ವಕ್ಫ್ ಬೋರ್ಡ್‌ಗೆ ಹೆಚ್ಚು ಅಧಿಕಾರ, ಒತ್ತುವರಿ ತೆರವು ; ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಭರವಸೆ ಬಹಿರಂಗ
ಕರ್ನಾಟಕದಲ್ಲಿ ವಕ್ಫ್ ಆಸ್ತಿ ನೊಟೀಸ್ ವಿರೋಧಿಸಿ ಪ್ರತಿಭಟನೆಗೆ ಇಳಿದಿರುವ ರಾಜ್ಯ ಬಿಜೆಪಿ ನಾಯಕರಿಗೆ 2014 ರ ಚುನಾವಣಾ ಆಶ್ವಾಸನೆ ಇರಿಸು ಮುರಿಸು ತಂದಿದೆ. ಇದು ವಕ್ಫ್ ವಿವಾದದಲ್ಲಿ ಬಿಜೆಪಿಯ ದ್ವಂದ್ವ ನಿಲುವು ಸೂಚಿಸುತ್ತಿದೆ ಎಂಬ ಆರೋಪಕ್ಕೂ ಕಾರಣವಾಗಿದೆ.
ತನ್ನ ಆಸ್ತಿಗಳ ರಕ್ಷಣೆಗಾಗಿ ವಕ್ಫ್ ಮಂಡಳಿಗೆ ಹೆಚ್ಚಿನ ಅಧಿಕಾರ ಹಾಗೂ ವಕ್ಫ್ ಆಸ್ತಿಗಳ ಒತ್ತುವರಿ ತೆರವು ಕುರಿತು 2014ರ ಲೋಕಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಆಶ್ವಾಸನೆ ನೀಡಿದ್ದ ಸಂಗತಿ ಇದೀಗ ಬಯಲಾಗಿದೆ. ಈ ವಿಷಯವನ್ನು ಕಾಂಗ್ರೆಸ್ ನಾಯಕರು ಇದೀಗ ಬಹಿರಂಗಪಡಿಸಿದ್ದಾರೆ.
ಕರ್ನಾಟಕದಲ್ಲಿ ವಕ್ಫ್ ಆಸ್ತಿ ನೋಟಿಸ್ ವಿರೋಧಿಸಿ ಪ್ರತಿಭಟನೆಗೆ ಇಳಿದಿರುವ ರಾಜ್ಯ ಬಿಜೆಪಿ ನಾಯಕರಿಗೆ 2014 ರ ಚುನಾವಣಾ ಆಶ್ವಾಸನೆ ಇರಸು ಮುರಸು ತಂದಿದೆ. ಇದು ವಕ್ಫ್ ವಿವಾದದಲ್ಲಿ ಬಿಜೆಪಿಯ ದ್ವಂದ್ವ ನಿಲುವು ಸೂಚಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ಆದೇಶದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ರಾಜ್ಯ ರಾಜಕೀಯದಲ್ಲಿ ಇದು ಬಹು ಚರ್ಚಿತ ವಿಚಾರ. ಆದರೆ, ಬಿಜೆಪಿಯೇ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪ್ರತಿ ಹಾಗೂ ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ ವಕ್ಫ್ ಆಸ್ತಿ ರಕ್ಷಣೆ ಕುರಿತು ವಿಡಿಯೊವನ್ನು ಕಾಂಗ್ರೆಸ್ ನಾಯಕರು ಬಹಿರಂಗಪಡಿಸಿ, ನಿಮ್ಮದು ದ್ವಂದ್ವ ನಿಲುವು ಎಂದು ಆರೋಪಿಸುತ್ತಿದ್ದಾರೆ.
ʼಏಕ್ ಭಾರತ್, ಶ್ರೇಷ್ಠ್ʼ ಭಾರತ್ ಹೆಸರಿನಲ್ಲಿ 2014 ರ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ʼಅಲ್ಪಸಂಖ್ಯಾತರಿಗೆ ಸಮಾನ ಅವಕಾಶʼ ಎಂದು ಹೇಳಲಾಗಿತ್ತು. ಅದರಡಿ ಕೆಲ ಭರವಸೆಗಳನ್ನು ನೀಡಲಾಗಿತ್ತು. ಧಾರ್ಮಿಕ ಮುಖಂಡರೊಂದಿಗೆ ಸಮಾಲೋಚಿಸಿ ವಕ್ಫ್ ಬೋರ್ಡ್‌ಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ವಕ್ಫ್ ಆಸ್ತಿಗಳ ಅನಧಿಕೃತ ಒತ್ತುವರಿ ತೆರವಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿತ್ತು.
ಮುಂದುವರಿದು, ಪರಸ್ಪರ ನಂಬಿಕೆ, ವಿಶ್ವಾಸ ಹಾಗೂ ಸಮಾಜದ ಸಾಮರಸ್ಯ ಉತ್ತೇಜಿಸಲು ಅಂತರ್ಧರ್ಮೀಯ ಸಲಹಾ ಕಾಯವಿಧಾನ ಅನುಸರಿಸಲಾಗುವುದು. ಅಲಸಂಖ್ಯಾತ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಸಶಕ್ತೀರಣದ ಜೊತೆಗೆ ಶ್ರೀಮಂತ ಸಂಸ್ಕೃತಿ, ಪರಂಪರೆ ರಕ್ಷಿಸಲಾಗುವುದು. ರಾಷ್ಟ್ರೀಯ ಮದರಸಾಗಳ ಆಧುನೀಕರಣ ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದು ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿತ್ತು. ಆದರೆ, ಈಗ ವಕ್ಫ್ ವಿಚಾರವನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡು, ಸಮುದಾಯ ವಿರುದ್ಧ ಕೆಂಡ ಕಾರುತ್ತಿದೆ ಎಂಬುದು ಕಾಂಗ್ರೆಸ್ ಆರೋಪ.
ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ
ಬಿಜೆಪಿ ರಾಜ್ಯ ನಾಯಕರ ವಕ್ಫ್ ವಿರುದ್ಧದ ಪ್ರತಿಭಟನೆ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿಯವರು ಯಾವಾಗಲೂ ನೈಜ ವಿಷಯಗಳನ್ನು ಬಿಟ್ಟು ಸುಳ್ಳು ಆರೋಪ ಮಾಡುತ್ತಾರೆ, ರಾಜಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ವೇಳೆ, ಒತ್ತುವರಿಯಾಗಿರುವ ಇಂಚಿಂಚು ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಶಪಥ ಮಾಡಿದ್ದರು. ಈಗ ರಾಜಕೀಯ ಕಾರಣಕ್ಕಾಗಿ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯು ರಾಜಕಾರಣಕ್ಕಾಗಿ ವಕ್ಫ್ ವಿಚಾರ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದೆ. ವಕ್ಫ್ ಆಸ್ತಿ ವಿಚಾರ ನಿನ್ನೆ ಮೊನ್ನೆಯದಲ್ಲ. ಬಿಜೆಪಿ ಸರ್ಕಾರದ ಕಾಲದಲ್ಲೂ 216 ನೋಟಿಸ್ ಕೊಡಲಾಗಿದೆ. ಇದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆ ಎಂಬುದು ಜನರಿಗೆ ಅರ್ಥವಾಗಿದೆ. ಈಗಾಗಲೇ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯುವುದಾಗಿ ಹೇಳಿದ್ದರೂ ಪ್ರತಿಭಟನೆ ನಡೆಸುತ್ತಿರುವುದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದರು.
ಈ ಹಿಂದೆ ಬಿಜೆಪಿ ಅವಧಿಯಲ್ಲಿ 216 ಪ್ರಕರಣಗಳಲ್ಲಿ ನೋಟಿಸ್ ಕೊಟ್ಟಿದ್ದರು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಎಚ್.ಡಿ ಕುಮಾಸ್ವಾಮಿ ಅವಧಿಯಲ್ಲೂ ನೋಟಿಸ್ ಕೊಡಲಾಗಿದೆ. ಬಿಜೆಪಿಯ ಈ ಡಬ್ಬಲ್ ಗೇಮ್ ವಿಚಾರವನ್ನು ಜನರಿಗೆ ನಾವು ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.