Mysore MUDA Scam| ಲೋಕಾಯುಕ್ತ ಪೊಲೀಸರಿಂದ ನ್ಯಾಯಯುತ ತನಿಖೆ ನಡೆಸಲು ಅಸಾಧ್ಯ: ವಿಜಯೇಂದ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಲೋಕಾಯುಕ್ತ ಪೊಲೀಸರಿಂದ ತನಿಖೆ ಸಾಧ್ಯವೇ? ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿರುವ ಲೋಕಾಯುಕ್ತ ಪೊಲೀಸರು, ರಾಜ್ಯದಲ್ಲಿರುವ ಲೋಕಾಯುಕ್ತ ಪೊಲೀಸರಿಂದ ಯಾವುದೇ ರೀತಿ ನ್ಯಾಯಯುತ ತನಿಖೆ ನಡೆಸಲು ಅಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅಭಿಪ್ರಾಯಪಟ್ಟಿದ್ದಾರೆ.

Update: 2024-09-25 11:52 GMT

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಲೋಕಾಯುಕ್ತ ಪೊಲೀಸರಿಂದ ತನಿಖೆ ಸಾಧ್ಯವೇ? ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿರುವ ಲೋಕಾಯುಕ್ತ ಪೊಲೀಸರು, ರಾಜ್ಯದಲ್ಲಿರುವ ಲೋಕಾಯುಕ್ತ ಪೊಲೀಸರಿಂದ ಯಾವುದೇ ರೀತಿ ನ್ಯಾಯಯುತ ತನಿಖೆ ನಡೆಸಲು ಅಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ವಿಶೇಷ ನ್ಯಾಯಾಲಯ ಆದೇಶ ಮಾಡಿರಬಹುದು; ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವ ಸಲುವಾಗಿ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜೀನಾಮೆ ನೀಡುವ ಮುನ್ನ ಈ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆ, ಸಿಬಿಐಗೆ ವಹಿಸಬೇಕು. ಆಗ ಸಿದ್ದರಾಮಯ್ಯನವರು ಗೌರವ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಮೈಸೂರಿನ ಸಾಮಾಜಿಕ ಕಾರ್ಯಕರ್ತ ಮತ್ತು ದೂರುದಾರ ಸ್ನೇಹಮಯಿ ಕೃಷ್ಣ ಅವರ ಅರ್ಜಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ಎಂಪಿ, ಎಂಎಲ್‍ಎಗಳ ಸ್ಪೆಷಲ್ ಕೋರ್ಟ್) ಮುಂದೆ ಇತ್ತು. ಕಳೆದ ತಿಂಗಳು ನ್ಯಾಯಾಲಯದಲ್ಲಿ ಸಮಗ್ರವಾಗಿ ವಾದ ಮಂಡನೆಯೂ ಆಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾನ್ಯ ರಾಜ್ಯಪಾಲರ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೆಳನ್ಯಾಯಾಲಯಕ್ಕೆ ತಡೆಯೂ ಇತ್ತು. ನಿನ್ನೆ ಹೈಕೋರ್ಟ್ ತೀರ್ಪನ್ನು ಕೊಟ್ಟು ರಾಜ್ಯಪಾಲರ ನಿರ್ಣಯ ಸರಿಯಾಗಿದೆ; ಕ್ರಮಬದ್ಧವಾಗಿದೆ. ಮೈಸೂರಿನ ಮೂಡ ಹಗರಣದಲ್ಲಿ ರಾಜ್ಯಪಾಲರ ಆದೇಶ ಕ್ರಮಬದ್ಧವಿದೆ ಎಂದು ಅದು ತಿಳಿಸಿತ್ತು ಎಂದು ವಿವರಿಸಿದರು.

ವಿಶೇಷ ನ್ಯಾಯಾಲಯಕ್ಕೆ ಇದ್ದ ತಡೆಯಾಜ್ಞೆಯನ್ನೂ ಹೈಕೋರ್ಟ್ ತೆರವುಗೊಳಿಸಿದೆ. ಈಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೈಸೂರಿನ ಮೂಡ ಹಗರಣದಲ್ಲಿ ಮಹತ್ವದ ಆದೇಶವನ್ನು ಪ್ರಕಟಿಸಿದೆ. ಆ ಆದೇಶದನ್ವಯ ಮೈಸೂರಿನ ಮೂಡ ಹಗರಣದಲ್ಲಿ ಸಿಎಂ ಕುಟುಂಬಕ್ಕೆ ಸಿಕ್ಕಿದ 56 ಕೋಟಿ ಮೌಲ್ಯದ 14 ನಿವೇಶನಗಳ ವಿಷಯದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಸಿದ್ದರಾಮಯ್ಯನವರ ಬಾವಮೈದ ದೇವರಾಜ್‍ರಿಂದ ಖರೀದಿ ಮಾಡಿದ್ದ 3 ಎಕರೆ ಜಮೀನು, ದೇವರಾಜ್ ಹೆಸರಿನಲ್ಲಿ ಡಿನೋಟಿಫಿಕೇಶನ್ ಕೂಡ ಆಗಿತ್ತು. ಇವೆಲ್ಲವೂ ಕ್ರಮಬದ್ಧವಾಗಿ ಇರಲಿಲ್ಲ ಎಂಬ ಅಂಶವನ್ನು ಕೂಡ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇವತ್ತಿನ ತೀರ್ಪಿನಲ್ಲಿ ಗಮನಿಸಿದೆ. ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಮುಡಾ ಮೈಸೂರಿನಲ್ಲಿ ಇರುವ ಕಾರಣ ಮೈಸೂರಿನ ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ಕುರಿತು 3 ತಿಂಗಳಿನಲ್ಲಿ ತನಿಖೆ ನಡೆಸಲು ಸೂಚಿಸಿದೆ ಎಂದು ವಿವರಿಸಿದರು.

Tags:    

Similar News