ಕಲಬುರಗಿ ಕಾರಾಗೃಹದ ಕೈದಿಯ ಬಳಿ ಮೊಬೈಲ್; ವಿಡಿಯೋ ವೈರಲ್
ಜೈಲಿನಲ್ಲಿ ಮೊಬೈಲ್ ಪತ್ತೆ, ಜೈಲಿನಲ್ಲಿದ್ದುಕೊಂಡೇ ವಿಡಿಯೊ ಕಾಲ್ ಮಾಡಿ ಹನಿಟ್ರ್ಯಾಪ್ ಮಾಡಿಸಿದ ಆರೋಪ, ಮದ್ಯ, ಸಿಗರೇಟ್ ಸೇವನೆ, ಜೈಲಾಧಿಕಾರಿಗಳಿಗೆ ಲಂಚದ ಆರೋಪಗಳ ಬೆನ್ನಲ್ಲೇ ವಿಡಿಯೋ ಹರಿದಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.;
ಜೈಲುಗಳಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತು ಒದಗಿಸುತ್ತಿರುವ ಕುರಿತು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಕಲಬುರಗಿ ಕಾರಾಗೃಹದ ಕೈದಿಯೊಬ್ಬರು ಗೌಪ್ಯವಾಗಿ ಮೊಬೈಲ್ ಬಳಸಿರುವುದು ಕಂಡು ಬಂದಿದೆ.
ಕಾರಾಗೃಹದಲ್ಲಿ ಕೈದಿಗಳ ಪರೇಡ್ ವೇಳೆ ಕೈದಿಯೊಬ್ಬ ಮೊಬೈಲ್ ತೆಗೆದು ಜೇಬಿನಲ್ಲಿರಿಸಿದ ವಿಡಿಯೊ ವೈರಲ್ ಆಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ಗೆ ರಾಜಾತೀಥ್ಯ ನೀಡಿದ ಪ್ರಕರಣ ಬೆಳಕಿಗೆ ಬಂದ ಮೇಲೆ ಜೈಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ದರ್ಶನ್ ಸೇರಿ ಹಲವು ಕುಖ್ಯಾತ ಕೈದಿಗಳನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿದ್ದರು. ಜೈಲಿನಲ್ಲಿ ಹಣ ನೀಡದರೆ ಏನು ಬೇಕಾದರೂ ಸಿಗುತ್ತದೆ ಎಂಬ ಮಾತುಗಳಿಗೆ ಪುಷ್ಠಿ ನೀಡುವಂತಿತ್ತು.
ಕಲಬುರಗಿ ಕಾರಾಗೃಹದಲ್ಲಿ ಸುಮಾರು 15 ಕೈದಿಗಳನ್ನು ಸಾಲಾಗಿ ನಿಲ್ಲಿಸಿದ್ದರು. ಸಾಲಿನ ಮಧ್ಯದಲ್ಲಿನ ಕೈದಿಯೊಬ್ಬರು ಹಿಂದಕ್ಕೆ ತಿರುಗು ನೋಡಿ, ತನ್ನ ಪ್ಯಾಂಟಿನ ಬಲಗಡೆಯ ಜೇಬಿನಿಂದ ಮೊಬೈಲ್ ಹೊರ ತೆಗೆದು, ಪಕ್ಕದಲ್ಲಿ ನಿಂತಿದ್ದ ಸಹ ಕೈದಿಯ ಹಿಂದೆ ಹಿಡಿದುಕೊಂಡು ಮತ್ತೆ ಜೈಬಿನಲ್ಲಿ ಇರಿಸಿಕೊಂಡ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.
ಕಲಬುರಗಿ ಜೈಲು ಮುಖ್ಯ ಅಧೀಕ್ಷಕಿ ಅನಿತಾ ಈ ಕುರಿತು ಪ್ರತಿಕ್ರಿಯಿಸಿ, ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ಸಂಬಂಧ ಈಗಾಗಲೇ ಸಾಕಷ್ಟು ದೂರು ನೀಡಿದ್ದೇನೆ. ಇಂತಹ ವಿಡಿಯೊಗಳನ್ನು ಯಾರು ಹರಿಬಿಡುತ್ತಿದ್ದಾರೆ, ನನ್ನನ್ನೇ ಯಾಕೆ ಗುರಿಯಾಗಿಸಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನನಗೆ ಬೆದರಿಕೆ ಹಾಕಿದವರೇ ಇಂತಹ ಕೃತ್ಯ ಮಾಡಿಸುತ್ತಿರಬಹುದು, ವಿಡಿಯೊ ನೋಡಿ ಮುಂದಿನ ಕ್ರಮ ಜರುಗಿಸುತ್ತೇನೆ ಎಂದು ಹೇಳಿದ್ದಾರೆ.
ಜೈಲಿನಲ್ಲಿ ಮೊಬೈಲ್ ಪತ್ತೆ, ಜೈಲಿನಲ್ಲಿದ್ದುಕೊಂಡೇ ವಿಡಿಯೊ ಕಾಲ್ ಮಾಡಿ ಹನಿಟ್ರ್ಯಾಪ್ ಮಾಡಿಸಿದ ಆರೋಪ, ಮದ್ಯ, ಸಿಗರೇಟ್ ಸೇವನೆ, ಜೈಲಾಧಿಕಾರಿಗಳಿಗೆ ಲಂಚದ ಆರೋಪಗಳ ಬೆನ್ನಲ್ಲೇ ವಿಡಿಯೋ ಹರಿದಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗಷ್ಟೇ ಜೈಲು ಮುಖ್ಯ ಅಧೀಕ್ಷಕಿ ಅನಿರಾ ಅವರಿಗೆ ದುಷ್ಕರ್ಮಿಗಳು ಕಾರು ಸ್ಪೋಟಿಸುವ ಬೆದರಿಕೆ ಹಾಕಿದ್ದರು.