ರಾಜ್ಯದಲ್ಲಿ ಮುಂಗಾರು ಅಬ್ಬರ | ಆರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌, ಹಲವೆಡೆ ಪ್ರವಾಹ, ಭೂ ಕುಸಿತ

ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಘಟನೆಗಳು ಸಂಭವಿಸಿವೆ. ಅಲ್ಲದೇ ಭಾರೀ ಮಳೆ ಹಿನ್ನಲೆಯಲ್ಲಿ ಶಿವಮೊಗ್ಗ, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Update: 2024-07-18 07:50 GMT
ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ.
Click the Play button to listen to article

ರಾಜ್ಯದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಆ ಹಿನ್ನೆಲೆಯಲ್ಲಿ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕೆಲವು ಕಡೆ ಭೂಕುಸಿತ ಮುಂದುವರಿದೆ. ಭಾರೀ ಮಳೆ ಹಿನ್ನಲೆಯಲ್ಲಿ ಶಿವಮೊಗ್ಗ, ಮಡಿಕೇರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಗುರುವಾರವೂ ರಜೆ ಘೋಷಿಸಲಾಗಿದೆ.

ಯೆಲ್ಲೋ ಅಲರ್ಟ್‌ ಘೋಷಣೆ

ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರೆಡ್‌ ಆಲರ್ಟ್‌ ಘೋಷಣೆ ಮಾಡಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಕರ್ನಾಟಕದ ಕರಾವಳಿಯಲ್ಲಿ ಜುಲೈ 24ರವರೆಗೂ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನದಿಗಳ ನೀರಿನ  ಮಟ್ಟ ಹೆಚ್ಚಳ 

ನೈಋತ್ಯ ಮಾರುತಗಳ ತೀವ್ರತೆಯಿಂದಾಗಿ ಪಶ್ಚಿಮ ಕರಾವಳಿಯಲ್ಲಿ ಅತಿ ಭಾರಿ ಮತ್ತು ಅತ್ಯಧಿಕ ಮಳೆಯಾಗುತ್ತಿದ್ದು, ಕಬಿನಿ, ಹಾರಂಗಿ, ಶಾಂಭವಿ, ಸ್ವರ್ಣ, ಹಾಲಾಡಿ, ಅಘನಾಶಿನಿ, ನೇತ್ರಾವತಿ, ಸೀತಾ, ವರದಾ, ಕುಮಧ್ವತಿ, ತುಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಲಿಂಗನಮಕ್ಕಿ. ತುಂಗಭದ್ರಾ, ಭದ್ರಾ, ಹಾರಂಗಿ, ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ, ಆಲಮಟ್ಟಿ, ಕೃಷ್ಣರಾಜಸಾಗರ, ನಾರಾಯಣಪುರ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನದಿ ಜಲಾನಯನ ಪ್ರದೇಶಗಳ ಜನರಿಗೆ ಪ್ರವಾಹ ಎಚ್ಚರಿಕೆ ನೀಡಿದೆ.

Full View

ಶಿವಮೊಗ್ಗ ನಗರದಲ್ಲಿ ಪ್ರವಾಹ ಭೀತಿ

ಶಿವಮೊಗ್ಗ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಇಲ್ಲಿನ ಗಾಜನೂರಿನ ತುಂಗಾ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ 71,864 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಜಲಾಶಯದ 3.24 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಈಗಾಗಲೇ ಭರ್ತಿಯಾಗಿದೆ. ಹೀಗಾಗಿ ಜಲಾಶಯದ 22 ಕ್ರಸ್ಟ್‌ ಗೇಟ್‌ಗಳನ್ನು ತೆರೆದು ತುಂಗಾ ನದಿಗೆ 73,391 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.

ಜಲಾಶಯದಿಂದ 80 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಿದರೆ ತುಂಗಾ ನದಿಯ ಪ್ರವಾಹದ ಸ್ಥಿತಿ ತಲೆದೋರಲಿದೆ. ಶಿವಮೊಗ್ಗ ನಗರದ ಇಮಾಮ್ ಬಾಡ, ಬಾಪೂಜಿ ನಗರ ಸೇರಿದಂತೆ ನದಿ ದಂಡೆಯ ಜನವಸತಿ ಪ್ರದೇಶಕ್ಕೆ ನೀರು ನುಗ್ಗಲಿದೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಹಾನಗರ ಪಾಲಿಕೆಯಿಂದ ಶಿವಮೊಗ್ಗದ ಮೂರು ಕಡೆ ಕಾಳಜಿ ಕೇಂದ್ರ ತೆರೆದಿದೆ. ಅಲ್ಲದೆ, ನದಿ ಪ್ರವಾಹ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಡಂಗುರ ಹೊಡೆಸಿ ಮುಂಜಾಗ್ರತೆ ವಹಿಸುವಂತೆ ಕೋರಲಾಗಿದೆ.

ನೇತ್ರಾವತಿ ನದಿ ಹರಿವು ಏರಿಕೆ

ನೇತ್ರಾವತಿಯಲ್ಲಿ ನೀರಿ‌ನ ಮಟ್ಟ ಏರಿಕೆಯಾಗಿದೆ. ಸದ್ಯ ನದಿ ನೀರಿನ ಮಟ್ಟ 7.8 ಮೀಟರ್​​​ಗೆ ಏರಿಕೆ ಕಂಡಿದೆ. 8.5 ಮೀಟರ್ ಅಪಾಯದ ಮಟ್ಟವಾಗಿದೆ. ನದಿ ನೀರು ಏರಿಕೆಯಿಂದ ಬಂಟ್ವಾಳದ ಪಾಣೆಮಂಗಳೂರಿನ ಆಲಡ್ಕ ಎಂಬಲ್ಲಿ ಮೈದಾನಕ್ಕೆ ನೀರು ನುಗ್ಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಲಡ್ಕದ ಸುಮಾರು 10 ಜನರ ಸ್ಥಳಾಂತರ ಮಾಡಲಾಗಿದೆ. ನದಿ ತೀರದಲ್ಲಿರುವ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಹೆದ್ದಾರಿಯಲ್ಲಿ ಕುಸಿದ ಮಣ್ಣು: ಸಂಚಾರ ಸ್ಥಗಿತ

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ಬುಧವಾರ ಮಧ್ಯಾಹ್ನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುತ್ತಿರುವಾಗಲೇ ಸುಮಾರು 100 ಅಡಿ ಎತ್ತರದಿಂದ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತು ಸಂಚಾರ ಅಸ್ತವ್ಯಸ್ತಗೊಂಡಿದ್ದು, 2 ಗಂಟೆಗೂ ಹೆಚ್ಚು ಕಾಲ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸದ್ಯ  ಮಣ್ಣು ತೆರವು ಗೊಳಿಸಿದ್ದು, ವಾಹನಗಳ ಸಂಚಾರ ಆರಂಭಿಸಲಾಗಿದೆ.

ಶಿರಾಡಿಘಾಟ್​​ನಲ್ಲಿ ಗುಡ್ಡ ಕುಸಿತ 

ಹಾಸನ ಹಾಸನ‌ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಶಿರಾಡಿಘಾಟ್​​ನಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಇಂದು ಮುಂಜಾನೆ ದೊಡ್ಡತಪ್ಲು ಬಳಿ ಗುಡ್ಡ ಕುಸಿತ ಸಂಭವಿಸಿದೆ. ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಡರಾತ್ರಿ ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಗುಡ್ಡ ಕುಸಿದಿದ್ದು, ಭಾರೀ ಪ್ರಮಾಣದ ಮಣ್ಣು ಬಿದ್ದಿದೆ. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.  ಗುಡ್ಡ ಕುಸಿತದಿಂದ ಸುಮಾರು 10 ಕಿಮೀ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ಟ್ರಕ್, ಲಾರಿ ಟ್ಯಾಕರ್ ಓಡಾಟಕ್ಕೆ ತಾತ್ಕಾಲಿಕ ತಡೆ ಹೇರಲಾಗಿದೆ. ಚಾರ್ಮಾಡಿ ಘಾಟ್ ರಸ್ತೆಯಲ್ಲೂ ಪ್ರಯಾಣ ದುಸ್ತರವಾಗಿದ್ದು, ಹಾಸನ ಬಳಿಯೇ ವಾಹನ ನಿಲ್ಲಿಸಲು ಪೊಲೀಸರು ಸೂಚನೆ ನೀಡುತ್ತಿದ್ದಾರೆ.

ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ 

ಉಕ್ಕಿ ಹರಿಯುತ್ತಿದೆ ನದಿಗಳು 

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿರುವೆ. ಕಾವೇರಿ, ಲಕ್ಷ್ಮಣತೀರ್ಥ ಮತ್ತು ಪಯಸ್ವಿನಿ ನದಿಗಳು ಉಕ್ಕಿ ಹರಿಯುತ್ತಿವೆ. ಮಡಿಕೇರಿ ತಾಲೂಕಿನ ಬೇಂಗೂರು, ದೋಣಿಕಡವು, ಹೊದವಾಡ ಸೇರಿ ಬೊಳಿಬಾಣೆಯಲ್ಲಿ ಕಾವೇರಿ ನದಿ, ಲಕ್ಷ್ಮಣ ತೀರ್ಥನದಿಯಿಂದ ಪ್ರವಾಹ ಉಂಟಾಗಿದೆ. ಇದರಿಂದ ನಾಪೋಕ್ಲು, ಮೂರ್ನಾಡು, ಚೆರಿಯಪರಂಬು ಗ್ರಾಮದ ಸಂಪರ್ಕ ಕಡಿತಗೊಂಡಿದೆ.

ಇನ್ನೂ ಐದು ದಿನ ಭಾರೀ ಮಳೆ 

ಇನ್ನು ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿಯಲ್ಲಿ ಈ ಮಳೆ ಇನ್ನೂ ಐದು ದಿನ ಮುಂದುವರಿಯಲಿದೆ. ಹಲವು ಜಿಲ್ಲೆಗಳಿಗೆ ಭರ್ಜರಿ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Tags:    

Similar News