ನಿಮ್ಮ ಕಾಲದಲ್ಲಿ 17 ಜನ ಸತ್ತಿದ್ದರು, ಈಗ ಪ್ರತಿಭಟನೆ ನಾಟಕ; ಬಿಜೆಪಿ ವಿರುದ್ಧ ರಾಮಲಿಂಗಾರೆಡ್ಡಿ ವಾಗ್ದಾಳಿ

2019ರಲ್ಲಿ ಬಿಜೆಪಿಯ 15 ಕ್ಷೇತ್ರಗಳಿಗೆ ಒಟ್ಟು 6116.73 ಕೋಟಿ ರೂ. ಹಣ ಬಿಡುಗಡೆಯಾಗಿತ್ತು. ಇಷ್ಟು‌ ಹಣ ಪಡೆದು ಸಮರ್ಪಕವಾಗಿ ರಸ್ತೆ ಗುಂಡಿ ಮುಚ್ಚಿದ್ದರೆ, ಇಷ್ಟು‌ಬೇಗ ರಸ್ತೆಗಳು ಏಕೆ ಹಾಳಾದವು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Update: 2025-09-26 14:55 GMT

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

Click the Play button to listen to article

"ಬಿಜೆಪಿ ಅಧಿಕಾರದಲ್ಲಿದ್ದಾಗ ಬೆಂಗಳೂರಿನ ರಸ್ತೆ ಗುಂಡಿಗಳಿಂದಾಗಿ 17 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈಗ ಅದೇ ಗುಂಡಿಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದು ನಾಚಿಕೆಗೇಡು," ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿರೋಧ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಸ್ತೆ ಗುಂಡಿಗಳ ವಿಚಾರದಲ್ಲಿ ಬಿಜೆಪಿ ನಾಯಕರ ಪ್ರತಿಭಟನೆಯನ್ನು ಕಟುವಾಗಿ ಟೀಕಿಸಿದರು.

6,116 ಕೋಟಿ ರೂ. ಎಲ್ಲಿ ಹೋಯಿತು?

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದ ಬಗ್ಗೆ ಪ್ರಶ್ನಿಸಿದ ರಾಮಲಿಂಗಾರೆಡ್ಡಿ, "2019ರ 'ನವ ನಗರೋತ್ಥಾನ' ಯೋಜನೆಯಡಿ ಬಿಜೆಪಿಯ 15 ಕ್ಷೇತ್ರಗಳಿಗೆ ಒಟ್ಟು 6,116 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿತ್ತು. ಇಷ್ಟು ಹಣ ಪಡೆದು ಗುಣಮಟ್ಟದ ರಸ್ತೆ ಮಾಡಿದ್ದರೆ, ಅವು ಇಷ್ಟು ಬೇಗ ಹಾಳಾಗಲು ಹೇಗೆ ಸಾಧ್ಯ? ಇದಕ್ಕೆ ಬಿ.ವೈ. ವಿಜಯೇಂದ್ರ ಮತ್ತು ಬೆಂಗಳೂರು ನಗರದ ಬಿಜೆಪಿ ಶಾಸಕರು ಉತ್ತರ ನೀಡಬೇಕು," ಎಂದು ಸವಾಲು ಹಾಕಿದರು.

ಗುಂಡಿಗೆ ಮಣ್ಣು ಹಾಕ್ತಾರಾ?

"ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಡಿಸಿಎಂ ಮನೆ ಮುಂದೆ ಗುಂಡಿ ಮುಚ್ಚಿ ಪ್ರತಿಭಟಿಸಿದ್ದಾರೆ. ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಗುಂಡಿಗಳಿಗೆ ಮಣ್ಣು ಹಾಕಿದ್ದಾರೆ. ಗುಂಡಿಗಳಿಗೆ ಯಾರಾದರೂ ಮಣ್ಣು ಹಾಕುತ್ತಾರೆಯೇ? ಕನಿಷ್ಠ ಜಲ್ಲಿಯನ್ನಾದರೂ ಹಾಕಬೇಕಲ್ಲವೇ?" ಎಂದು ಸಚಿವರು ವ್ಯಂಗ್ಯವಾಡಿದರು.

ಹೈಕೋರ್ಟ್ ಮತ್ತು ಗುತ್ತಿಗೆದಾರರ ಹೊಣೆ

"ಬಿಜೆಪಿ ಸರ್ಕಾರ ಇದ್ದಾಗ, ಹೈಕೋರ್ಟ್ ಪ್ರತಿದಿನ ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ಕೇಳುತ್ತಿತ್ತು. ರಸ್ತೆ ನಿರ್ಮಾಣದ ನಂತರ ಮೂರು ವರ್ಷಗಳ ಕಾಲ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕು ಎಂಬ ನಿಯಮವಿದೆ. ಹಾಗಿದ್ದರೆ, ಈಗಿನ ದುಸ್ಥಿತಿಗೆ ಯಾರು ಹೊಣೆ?" ಎಂದು ಅವರು ಪ್ರಶ್ನಿಸಿದರು.

"ಅರ್ಚಕರಿಗೆ ವಿಮೆ, ಅವರ ಮಕ್ಕಳಿಗೆ ಶಿಕ್ಷಣ ಮತ್ತು 'ಸಿ' ಗ್ರೇಡ್ ದೇಗುಲಗಳ ಅಭಿವೃದ್ಧಿಗೆ ಹಣ ನೀಡುವ ಮಸೂದೆಗೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸಿದ್ದರು," ಎಂದು ಸಚಿವರು ಆರೋಪಿಸಿದರು. "ಶಕ್ತಿ ಯೋಜನೆಯಡಿ ಸರ್ಕಾರವು ಸಾರಿಗೆ ನಿಗಮಗಳಿಗೆ ಇನ್ನೂ 3,000 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. 2,000 ಹೊಸ ಬಸ್ ಖರೀದಿಗೆ 800 ಕೋಟಿ ರೂಪಾಯಿ ನೀಡಿದೆ," ಎಂದು ಅವರು ಮಾಹಿತಿ ನೀಡಿದರು. 

Tags:    

Similar News