ಹೆಣ್ಮಕ್ಕಳ ಮೇಲಿನ ದೌರ್ಜನ್ಯ ಗಂಭೀರವಾಗಿ ಪರಿಗಣಿಸಲು ಇನ್ನೆಷ್ಟು ಬಲಿ ಬೇಕು: ಶೋಭಾ ಕರಂದ್ಲಾಜೆ
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆಯನ್ನು ಗಂಭೀರವಾಗಿ ಪರಿಗಣಿಸಲು ಇನ್ನೆಷ್ಟು ಬಲಿ ಬೇಕು ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.;
ಹೆಣ್ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆಯನ್ನು ಗಂಭೀರವಾಗಿ ಪರಿಗಣಿಸಲು ಇನ್ನೆಷ್ಟು ಬಲಿ ಬೇಕು ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಪ್ರಶ್ನಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದ ಬಳಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಇಂದು ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡಿದರು.
ಬಡ ಕುಟುಂಬದಿಂದ ಬಂದ ಹುಡುಗಿ ಆಕೆ. ಆ ಅಮ್ಮ ಎಷ್ಟೋ ಕಷ್ಟ ಪಟ್ಟು ಆಕೆಯನ್ನು ವೈದ್ಯೆಯನ್ನಾಗಿ ಮಾಡಿ ತಮಗಷ್ಟೇ ಅಲ್ಲದೆ, ಸಮಾಜಕ್ಕೂ ಆಕೆ ಆಧಾರವಾಗುವ ಕನಸು ಕಂಡಿದ್ದರು. ಆಕೆಯ ಹತ್ಯೆ ನಡೆದಿದೆ. ಇವತ್ತು ಹೈಕೋರ್ಟ್ ಮಧ್ಯಪ್ರವೇಶದಿಂದ ಸಿಬಿಐ ತನಿಖೆಗೆ ಆದೇಶವಾಗಿದೆ. ಸ್ಥಳೀಯ ಆಡಳಿತದಿಂದ ರಾಜ್ಯ ಸರಕಾರದಿಂದ ನ್ಯಾಯ ಸಿಗದು ಎಂದು ಹೈಕೋರ್ಟ್‌ಗೂ ಅನಿಸಲು ಆರಂಭವಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲೂ ಹೀಗಾಗುತ್ತಿದೆ. ಚಂದ್ರಶೇಖರ್ ಆತ್ಮಹತ್ಯೆ ಆಗಿದೆ. ಮೊನ್ನೆ ಪರಶುರಾಮ್ ಎಂಬ ಪೊಲೀಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರ್ಗಾವಣೆಗೂ 50 ಲಕ್ಷ, ಒಂದು ಕೋಟಿ ಕೇಳಿದರೆ ನಮ್ಮ ಅಧಿಕಾರಿಗಳು, ಪರಶುರಾಮ್ ಏನು ಮಾಡಲು ಸಾಧ್ಯ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಪೊಲೀಸ್ ಅಧಿಕಾರಿಗಳಿಗೇ ರಕ್ಷಣೆ ಇಲ್ಲದಿರುವಾಗ ಜನರ ರಕ್ಷಣೆ ಎಲ್ಲಿಂದ ಬಂತು ಎಂದರು.
ನಮ್ಮ ಮಹಿಳೆಯರು ಮಧ್ಯರಾತ್ರಿ 12 ಗಂಟೆಗೆ ಸ್ವತಂತ್ರವಾಗಿ ತಿರುಗಾಡಲು ಅವಕಾಶ ಲಭಿಸಿದಾಗ ನಿಜವಾದ ಸ್ವಾತಂತ್ರ್ಯ ತೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಸ್ವಾತಂತ್ರ್ಯ ಬಂದ ನಂತರದ 77 ವರ್ಷಗಳತ್ತ ತಿರುಗಿ ನೋಡಿದರೆ ನೋವಿನ ಕ್ಷಣಗಳನ್ನು ಕಾಣುತ್ತೇವೆ. ನಮ್ಮ ಬಗ್ಗೆ ನಮ್ಮನ್ನೇ ಪ್ರಶ್ನಿಸುವಂತಾಗುತ್ತದೆ ಎಂದರು.
ನಿರ್ಭಯ ಪ್ರಕರಣವು ದೇಶಾದ್ಯಂತ ಹೋರಾಟದ ಕಿಚ್ಚು ಹಚ್ಚಿತ್ತು. ಬಳಿಕ ನಮ್ಮ ಕೇಂದ್ರ ಸರಕಾರವು ನಿರ್ಭಯ ಪ್ರಕರಣವನ್ನು ಆಧಾರವಾಗಿ ಇಟ್ಟುಕೊಂಡು ದೇಶದ ಕಾನೂನನ್ನು ಬದಲಿಸುವ ಪ್ರಯತ್ನ ಮಾಡಿತ್ತು. ಆದರೆ, ಆ ಕಾನೂನು ರಾಜ್ಯದಲ್ಲೂ ಒಪ್ಪಿಗೆ ಪಡೆಯಬೇಕಿತ್ತು. ಆಗ ಸಿದ್ದರಾಮಯ್ಯನವರ ಸರಕಾರ ಕರ್ನಾಟಕದಲ್ಲಿತ್ತು. ಆಗ ನಾನು ಜಾರ್ಜ್ ಅವರಿಗೆ ಪತ್ರ ಬರೆದಿದ್ದೆ. ಆಗ ಜಾರ್ಜ್ ಅವರು ನಮ್ಮ ರಾಜ್ಯದಲ್ಲಿ ಇದರ ಅಗತ್ಯ ಇಲ್ಲ ಎಂದು ಉತ್ತರಿಸಿದ್ದರು ಎಂದು ವಿವರಿಸಿದರು.
ಹಲವಾರು ರಾಜ್ಯಗಳು ಮಹಿಳಾ ರಕ್ಷಣೆಗೆ ಸಂಬಂಧಿಸಿದ ಕಾನೂನು ತಿದ್ದುಪಡಿ ಅಳವಡಿಸಲು ಹಿಂದೇಟು ಹಾಕಿದ್ದವು. ಮೈನರ್ ಹುಡುಗಿ ಮೇಲೆ ಅತ್ಯಾಚಾರ ಮಾಡಿದರೆ ಮರಣದಂಡನೆ ವಿಧಿಸುವ ಕಾಯ್ದೆ ಬಗ್ಗೆ ಕೇಂದ್ರ ಸರಕಾರವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.
ಕಾನೂನು- ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ರಾಜ್ಯ ಸರಕಾರಗಳದು. ಹೈಕೋರ್ಟ್ ಸೂಚಿಸಿದ್ದರಿಂದ ಪಶ್ಚಿಮ ಬಂಗಾಲದಲ್ಲಿ ವೈದ್ಯೆ ಮೇಲಿನ ಅತ್ಯಾಚಾರ- ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳುವಂತಾಗಿದೆ. ಹೈಕೋರ್ಟ್ ಹೇಳದೆ ಇದ್ದರೆ ಈ ವೈದ್ಯೆಯ ಪ್ರಕರಣದಲ್ಲೂ ಸಿಬಿಐ ತನಿಖೆ ನಡೆಯುತ್ತಿರಲಿಲ್ಲ ಎಂದು ತಿಳಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಕು. ಕೆ. ಮಂಜುಳಾ ಅವರು ಮಾತನಾಡಿ, ಮೊಂಬತ್ತಿ ಬೆಳಗುವ ಮೂಲಕ ಮೃತ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಈ ಕಿಚ್ಚು ದೇಶಾದ್ಯಂತ ಇನ್ನಷ್ಟು ಪ್ರಜ್ವಲಿಸಲಿದೆ ಎಂದು ಎಚ್ಚರಿಸಿದರು. ಮಮತಾ ಬ್ಯಾನರ್ಜಿ ರಾಜೀನಾಮೆ ಕೊಟ್ಟು ತೊಲಗಬೇಕೆಂದು ಆಗ್ರಹಿಸಿದರು. ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.