ಮಂಕಿಪಾಕ್ಸ್ ಭೀತಿ | ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಕ್ರಮಕ್ಕೆ ಆದೇಶ

Update: 2024-08-28 06:11 GMT

ನೆರೆಯ ಪಾಕಿಸ್ತಾನ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕ ಆರೋಗ್ಯ ಇಲಾಖೆ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರದ ಕ್ರಮಕ್ಕೆ ಆದೇಶ ಹೊರಡಿಸಿದೆ. ಕೇಂದ್ರ ಆರೋಗ್ಯ ಇಲಾಖೆಯ ಸೂಚನೆ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆಗೆ ಸೂಚನೆ ನೀಡಿದೆ. ಮಂಕಿಪಾಕ್ಸ್ ಶಂಕಿತರನ್ನು ಗುರುತಿಸಿ ಸ್ಕ್ರೀನಿಂಗ್ ಮಾಡುವಂತೆ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡುವಂತೆ ಹೇಳಿದೆ.

ಮಂಕಿಪಾಕ್ಸ್ ಶಂಕಿತರ ಚಿಕಿತ್ಸೆಗೆಂದು ಬೆಂಗಳೂರಿನ ಇಂದಿರಾನಗರದ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಗುರುತಿಸಲಾಗಿದೆ. ಮಂಕಿಪಾಕ್ಸ್ ಕಂಡು ಬಂದರೆ ಶಂಕಿತ ಮಾದರಿಗಳನ್ನು ಬಿಎಮ್ ಸಿ ಲ್ಯಾಬ್‌ಗೆ ಕಳಿಸಬೇಕು ಮತ್ತು ಅವರನ್ನು 21 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ.

ಹೈ-ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಕಟ್ಟೆಚ್ಚರದ ಕ್ರಮ ಜರುಗಿಸುವಂತೆ ಮತ್ತು ಮಂಕಿಪಾಕ್ಸ್ ಕಂಡುಬಂದ ದೇಶಗಳ ಪ್ರಯಾಣಿಕರ ಮೇಲೆ ಹದ್ದಿನಕಣ್ಣಿಡಲು ಸೂಚನೆ ಕೊಟ್ಟಿದೆ.

ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಅನ್ನು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಿಸಿದ ನಂತರ ಹಾಗೂ ಸ್ವೀಡನ್ ಮತ್ತು ಪಾಕಿಸ್ತಾನದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ನಂತರ, ಶಂಕಿತ ಪ್ರಕರಣಗಳನ್ನು ನಿಭಾಯಿಸಲು ಸಿದ್ಧರಾಗುವಂತೆ ಕೇಂದ್ರವು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಭಾರತದಲ್ಲಿ ಪ್ರಸ್ತುತ ಯಾವುದೇ ಸಕ್ರಿಯ ಪ್ರಕರಣಗಳಿಲ್ಲ.

ಮಂಕಿಪಾಕ್ಸ್ ರೋಗಲಕ್ಷಣಗಳು:

ಮೊದಲ ಐದು ದಿನ ತೀವ್ರ ಜ್ವರ, ಶೀತ ಮತ್ತು ಬೆವರು, ತಲೆನೋವು, ಸ್ನಾಯು ನೋವು, ಗಂಟಲು ನೋವು, ಕೆಮ್ಮು ಕಾಣಿಸಿಕೊಳ್ಳುತ್ತದೆ.

ಜ್ವರ ಪ್ರಾರಂಭವಾದ ಮೂರು ದಿನಗಳ ನಂತರ ಮೈಮೇಲೆ ಚಿಕ್ಕಚಿಕ್ಕ ಗುಳ್ಳೆಗಳು ಕಂಡುಬರುತ್ತದೆ. ಸಾಮಾನ್ಯವಾಗಿ ಮುಖ, ಅಂಗೈ ಮೇಲೆ ಗುಳ್ಳೆಗಳಾಗಿ ನೋವು ಕಾಣಿಸಿಕೊಳ್ಳುತ್ತದೆ.

Tags:    

Similar News