ವಕ್ಫ್‌​ ಬೋರ್ಡ್​​ ವಿವಾಹ ನೋಂದಣಿ: ಯಾವ ಕಾನೂನಿನಡಿ ಈ ಕ್ರಮ ಎಂದು ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಬೆಂಗಳೂರಿನ ದಿ ಹೆಲ್ಪಿಂಗ್ ಸಿಟಿಜನ್ ಆ್ಯಂಡ್ ಪೀಪಲ್ಸ್‌ ಕೋರ್ಟ್ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕ ಎ ಆಲಂ ಪಾಷಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

Update: 2024-11-16 11:38 GMT
ಕರ್ನಾಟಕ ಹೈಕೋರ್ಟ್‌
Click the Play button to listen to article

ಕರ್ನಾಟಕ ರಾಜ್ಯ ವಕ್ಫ್​ ಮಂಡಳಿಗೆ ಮುಸ್ಲಿಮರ ವಿವಾಹ ನೋಂದಣಿ ಪ್ರಮಾಣಪತ್ರ ನೀಡುವ ಅಧಿಕಾರ ನೀಡುವ ನಿಯಮವನ್ನು ಎಲ್ಲಿಯೂ ಕೇಳಿಲ್ಲ ಎಂದು ಹೇಳಿರುವ ಹೈಕೋರ್ಟ್, ಯಾವ ಕಾನೂನಿನಡಿ ಅಧಿಕಾರ ಬಳಸಿ ಇಂತಹ ಆದೇಶ ಹೊರಡಿಸಲಾಗಿದೆ ಎಂಬ ಬಗ್ಗೆ ಉತ್ತರ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ದಿ ಹೆಲ್ಪಿಂಗ್ ಸಿಟಿಜನ್ ಆ್ಯಂಡ್ ಪೀಪಲ್ಸ್‌ ಕೋರ್ಟ್ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕ ಎ ಆಲಂ ಪಾಷಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿ, ವಿಚಾರಣೆ ಮುಂದೂಡಿದೆ.

ಸರ್ಕಾರಿ ವಕೀಲರು ಹಾಜರಾಗಿ, ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅದಕ್ಕೆ ನ್ಯಾಯಾಲಯ ಒಪ್ಪಲಿಲ್ಲ. ಅಲ್ಲದೆ, ವಿಚಾರಣೆಯನ್ನು ನ. 21ಕ್ಕೆ ಮುಂದೂಡಿ, ಸರ್ಕಾರ ಮುಂದಿನ ವಿಚಾರಣೆ ವೇಳೆಗೆ ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತು.

''ವಕ್ಫ್ ಕಾಯಿದೆಯ ಯಾವ ನಿಯಮದಡಿ ಮಂಡಳಿಗೆ ಮದುವೆ ನೋಂದಣಿ ಪ್ರಮಾಣಪತ್ರ ವಿತರಿಸುವಂತಹ ಅಧಿಕಾರ ನೀಡಬಹುದು,'' ಎಂಬುದನ್ನು ಸಾಬೀತುಪಡಿಸುವಂತೆ ಮೌಖಿಕವಾಗಿ ಹೇಳಿತು.

ಕಳೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ರಾಜ್ಯ ಸರ್ಕಾರದ ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್‌ ಇಲಾಖೆ 2023ರ ಸೆ. 30ರಂದು ಆದೇಶ ಹೊರಡಿಸಿದ್ದು, ಅದರಂತೆ ಮುಸ್ಲಿಂ ಸಮುದಾಯದವರ ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡಲಾಗಿದೆ. ಇದು ವಕ್ಫ್ ಕಾಯಿದೆ- 1995ರ ನಿಯಮಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಸರ್ಕಾರದ ಆದೇಶವನ್ನು ರದ್ದುಗೊಳಿಸಿ ಮೊದಲಿದ್ದ ವ್ಯವಸ್ಥೆಯನ್ನೇ ಮುಂದುವರಿಸಲು ನಿರ್ದೇಶನ ನೀಡಬೇಕು,'' ಎಂದು ಕೋರಿದ್ದರು.

ಆದರೆ, ಸರ್ಕಾರಿ ವಕೀಲರು, ''ಮದುವೆ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರ ಮಾತ್ರ ವಕ್ಫ್ ಮಂಡಳಿಗೆ ನೀಡಲಾಗಿದೆ. ಬೇರೆ ಯಾವ ಅಧಿಕಾರವನ್ನೂ ನೀಡಿಲ್ಲ" ಎಂದು ಸಮಜಾಯಿಷಿ ನೀಡಿದ್ದರು. ಆದರೆ, ನ್ಯಾಯಾಲಯ, ''ಮದುವೆ ಪ್ರಮಾಣಪತ್ರ ವಿತರಿಸುವ ಕಾರ್ಯವನ್ನು ವಕ್ಫ್ ಬೋರ್ಡ್‌ ಮಾಡಬೇಕಿಲ್ಲ'' ಎಂದು ಮೌಖಿಕವಾಗಿ ಹೇಳಿತ್ತು.

Tags:    

Similar News