The Federal Debate | ಮುಡಾ ಪ್ರಕರಣದಲ್ಲಿ ಕ್ಲೀನ್ ಚಿಟ್: ಸಿದ್ದರಾಮಯ್ಯ ಸ್ಥಾನ ಅಬಾಧಿತ? ಡಿಸಿಎಂ ಮುಂದಿನ ನಡೆ ಏನು?

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿದೆ. ರಾಜ್ಯ ಕಾಂಗ್ರೆಸ್​ನಲ್ಲಿ 'ಸಿಎಂ ಬದಲಾವಣೆ' ವಿಚಾರ ಮತ್ತೆ ಮುನ್ನೆಲೆಗೆ ಬರಲಿದೆಯೆ?;

By :  Anil Basur
Update: 2025-02-21 02:30 GMT
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್

ರಾಜ್ಯ ರಾಜಕೀಯದಲ್ಲಿ ಸಂಚಲನವನ್ನುಂಟು ಮಾಡಿರುವ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ. ಸುದೀರ್ಘ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಸಾಕ್ಷಾಧಾರಗಳ ಕೊರತೆಯ ಕಾರಣ ತೋರಿಸಿ ಅಂತಿಮವಾಗಿ ಬಿ ರಿಪೋರ್ಟ್​ ಹಾಕಿದ್ದಾರೆ.

ಹೀಗಾಗಿ ಬಲು ಕಠಿಣ ಪರಿಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಒಂದು ಹಂತದ ಯುದ್ಧ ಗೆದ್ದಂತಾಗಿದೆ. ಇದು ರಾಜ್ಯ ಕಾಂಗ್ರೆಸ್​​ನಲ್ಲಿ ಮಹತ್ವದ ಬದಲಾವಣೆಗೂ ಕಾರಣವಾಗಲಿದೆ ಎಂಬ ವಿಶ್ಲೇಷಣೆಯನ್ನು ರಾಜಕೀಯ ತಜ್ಞರು ಮಾಡುತ್ತಿದ್ದಾರೆ. 

ಇನ್ನೇನು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇಬಿಟ್ಟರು ಎಂಬಂತಹ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ನಡೆದಿದ್ದವು. ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಈಗಿನ ಸರ್ಕಾರ ಬಂದಾಗಿನಿಂದ ಇರುವ 'ಸಿಎಂ ಬದಲಾವಣೆ ಒಪ್ಪಂದ' ಮತ್ತೆ ಮುನ್ನೆಲೆಗೆ ಬಂದಿತ್ತು. ಆದರೆ ಲೋಕಾಯುಕ್ತ ತನಿಖೆಯ ಬಳಿಕ ಇಡೀ ಚಿತ್ರಣ ಬದಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 'ಕೈ' ಬಲವಾಗುತ್ತಿದೆ. ಇದೆಲ್ಲವೂ ಕೂಡ ಹೈಕಮಾಂಡ್​ ಮೇಲೆ ಒತ್ತಡ ಹೆಚ್ಚಾಗಲೂ ಕಾರಣವಾಗಿದೆ. 

ವರದಿ ಸಲ್ಲಿಸಿದ ಲೋಕಾಯಕ್ತ

ಲೋಕಾಯುಕ್ತ  82ನೇ ಸಿಟಿ ಸಿವಿಲ್ ಕೋರ್ಟ್ ನ ನ್ಯಾ.ಸಂತೋಷ್ ಗಜಾನನ ಭಟ್ ಅವರ ಮುಂದೆ 11, 000 ಸಾವಿರ ಪುಟಗಳ ವರದಿಯನ್ನು ತನಿಖಾಧಿಕಾರಿ ಎಸ್‌.ಪಿ. ಉದೇಶ್ ಸಲ್ಲಿಸಿದ್ದಾರೆ.

ಲೋಕಾಯುಕ್ತ ವರದಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ವರ್ಷ ಅವಧಿ ಪೂರ್ಣಗೊಳಿಸುವ ಚರ್ಚೆಗೆ ಮತ್ತೆ ಬಲ ಕೊಟ್ಟಿದೆ. ಸಿದ್ದರಾಮಯ್ಯ ಅವರು ಉಳಿದ ಅವಧಿಗೆ ಸಿಎಂ ಆಗಿ ಮುಂದುವರೆಯುತ್ತಾರಾ? ಕಾಂಗ್ರೆಸ್ ನಾಯಕರು, ಮಂತ್ರಿಗಳ ನಡೆ ಇದೀಗ ಕುತೂಹಲ ಮೂಡಿಸಿದೆ.

ಮತ್ತೆ ಮುನ್ನೆಲೆಗೆ ಬಂದ ಸಿಎಂ ಬದಲಾವಣೆ ಚರ್ಚೆ?

ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್​ ಹಾಕುವುದಕ್ಕೂ ಕೆಲ ದಿನಗಳ ಮೊದಲು ಸಿಎಂ ಸಿದ್ದರಾಮಯ್ಯ ಆಪ್ತ ಮಂತ್ರಿಗಳು ದೆಹಲಿಗೆ ತೆರಳಿ ಹೈಕಮಾಂಡ್​ ಭೇಟಿ ಮಾಡಿ ಬಂದಿದ್ದರು. ಜೊತೆಗೆ ಅಧಿಕಾರವನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ನೇರವಾಗಿ ಸಿಎಂ ಸ್ಥಾನದ ಕುರಿತು ಮಾತನಾಡಿದ್ದರು. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಕ್ಲೀನ್ ಚಿಟ್  ಸಿಕ್ಕಿದೆ.

ಈ ಸಂಬಂಧ ಮಾತನಾಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, 'ಈಗ ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಾಗಿದೆ. ಸಿಬಿಐ ಕೂಡ ತನಿಖಾ ಸಂಸ್ಥೆ. ಒಂದು ತನಿಖಾ ಸಂಸ್ಥೆ ಕ್ಲೀನ್ ಚಿಟ್ ಕೊಟ್ಟ ಬಳಿಕ ಮತ್ತೊಂದು ತನಿಖಾ ಸಂಸ್ಥೆಗೆ ವಹಿಸುವುದು ಕಾನೂನಿಗೆ ವಿರುದ್ಧ. ಸಾಕ್ಷಿ ಆಧಾರದ ಮೇಲೆ ಸಾಕ್ಷಿ ಲೋಕಾಯುಕ್ತ ವರದಿ ಕೊಟ್ಟಿದೆ' ಎಂದಿದ್ದಾರೆ.

ಜೊತೆಗೆ ಉಳಿದ ಅವಧಿಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರಾ? ಎಂಬ ಪ್ರಶ್ನೆಗೆ ಅದರ ಕುರಿತು ನಾನು ಮಾತನಾಡುವುದಿಲ್ಲ ಎಂದು ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹೀಗಾಗಿ ಈ ವಿಚಾರ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಮತ್ತೆ ಚರ್ಚೆಗೆ ಬರುವುದು ಸ್ಪಷ್ಟವಾಗಿದೆ.

ಇದೇ ವಿಷಯಕ್ಕೆ ಸಬಂಧಿಸಿದಂತೆ 'ದ ಫೆಡರಲ್ ಕರ್ನಾಟಕ'ದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ವಕ್ತಾರರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಲೋಕಾಯುಕ್ತ ಸ್ವಾಯತ್ತ ತನಿಖಾ ಸಂಸ್ಥೆ ಆಗಿದೆ. ಆದರೆ ಅದರಲ್ಲಿ ಕೆಲಸ ಮಾಡುವ ಕೆಲ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಲೋಕಾಯಕ್ತದ ಕುರಿತು ನಮಗೆ ಗೌರವವಿದೆ. ಆದರೆ ಮುಡಾ ಹಗರಣದ ಕುರಿತು ಕೊಟ್ಟಿರುವ ಮಧ್ಯಂತರ ವರದಿ ನಿರೀಕ್ಷಿತ. ಹೀಗಾಗಿ ಈ ವಿಚಾರವನ್ನಿಟ್ಟುಕೊಂಡು ಸಿಬಿಐ ತನಿಖೆಗೆ ಹೋಗುವ ಅವಕಾಶವಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಎಫ್​.ಎಸ್. ಸಿದ್ದನಗೌಡರ್ ಅಭಿಪ್ರಾಯ ಪಟ್ಟಿದ್ದಾರೆ.

ಜೊತೆಗೆ ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ಬದಲಾವಣೆಗೆ ಚರ್ಚೆಗೆ ಇದು ಕಾಲ ತಳ್ಳುವ ವರದಿ ಅಷ್ಟೇ. ಮುಂದೆ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ತಪ್ಪಿತಸ್ಥರು ಎಂಬುದು ಸಾಬೀತಾಗಲಿದೆ ಎಂದಿದ್ದಾರೆ.

ಚರ್ಚೆಯಲ್ಲಿ ಭಾವವಹಿಸಿದ್ದ ಕೆಪಿಸಿಸಿ ವಕ್ತಾರೆ ಸ್ವಾತಿ ಚಂದ್ರಶೇಖರ್, 'ಲೋಕಾಯಕ್ತ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಅದು ಕೂಡ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸಿದೆ. ಹೀಗಾಗಿ ಇಡೀ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ  ಪಾತ್ರವಿಲ್ಲ. ಜೊತೆಗೆ ಸಿಎಂ ಬದಲಾವಣೆ ಅಥವಾ ಇನ್ನಾವುದೇ ವಿಚಾರಕ್ಕೆ ಇದು ಸಂಬಂಧಿಸಿಲ್ಲ. ನಮ್ಮ ಪಕ್ಷದ ಹೈಕಮಾಂಡ್ ಎಲ್ಲ ವಿಷಯಗಳ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ' ಎಂದಿದ್ದಾರೆ.

ಒಟ್ಟಾರೆ ಮುಡಾ ಕೇಸ್​ನಲ್ಲಿ ಸಿದ್ದರಾಮಯ್ಯರಿಗೆ ಸಿಕ್ಕಿರುವುದು ತಾತ್ಕಾಲಿಕ ರಿಲೀಫ್ ಎಂದು ಬಿಜೆಪಿ ಪ್ರತಿಪಾದಿಸಿದೆ. ಅದೇ ರೀತಿ ಸಿದ್ದರಾಮಯ್ಯರು ಯಾವುದೇ ತಪ್ಪು ಮಾಡಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. 

ದ ಫೆಡರಲ್‌ ಕರ್ನಾಟಕ ನಡೆಸಿದ ಚರ್ಚೆಯ ವಿಡಿಯೋ ಇಲ್ಲಿದೆ.

Full View


Tags:    

Similar News