ಬೆಂಗಳೂರು-ಬೆಳಗಾವಿ ರೈಲಿಗೆ ಮೋದಿ ಚಾಲನೆ | ರಾಜ್ಯದಿಂದ ಸಂಚರಿಸುತ್ತಿವೆ ಒಟ್ಟು 11 ವಂದೇ ಭಾರತ್ ರೈಲುಗಳು
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಹಾಗೂ ರಾಜ್ಯದಿಂದ ನೆರೆ ರಾಜ್ಯಗಳನ್ನು ಸಂಪರ್ಕಿಸುವ ಒಟ್ಟು 11 ವಂದೇ ಭಾರತ್ ರೈಲುಗಳು ಸಂಚಾರ ಆರಂಭಿಸಿವೆ.;
ಬೆಂಗಳೂರಿನಿಂದ ಧಾರವಾಡದವರೆಗೆ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಿದ್ದು, ರೈಲು ಕಾರ್ಯಾಚರಣೆಗೆ ಪ್ರಧಾನಿ ಮೋದಿ ಅವರು ಭಾನುವಾರ ಹಸಿರು ನಿಶಾನೆ ತೋರಿದರು. ಇದರೊಂದಿಗೆ ರಾಜ್ಯದಲ್ಲಿ ಸಂಚರಿಸುವ ಒಟ್ಟು ವಂದೇ ಭಾರತ್ ರೈಲುಗಳ ಸಂಖ್ಯೆ 11 ಕ್ಕೆ ಏರಿದೆ.
ಮೈಸೂರು–ಚೆನ್ನೈ ನಡುವೆ 2022ರ ನವೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ರೈಲಿಗೆ ಹಸಿರು ನಿಶಾನೆ ತೋರಿದ್ದರು. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಹಾಗೂ ರಾಜ್ಯದಿಂದ ನೆರೆ ರಾಜ್ಯಗಳನ್ನು ಸಂಪರ್ಕಿಸುವ ಹಲವು ವಂದೇ ಭಾರತ್ ರೈಲುಗಳು ಸಂಚಾರ ಆರಂಭವಾಗಿವೆ.
ರಾಜ್ಯದಿಂದ ಸಂಚರಿಸುವ ವಂದೇ ಭಾರತ್ ರೈಲು ಎಷ್ಟು?
ಕರ್ನಾಟಕದ ಒಳಗೆ ಹಾಗೂ ನೆರೆ ರಾಜ್ಯಗಳನ್ನು ಸಂಪರ್ಕಿಸುವ ಒಟ್ಟು 10 ವಂದೇ ಭಾರತ್ ರೈಲುಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಈಗ ಹೊಸದಾಗಿ ವಿಸ್ತರಣೆಗೊಂಡಿರುವ ರೈಲು ಸೇರಿದರೆ 11ನೇ ರೈಲು ಆಗಲಿದೆ. ಮೈಸೂರು–ಚೆನ್ನೈ, ಕಲಬುರಗಿ–ಎಸ್‌ಎಂವಿಟಿ ಬೆಂಗಳೂರು, ಕೆಎಸ್‌ಆರ್ ಬೆಂಗಳೂರು–ಧಾರವಾಡ, ಮಂಗಳೂರು–ತಿರುವನಂತಪುರಂ, ಬೆಂಗಳೂರು–ಕೊಯಮತ್ತೂರು, ಮಂಗಳೂರು–ಮಡಗಾಂವ್, ಯಶವಂತಪುರ–ಕಾಚೆಗುಡ (ಹೈದರಾಬಾದ್), ಬೆಂಗಳೂರು–ಮಧುರೈ, ಹುಬ್ಬಳ್ಳಿ–ಪುಣೆ, ಬೆಳಗಾವಿ–ಬೆಂಗಳೂರು (ಹೊಸ ಸೇರ್ಪಡೆ).
ಸೇರ್ಪಡೆಯಾಗಲಿರುವ ಮಾರ್ಗಗಳು ಯಾವುವು?
ಇದಲ್ಲದೇ ನೈರುತ್ಯ ರೈಲ್ವೆಯ ಹಲವು ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು–ಮಂಗಳೂರು, ಬೆಂಗಳೂರು–ತಿರುವನಂತಪುರಂ, ಬೆಳಗಾವಿ–ಪುಣೆ, ಶಿವಮೊಗ್ಗ–ತಿರುಪತಿ, ಶಿವಮೊಗ್ಗ–ಬೆಂಗಳೂರು ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭವಾಗಲಿದೆ.
ಬೇಡಿಕೆ ಸಲ್ಲಿಸಿರುವ ಮಾರ್ಗಗಳು
ಮೈಸೂರು–ತಿರುಪತಿ, ಮೈಸೂರು–ಹೈದರಾಬಾದ್, ಹುಬ್ಬಳ್ಳಿ–ತಿರುಪತಿ, ಬೆಂಗಳೂರು–ವಿಜಯಪುರ ಮತ್ತು ಬೆಂಗಳೂರು–ಮಂತ್ರಾಲಯ ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಆರಂಭಿಸಲು ಒತ್ತಡ ಬಂದಿದ್ದು, ಬೇಡಿಕೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ವಂದೇ ಭಾರತ್ ರೈಲುಗಳ ಅಂಕಿಅಂಶ
2019ರಲ್ಲಿ ದೆಹಲಿ–ವಾರಾಣಾಸಿ ಮಾರ್ಗದಲ್ಲಿ ಮೊದಲ ವಂದೇ ಭಾರತ್ ರೈಲು ಸಂಚಾರ ಆರಂಭಿಸಿತು. ಅಂದಿನಿಂದ ಆಗಸ್ಟ್ 2025 ರವರೆಗೆ ಒಟ್ಟು ವಂದೇ ಭಾರತ್ ರೈಲುಗಳ ಸಂಖ್ಯೆ 70ಕ್ಕೆ ಏರಿದೆ. ಭಾನುವಾರ ಪ್ರಧಾನಿ ಮೋದಿ ಮೂರು ಹೊಸ ಮಾರ್ಗಗಳಿಗೆ ಚಾಲನೆ ನೀಡಿದ ನಂತರ ಅವುಗಳ ಸಂಖ್ಯೆ 73 ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಿಂದ ಬೆಳಗಾವಿಗೆ ಟಿಕೆಟ್ ದರ ಎಷ್ಟಿದೆ?
ಬೆಂಗಳೂರಿನಿಂದ ಬೆಳಗಾವಿಗೆ ಸಂಚರಿಸುವ ವಂದೇ ಭಾರತ್ ರೈಲಿನ ಟಿಕೆಟ್ ದರ ಈ ಕೆಳಕಂಡಂತಿದೆ.
ಬೆಂಗಳೂರು- ಬೆಳಗಾವಿ :1,264 ರೂ.
ಬೆಂಗಳೂರು-ಧಾರವಾಡ:1,049 ರೂ.
ಬೆಂಗಳೂರು-ಹುಬ್ಬಳ್ಳಿ: 1,090 ರೂ.
ಬೆಂಗಳೂರು-ಹಾವೇರಿ: 907 ರೂ.
ಬೆಂಗಳೂರು-ದಾವಣಗೆರೆ: 800 ರೂ
ಬೆಂಗಳೂರು-ತುಮಕೂರು: 403 ರೂ.
ಬೆಂಗಳೂರು -ಯಶವಂತಪುರ: 344 ರೂ. ಇದೆ.