Mysore MUDA Scam| ರಾಜೀನಾಮೆ ಅಗತ್ಯವಿಲ್ಲ; ಸಿದ್ದರಾಮಯ್ಯ ಬೆನ್ನಿಗೆ ನಿಂತ ಕಾಂಗ್ರೆಸ್ ಹೈಕಮಾಂಡ್
ಕಾಂಗ್ರೆಸ್ ಹೈಕಮಾಂಡ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜಕೀಯ ಸಂಚಿನ ಭಾಗವಾಗಿ ಈ ಹಗರಣ ಆರೋಪ ಮುನ್ನೆಲೆಗೆ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.;
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಪುರಸ್ಕರಿಸಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ್ದಾರೆ. ಸಿದ್ದರಾಮಯ್ಯ ಅವರ ರಾಜೀನಾಮೆಗೂ ವಿರೋಧ ಪಕ್ಷಗಳ ಒತ್ತಡ ತೀವ್ರವಾಗಿದೆ.
ಆದರೆ, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಹಾಗೂ ಅವರ ಹಿಂದೆ ಬಲವಾಗಿ ನಿಲ್ಲುವುದಾಗಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಪಡಿಸಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡಾ ಸಿದ್ದರಾಮಯ್ಯ ಅವರ ಪರ ನಿಂತಿದೆ. ಬಿಜೆಪಿ ರಾಜಕೀಯ ಸಂಚಿನ ಭಾಗವಾಗಿ ಈ ಹಗರಣ ಆರೋಪ ಕೇಳಿಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರನ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ ಪಕ್ಷ ಅವರ ಜತೆ ನಿಲ್ಲುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಒಟ್ಟಾರೆಯಾಗಿ ಹೈಕಮಾಂಡ್ ಸಂದೇಶವನ್ನು ನೀಡಿರುವುದಾಗಿ ಕಾಂಗ್ರೆಸ್‌ನ ಉನ್ನತ ಮೂಲಗಳು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾವು ಹಾಗೂ ಇಡೀ ಪಕ್ಷ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುವುದಾಗಿ ಹೇಳಿದರು. “ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ವಿವಿಧ ಯೋಜನೆಗಳ ಮೂಲಕ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅದನ್ನು ಬಿಜೆಪಿಗೆ ರಾಜಕೀಯವಾಗಿ ಸಹಿಸಲು ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಈ ರೀತಿ ರಾಜಕೀಯ ಸಂಚು ನಡೆಸಿದ್ದು, ಅದನ್ನು ಎದುರಿಸುವುದಾಗಿ ಶಿವಕುಮಾರ್ ಹೇಳಿದ್ದಾರೆ.
“ನಾವೆಲ್ಲರೂ ಸಿದ್ದರಾಮಯ್ಯ ಅವರ ಜತೆ ಇದ್ದೇವೆ. ಈ ಹಿಂದೆ ನನ್ನನ್ನೂ ರಾಜಕೀಯ ಸಂಚಿನ ಮೂಲಕ ಪ್ರಕರಣ ದಾಖಲಿಸಿ ಜೈಲು ಸೇರುವಂತೆ ಮಾಡಿದ್ದರು. ಅದೇ ರೀತಿ ಈಗ ಸಿದ್ದರಾಮಯ್ಯ ಅವರ ರಾಜಕೀಯ ಏಳಿಗೆಯನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ದೇಶದೆಲ್ಲೆಡೆ ಬಿಜೆಪಿ ವಿರೋಧ ಪಕ್ಷಗಳ ನಾಯಕರನ್ನು ಹಣಿಯಲು ಯತ್ನಿಸುತ್ತಿರುವುದರ ಭಾಗ ಇದಾಗಿದೆ ,” ಎಂದು ಅವರು ವಿಶ್ಲೇಷಿಸಿದರು.
ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ತಮಗೆ ಕೋರ್ಟ್ ತೀರ್ಪಿನ ಮೇಲೆ ಗೌರವ ಇದೆ, ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿದ್ದಾರೆ. ಸಚಿವರಾದ ಸಂತೋಷ್ ಲಾಡ್, ಕೃಷ್ಣ ಬೈರೇಗೌಡ, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಡಾ. ಜಿ. ಪರಮೇಶ್ವರ ಮತ್ತಿತರರು ಮುಖ್ಯಮಂತ್ರಿ ಬೆಂಬಲಕ್ಕೆ ನಿಂತಿದ್ದಾರೆ.
ರಾಜಕೀಯ ಷಡ್ಯಂತ್ರ
ಕಾಂಗ್ರೆಸ್ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ” ಮುಡಾ ನಿವೇಶನ ಪ್ರಕರಣದಲ್ಲಿ ಅಕ್ರಮವಾಗಿದೆ ಎಂದಾದರೆ ತನಿಖೆ ಎದುರಿಸಬೇಕಾಗಿರುವುದು ಮುಡಾ, ಅದರ ಅಧಿಕಾರಿಗಳು. ದೂರಿನಲ್ಲಿ ಪಾರ್ಟಿಯಾಗಬೇಕಾಗಿರುವುದು . ಆದರೆ ಈ ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲದ ಮುಖ್ಯಮಂತ್ರಿಗಳನ್ನೇ ಗುರಿಯಾಗಿಸಿ ದೂರು ನೀಡಲಾಗಿದೆ ಎಂದಾದರೆ ಇದು ರಾಜಕೀಯ ದುರುದ್ದೇಶವಲ್ಲದೆ ಇನ್ನೇನೂ ಅಲ್ಲ. ರಾಜಕೀಯ ಪ್ರೇರಿತ ಪ್ರಕರಣವನ್ನು ಎದುರಿಸುವುದು ತಿಳಿದಿದೆ, ಕಾಂಗ್ರೆಸ್ ನಾಯಕರನ್ನು ಯಾವುದರಲ್ಲೂ ಮಣಿಸಲು ಸಾಧ್ಯವಾಗದಾಗ ಕಾನೂನಿನ ಕುಣಿಕೆ ಹಾಕುವುದು ಬಿಜೆಪಿಯ ಷಡ್ಯಂತ್ರದ ಭಾಗ. ಈ ಹಿಂದೆ ಅವರನ್ನು ಕಾನೂನಿನ ಮೂಲಕ ಹಣಿಯುವ ಬಿಜೆಪಿಯ ಪ್ರಯತ್ನ ವಿಫಲವಾಗಿದೆ, ಈಗ ಅವರ ವಿರುದ್ಧದ ತಂತ್ರಗಳೂ ವಿಫಲವಾಗಲಿದೆ,” ಎಂದು ಪ್ರತಿಕ್ರಿಯಿಸಿದೆ.
“ಹೋರಾಟ ಮುಂದುವರೆಯಲಿದೆ, ಸರ್ಕಾರವನ್ನು ಅಸ್ಥಿರಗೊಳಿಸುವ ರಾಜ್ಯಪಾಲರ ಪ್ರಯತ್ನಕ್ಕೆ, ಬಿಜೆಪಿಯ ಷಡ್ಯಂತ್ರಕ್ಕೆ ಬಗ್ಗುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲರು ಕುಮಾರಸ್ವಾಮಿ ಹಾಗೂ ಇತರ ಬಿಜೆಪಿ ನಾಯಕರ ಬಗೆಗಿನ ದೂರುಗಳನ್ನು ಮುಚ್ಚಿಡಲು ಪ್ರಯತ್ನಿಸಿದ್ದು ಜಗಜ್ಜಾಹೀರಾಗಿದೆ, ಈ ಬಗ್ಗೆ ದೂರುಗಳು ಹೇಗೆ ಸೋರಿಕೆಯಾದವು ಎಂದು ರಾಜ್ಯಪಾಲರ ಪ್ರಶ್ನೆಯೇ ಅವರ ತಾರತಮ್ಯದ ರಾಜಕೀಯಕ್ಕೆ ಪುರಾವೆ ಒದಗಿಸುತ್ತವೆ,” ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.