ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಿಷೇಧಿಸಿ: ಸಿಎಂಗೆ ಯತ್ನಾಳ್ ಪತ್ರ
ಶುಕ್ರವಾರ (ಅ. 17) ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ, ರಾಜ್ಯದಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಯತ್ನಾಳ್ ಒತ್ತಾಯಿಸಿದ್ದಾರೆ.
ರಸ್ತೆ, ಫುಟ್‌ಪಾತ್ ಹಾಗೂ ಸರ್ಕಾರಿ ಕಚೇರಿಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿಯಿಲ್ಲದೆ ನಮಾಜ್ ಮಾಡುವುದನ್ನು ತಕ್ಷಣವೇ ನಿಷೇಧಿಸಬೇಕು ಎಂದು ಆಗ್ರಹಿಸಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಸೇರಿದಂತೆ ಇತರೆ ಖಾಸಗಿ ಸಂಘಟನೆಗಳ ಚಟುವಟಿಕೆಗಳಿಗೆ ನಿಯಂತ್ರಣ ಹೇರುವ ಕಾನೂನು ಜಾರಿಗೆ ಗುರುವಾರ (ಅಕ್ಟೋಬರ್ 16) ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಈ ನಿರ್ಧಾರ ಪ್ರಕಟವಾದ ಮರುದಿನವೇ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ಯತ್ನಾಳ್ ಅವರ ಈ ನಡೆ, ವಿಷಯವನ್ನು ಧಾರ್ಮಿಕ ಸೂಕ್ಷ್ಮತೆಯತ್ತ ಕೊಂಡೊಯ್ದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶುಕ್ರವಾರ (ಅ. 17) ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ, ರಾಜ್ಯದಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಯತ್ನಾಳ್ ಒತ್ತಾಯಿಸಿದ್ದಾರೆ. ಯಾವುದೇ ಧಾರ್ಮಿಕ ಚಟುವಟಿಕೆಗೆ ಸಾರ್ವಜನಿಕ ಸ್ಥಳಗಳನ್ನು ಬಳಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಹೇಳಿದ್ದಾರೆ.
ಪತ್ರದಲ್ಲಿ ಯತ್ನಾಳ್ ಪ್ರಸ್ತಾಪಿಸಿದ ಪ್ರಮುಖಾಂಶಗಳು
ತಮ್ಮ ಪತ್ರದಲ್ಲಿ ಯತ್ನಾಳ್, ಸರ್ಕಾರಿ ಆಸ್ತಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಖಾಸಗಿ ಅಥವಾ ಸಾಂಸ್ಥಿಕ ಉದ್ದೇಶಗಳಿಗೆ ಬಳಸದಂತೆ ಸರ್ಕಾರ ಇತ್ತೀಚೆಗೆ ನಿರ್ಬಂಧ ಹೇರಿದೆ. ಇದೇ ತಟಸ್ಥ ಮತ್ತು ನ್ಯಾಯಸಮ್ಮತ ತತ್ವವನ್ನು ಸಮಾಜದ ಎಲ್ಲಾ ವರ್ಗಗಳಿಗೂ ಏಕರೂಪವಾಗಿ ಜಾರಿಗೊಳಿಸಬೇಕು ಎಂದು ಉಲ್ಲೇಖಿಸಿದ್ದಾರೆ.
"ಅನುಮತಿಯಿಲ್ಲದೆ ಸಾರ್ವಜನಿಕ ರಸ್ತೆ ಮತ್ತು ಸರ್ಕಾರಿ ಆವರಣಗಳಲ್ಲಿ ನಮಾಜ್ ಮಾಡುವುದರಿಂದ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ಇದು ಸಾರ್ವಜನಿಕರಿಗೆ ಅನನುಕೂಲತೆ ಉಂಟುಮಾಡುವುದಲ್ಲದೆ, ಸಂವಿಧಾನದ 19 ಮತ್ತು 21ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ಮುಕ್ತ ಸಂಚಾರ ಮತ್ತು ಸುರಕ್ಷತೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ," ಎಂದು ಅವರು ಪ್ರತಿಪಾದಿಸಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಅಥವಾ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ನಮಾಜ್ ಮಾಡಲು ಯಾವುದೇ ವಿಶೇಷ ಅವಕಾಶ ಇರಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೆಲವು ಚಟುವಟಿಕೆಗಳಿಗೆ ನಿರ್ಬಂಧ ಹೇರಿ, ಇಂತಹ ಆಚರಣೆಗಳಿಗೆ ಅನುಮತಿ ನೀಡುವುದು "ತಾರತಮ್ಯದ ಜಾರಿ" ವ್ಯವಸ್ಥೆಯಾಗಿದ್ದು, ಇದು ಆಡಳಿತದ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತದೆ ಎಂದು ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಸಂಚಾರ ನಿಯಮಗಳ ಅಡಿಯಲ್ಲಿ ಸ್ಪಷ್ಟ ಕಾರ್ಯಾಚರಣಾ ವಿಧಾನ (SOP) ಅಥವಾ ಸುತ್ತೋಲೆಯನ್ನು ಹೊರಡಿಸಿ, ಧಾರ್ಮಿಕ ಉದ್ದೇಶಗಳಿಗಾಗಿ ಸಾರ್ವಜನಿಕ ಸ್ಥಳಗಳನ್ನು ಅನಧಿಕೃತವಾಗಿ ಬಳಸುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಕಾನೂನಿನ ಮುಂದೆ ಸಮಾನತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಈ ಕ್ರಮಗಳು ಅವಶ್ಯಕ ಎಂದು ಹೇಳಿರುವ ಯತ್ನಾಳ್, ಸಂಚಾರ ಅಡಚಣೆಯನ್ನು ತಪ್ಪಿಸಲು ಮತ್ತು ಶಿಸ್ತು ಕಾಪಾಡಲು ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ತಕ್ಷಣವೇ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಯತ್ನಾಳ್ ಅವರ ಈ ಪತ್ರವು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕುವ ಸಾಧ್ಯತೆಯಿದೆ.