ಚಿನ್ನಯ್ಯನಪಾಳ್ಯ ಸಿಲಿಂಡರ್ ಸ್ಫೋಟ: ಗಾಯಾಳು ತಾಯಿ- ಮಗಳು ಸಾವು; ಸಾವಿನ ಸಂಖ್ಯೆ 3ಕ್ಕೆ ಏರಿಕೆ
ದಂಪತಿ ಮೂಲತಃ ತಮಿಳುನಾಡಿನವರಾಗಿದ್ದು, ಕಳೆದ ಐದು ವರ್ಷಗಳಿಂದ ವಿಲ್ಸನ್ ಗಾರ್ಡನ್ ಸಮೀಪದ ಚಿನ್ನಯ್ಯನ ಪಾಳ್ಯದಲ್ಲಿ ನೆಲೆಸಿದ್ದರು.;
ಚಿನ್ನಯ್ಯನಪಾಳ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟ ದುರಂತ
ಸ್ವಾತಂತ್ರೋತ್ಸವ ದಿನ ಬೆಂಗಳೂರಿನ ವಿಲ್ಸನ್ ಗಾರ್ಡನ್ ಸಮೀಪದ ಚಿನ್ನಯ್ಯನಪಾಳ್ಯ ದಲ್ಲಿ ಸಂಭವಿಸಿದ್ದ ಸಿಲಿಂಡರ್ ಸ್ಟೋಟದಲ್ಲಿ ಗಾಯಗೊಂಡಿದ್ದ ತಾಯಿ-ಮಗಳು ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಚಿನ್ನಯ್ಯನಪಾಳ್ಯದ ಕಸ್ತೂರಮ್ಮ (32) ಹಾಗೂ ಅವರ ಪುತ್ರಿ ಖಯಾಲ (8) ಮೃತ ಮರ್ದೈವಿಗಳು. ಮೂರು ದಿನಗಳ ಹಿಂದೆ ಅನಿಲ ಸೋರಿಕೆಯಿಂದ ಕಸ್ತೂರಮ್ಮ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಮುಬಾರಕ್ (14) ಮೃತಪಟ್ಟು, 10ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದರು.
ಶೇ.40 ರಷ್ಟು ಸುಟ್ಟು ಹೋಗಿದ್ದತಾಯಿ-ಮಗಳು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಂಪತಿ ಮೂಲತಃ ತಮಿಳುನಾಡಿನವರಾಗಿದ್ದು, ಕಳೆದ ಐದು ವರ್ಷಗಳಿಂದ ವಿಲ್ಸನ್ ಗಾರ್ಡನ್ ಸಮೀಪದ ಚಿನ್ನಯ್ಯನ ಪಾಳ್ಯದಲ್ಲಿ ನೆಲೆಸಿದ್ದರು. ಈ ದಂಪತಿಗೆ ಎಂಟು ವರ್ಷ ಖಯಾಲ ಒಬ್ಬಳೇ ಮಗಳಿದ್ದಳು. ಅಯ್ಯಪ್ಪ ಗಾರೆ ಕೆಲಸಗಾರ ಮಾಡುತ್ತಿದ್ದ. ಕಸ್ತೂರಮ್ಮ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಘಟನೆ ನಡೆದ ದಿನ ಅಯ್ಯಪ್ಪ, ಕೆಲಸದ ನಿಮಿತ್ತ ತಮಿಳುನಾಡಿಗೆ ತೆರಳಿದ್ದ. ಹೀಗಾಗಿ ಮನೆಯಲ್ಲಿ ತಾಯಿ-ಮಗಳು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಿದೆ. ಅಲ್ಲದೇ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.