, ಈ ಭಾಗದಲ್ಲಿ ಡ್ರಗ್ಸ್ ,ಗಾಂಜಾ ಸೇವನೆ ಹೆಚ್ಚಿದ್ದರೂ ಪೊಲೀಸರು ಕಡಿವಾಣ ಹಾಕುತ್ತಿಲ್ಲ. ಇದರಿಂದ ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ ಎಂದು ದೂರಿದ್ದಾರೆ.
ರಾಜ್ಯವ್ಯಾಪಿ ಪ್ರತಿಭಟನೆ ಎಚ್ಚರಿಕೆ
ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಲು ಸಚಿವ ಜಮೀರ್ ಅಹಮದ್ ಖಾನ್ ಕ್ರಮ ಕೈಗೊಳ್ಳಲಿದ್ದರೆ ಶ್ರೀರಾಮಸೇನೆ ವತಿಯಿಂದ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇಸ್ಲಾಮಿಕ್ ಶಕ್ತಿಯ ಪ್ದರ್ಶನ ಆಗುತ್ತಿದೆ. ಸಚಿವ ಜಮೀರ್ ಅಹಮದ್ ಖಾನ್ ಅವರ ಕ್ಷೇತ್ರದಲ್ಲೇ ಇಂತಹ ರಾಕ್ಷಸ ಕೃತ್ಯ ನಡೆದಿರುವುದರಿಂದ ಗಂಭೀರವಾಗಿ ಪರಿಗಣಿಸಬೇಕು. ಹಸು ಹಿಂದೂಗಳಿಗೆ ಪೂಜ್ಯನೀಯ ಪ್ರಾಣಿ, ರೈತರ ಬೆನ್ನೆಲುಬು ಕೂಡ. ಬೆಂಗಳೂರಿನಲ್ಲಿ ಅಡಗಿರುವ ಬಾಂಗ್ಲಾದೇಶಿಯರನ್ನು ಒದ್ದು ಒಳಗೆ ಹಾಕಬೇಕು. ಇಲ್ಲವಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಹಿಂದೂಪರ ಹೋರಾಟಗಾರ ಸೂಲಿಬೆಲೆ ಚಕ್ರವರ್ತಿ ಪ್ರತಿಕ್ರಿಯಿಸಿ, ಹಸುಗಳ ಕೆಚ್ಚಲು ಕತ್ತರಿಸಿರುವುದು ಅಮಾನವೀಯ, ಹಿಂದೂ-ಮುಸ್ಲಿಮರ ನಡುವೆ ಧಂಗೆ ಎಬ್ಬಿಸಲು ಕಿಡಿಗೇಡಿಗಳು ಪ್ರಯತ್ನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ
ಹಸುಗಳ ಕೆಚ್ಚಲು ಕೊಯ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದೆ.
ಬಳ್ಳಾರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಾಣಿ ಹಿಂಸೆ ಮಾಡುವುದು ಅಪರಾಧ, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಲಾಗುವುದು. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಹಿಂದೂಪರ ಸಂಘಟನೆಗಳು ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ.