ಎತ್ತಂಗಡಿಗೆ ಶಿಫಾರಸು | ಶರಾವತಿ ಸಂತ್ರಸ್ತರ ಪಾಲಿಗೆ ಮರಣಶಾಸನವಾಯ್ತೆ ಶಾಸಕರ ಪತ್ರ?

ಇಪ್ಪತ್ತೊಂದನೇ ಶತಮಾನದ ಬುಲೆಟ್ ರೈಲು, ಸಾಗರಮಾಲಾ ಹೆದ್ದಾರಿಗಳ ಮಾತನಾಡುತ್ತಿರುವ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವ ಭಾರತದ ಒಳಗೇ ಇರುವ ಈ ಕುಗ್ರಾಮಗಳ ದುರವಸ್ಥೆಗೆ ಮಿಡಿಯಬೇಕಾದ, ಮರುಗಬೇಕಾದ ಜನಪ್ರತಿನಿಧಿಗಳೇ ಶರಾವತಿ ಯೋಜನಾ ಸಂತ್ರಸ್ತರ ಎತ್ತಂಗಡಿಗೆ ಶಿಫಾರಸು ಮಾಡಿ ಸರ್ಕಾರಕ್ಕೆ ಪತ್ರ ಬರೆದಿರುವುದು ಭಾರೀ ಜನರ ಆತಂಕಕ್ಕೆ ಕಾರಣವಾಗಿದೆ.

Update: 2024-04-24 13:08 GMT

ಶರಾವತಿ ಜಲವಿದ್ಯುತ್ ಯೋಜನೆಯ ಲಿಂಗನಮಕ್ಕಿ ಜಲಾಶಯದ ಮುಳುಗಡೆಯಲ್ಲಿ ತಮ್ಮ ಆಸ್ತಿಮನೆ ಕಳೆದುಕೊಂಡು ಬಿಡಿಗಾಸಿನ ಪರಿಹಾರವೂ ಇಲ್ಲದೆ ಮಲೆನಾಡಿನ ಬೆಟ್ಟಗುಡ್ಡಗಳ ನಡುವೆ ಬದುಕು ಕಟ್ಟಿಕೊಂಡಿರುವ ಹತ್ತಾರು ಹಳ್ಳಿಗಳ ಜನರಿಗೆ ರಸ್ತೆ, ವಿದ್ಯುತ್, ಶಾಲೆ, ಕುಡಿಯುವ ನೀರು ಎಂಬುದು ಈಗಲೂ ಗಮನ ಕುಸುಮವಾಗೇ ಇದೆ. ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೇ ಮುಳುಗಿಸಿಕೊಂಡು ನಾಗರಿಕ ಸೌಲಭ್ಯವಂಚಿತ ಕತ್ತಲ ಬದುಕಿಗೆ ಜಾರಿದ ಈ ಜನಗಳ ಪಾಲಿಗೆ ಕಳೆದ 70 ವರ್ಷಗಳಿಂದ ಯಾವ ಸರ್ಕಾರವೂ ಕನಿಷ್ಟ ಮೂಲಸೌಕರ್ಯ ಕಲ್ಪಿಸಿಲ್ಲ.

ಇಪ್ಪತ್ತೊಂದನೇ ಶತಮಾನದ ಬುಲೆಟ್ ರೈಲು, ಸಾಗರಮಾಲಾ ಹೆದ್ದಾರಿಗಳ ಮಾತನಾಡುತ್ತಿರುವ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವ ಭಾರತದ ಒಳಗೇ ಇರುವ ಈ ಕುಗ್ರಾಮಗಳ ದುರವಸ್ಥೆಗೆ ಮಿಡಿಯಬೇಕಾದ, ಮರುಗಬೇಕಾದ ಜನಪ್ರತಿನಿಧಿಗಳೇ ಈ ಸಂತ್ರಸ್ತರ ಎತ್ತಂಗಡಿಗೆ ಶಿಫಾರಸು ಮಾಡಿ ಸರ್ಕಾರಕ್ಕೆ ಪತ್ರ ಬರೆದಿರುವುದು ಭಾರೀ ಜನರ ಆತಂಕಕ್ಕೆ ಕಾರಣವಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶರಾವತಿ ಸಿಂಗಳೀಕ ಅಭಯಾರಣ್ಯ ವ್ಯಾಪ್ತಿಯಲ್ಲಿ ಇರುವ ಈ ಹಳ್ಳಿಗಳಿಗೆ ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡು ರಸ್ತೆ, ವಿದ್ಯುತ್ನಂತಹ ಕನಿಷ್ಟ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನಗಳು ಕಳೆದ ಐದಾರು ವರ್ಷಗಳಿಂದ ಚಾಲನೆಯಲ್ಲಿವೆ. ಮುಖ್ಯವಾಗಿ ಮಾಧ್ಯಮಗಳು ಈ ಕುಗ್ರಾಮಗಳ ಜನರ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲಿದ ಬಳಿಕ ವಿವಿಧ ಜನಪರ ಹೋರಾಟಗಾರರು, ನಾಗರಿಕ ಸಂಘಟನೆಗಳು ನಿರಂತರ ಹೋರಾಟ ನಡೆಸಿದ್ದವು. ಆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಡಳಿತ, ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಮತ್ತು ಮೆಸ್ಕಾಂ ಗಳು ಭೂಗತ ಮಾರ್ಗದ ಮೂಲಕ ವಿದ್ಯುತ್ ಮತ್ತು ಕಚ್ಛಾ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಿ, ಕಡತ ಅನುಮೋದನೆಯ ಹಂತದಲ್ಲಿತ್ತು.

ಆದರೆ, ಇದೀಗ ಸಾಗರ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ಆ ಹಳ್ಳಿಗಳನ್ನು ಅಭಯಾರಣ್ಯದ ವ್ಯಾಪ್ತಿಯಿಂದ ಎತ್ತಂಗಡಿ ಮಾಡಬೇಕು ಎಂದು ರಾಜ್ಯ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದು, ಆ ಪತ್ರದ ಮುಂದುವರಿದ ಭಾಗವಾಗಿ ಸಚಿವರು ಇಲಾಖೆಯ ಉನ್ನತಾಧಿಕಾರಿಗಳಿಗೆ ಎಲ್ಲಾ ಅಭಯಾರಣ್ಯ ವ್ಯಾಪ್ತಿಯ ಎಲ್ಲಾ ಹಳ್ಳಿಗಳನ್ನು ಎತ್ತಂಗಡಿ ಮಾಡಲು ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಶರಾವತಿ ಅಭಯಾರಣ್ಯ ವ್ಯಾಪ್ತಿಯ ಹಳ್ಳಿಗಳನ್ನು ಎತ್ತಂಗಡಿ ಮಾಡಲು ಎಲ್ಲಾ ರೀತಿಯ ಮಾಹಿತಿ ಕಲೆಹಾಕಿ, ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಪ್ಯಾಕೇಜ್ ಮಾಹಿತಿ ಸಹಿತ ಒಂದು ತಿಂಗಳಲ್ಲಿ ವರದಿ ನೀಡುವಂತೆ 02.04.2024 ರಂದು ಶಿವಮೊಗ್ಗ ವನ್ಯಜೀವಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ನೀಡಿದ್ದಾರೆ.

ಶಾಸಕರ ಪತ್ರ (ಪ್ರತಿಯನ್ನು ವರದಿಯೊಂದಿಗೆ ಲಗತ್ತಿಸಿದೆ) ಮತ್ತು ಅದರ ಕ್ರಮವಾಗಿ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಬಂದಿರುವ ಆದೇಶಗಳು ಇದೀಗ ಶರಾವತಿ ಕಣಿವೆಯಲ್ಲಿ ಜನರ ಆತಂಕಕ್ಕೆ ಕಾರಣವಾಗಿವೆ. ಅದರಲ್ಲೂ ಲೋಕಸಭಾ ಚುನಾವಣಾ ಕಣದಲ್ಲಿ ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಶರಾವತಿ ಯೋಜನೆಯ ಸಂತ್ರಸ್ತರ ಪರವಾಗಿ ಇದ್ದೇವೆ. ಅವರಿಗೆ ಭೂಮಿ ಮತ್ತು ಬದುಕು ಕಟ್ಟಿಕೊಡುವುದು ತಮ್ಮ ಆದ್ಯತೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹಾಗೂ ಅವರ ಸಹೋದರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಪ್ರತಿ ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿರುವ ಹೊತ್ತಿಗೇ, ಅವರದೇ ಪಕ್ಷದ ಶಾಸಕ ಹಾಗೂ ಪ್ರಚಾರ ಸಭೆಗಳಲ್ಲಿ ಮುಂಚೂಣಿಯಲ್ಲಿರುವ ನಾಯಕ ಬೇಳೂರು ಅವರು ಬರೆದಿರುವ ಪತ್ರ ಭಾರೀ ಇರಿಸುಮುರಿಸು ತಂದಿದೆ.

ಶಾಸಕ ಬೇಳೂರು ಪತ್ರದಲ್ಲಿ ಏನಿದೆ?


ದಿನಾಂಕ: 31.01.2024ರಂದು ರಾಜ್ಯ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರಾದ ಈಶ್ವರ ಬಿ ಖಂಡ್ರೆ ಅವರಿಗೆ ಬರೆದಿರುವ ಪತ್ರದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು, “ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯದ ಅತಿಸೂಕ್ಷ್ಮ ಪ್ರದೇಶದಲ್ಲಿ ಕಡುಕಷ್ಟದಲ್ಲಿ ವಾಸಿಸುತ್ತಿರುವ ಕುಟುಂಬಗಳು ಸ್ವ ಇಚ್ಛೆಯಿಂದ ಅಭಯಾರಣ್ಯದಿಂದ ಪುನರ್ವಸತಿಗೊಳ್ಳಲು ಬಯಸಿದ್ದು ಈ ಕುರಿತು ಸೂಕ್ತ ಹಾಗೂ ತುರ್ತು ಕ್ರಮಕೈಗೊಳ್ಳಲು” ಕೋರಿದ್ದಾರೆ.

“ಸಾಗರ ತಾಲೂಕಿನ ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯದ ಅತಿಸೂಕ್ಷ್ಮ ಪ್ರದೇಶವಾದ ಉರುಳುಗಲ್ಲು, ಕಾನೂರು ಮತ್ತು ಮೇಘಾನೆ ಹಳ್ಳಿಗಳಲ್ಲಿ ಕುಟುಂಬಗಳು ಕಡುಕಷ್ಟದಿಂದ ಮತ್ತು ಎಲ್ಲಾ ರೀತಿಯ ನಾಗರಿಕ ಸೌಲಭ್ಯದಿಂದ ವಂಚಿತರಾಗಿ ದೀನ ಬದುಕನ್ನು ನಡೆಸುತ್ತಿರುವುದು ದುಃಖದ ವಿಷಯ” ಎಂದು ಹೇಳಿರುವ ಶಾಸಕರು, ಅಲ್ಲಿನ ಜನರು ರಸ್ತೆ, ವಿದ್ಯುತ್, ಶಾಲೆ ಮುಂತಾದ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಅಲ್ಲಿನ ಜನ ಎದುರಿಸುತ್ತಿರುವ ಸಮಸ್ಯೆಯನ್ನು ಒಂದೂವರೆ ಪುಟದಷ್ಟು ವಿವರಿಸಿದ್ದಾರೆ.

“ಅರಣ್ಯದ ತೀರಾ ಒಳಭಾಗದ ವಿವಿಧ ದಿಕ್ಕುಗಳಲ್ಲಿ ಹುದುಗಿರುವ ಈ ಕುಗ್ರಾಮಗಳ ಕುಟುಂಬಗಳಿಗೆ ನಾಗರಿಕ ಸೌಲಭ್ಯ ಒದಗಿಸುವುದು ಸರ್ಕಾರಕ್ಕೆ ಆರ್ಥಿಕವಾಗಿ ದೊಡ್ಡ ಹೊರೆಯಾಗುವುದಲ್ಲದೆ, ಆ ಪ್ರದೇಶವು ಅಭಯಾರಣ್ಯದ ಸೂಕ್ಷ್ಮ ಪ್ರದೇಶದಲ್ಲಿರುವುದರಿಂದ ವಿವಿಧ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆದು ಸೌಲಭ್ಯ ಒದಗಿಸುವುದು ಸಾಧ್ಯವಾಗುವುದಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಆ ಕುಟುಂಬಗಳ ಯಜಮಾನರನ್ನು ಹಾಗೂ ಸದಸ್ಯರನ್ನು ವಿಚಾರಿಸಿದಾಗ ತಮಗೆ ಸೂಕ್ತವಾದ ಪರಿಹಾರ ಸಿಕ್ಕರೆ ತಾವುಗಳು ಸ್ವ ಇಚ್ಛೆಯಿಂದ ಹಾಗೂ ಸಂತೋಷವಾಗಿ ಅಭಯಾರಣ್ಯದ ವ್ಯಾಪ್ತಿಯಿಂದ ಹೊರಗೆ ಹೋಗಲು ಇಂಗಿತ ವ್ಯಕ್ತಪಡಿಸಿ ಒಪ್ಪಿಗೆ ಪತ್ರವನ್ನು ನೀಡಿರುತ್ತಾರೆ. ಈ ಕ್ರಮವು ಆ ಕುಟುಂಬಗಳಿಗೂ, ವನ್ಯಜೀವಿಗಳಿಗೂ ವಿನ್- ವಿನ್ ಪರಿಹಾರವಾಗಿದೆ. ಅಲ್ಲದೆ, ಪುನರ್ವಸತಿ ಯೋಜನೆಯ ವೆಚ್ಚವು ಅವರಿಗೆ ನಾಗರಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮಾಡುವ ವೆಚ್ಚಕ್ಕಿಂತ ಬಹಳಷ್ಟು ಕಡಿಮೆಯಾಗಿರುತ್ತದೆ ಎಂಬುದು ಗಮನಾರ್ಹ” ಎಂದೂ ಶಾಸಕರು ಸಚಿವರನ್ನು ಮನವರಿಕೆ ಮಾಡಿದ್ದಾರೆ.

ಆ ಹಿನ್ನೆಲೆಯಲ್ಲಿ, “ಪರಿಹಾರಾತ್ಮಕ ಅರಣ್ಯೀಕರಣ ನಿಧಿ(ಕ್ಯಾಂಪಾ) ಅಡಿಯಲ್ಲಿ ಕರ್ನಾಟಕದ ಪಾಲಿನ ಸಾವಿರ ಕೋಟಿಗೂ ಅಧಿಕ ಹಣ ಮತ್ತು ಇತರೆ ಮೂಲಗಳಿಂದ ಲಭ್ಯವಿರುವ ಹಣ ಬಳಸಿ, ಮೊದಲ ಹಂತದಲ್ಲಿ ಹೊರಬರಲು ಸಿದ್ಧವಿರುವ ಮತ್ತು ಈಗಾಗಲೇ ಮೂರು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆಗೆ ಒಪ್ಪಿಗೆ ಪತ್ರ ನೀಡಿರುವ ಕಾನೂರು ಕೋಟೆ ಸಮೀಪದ ಮೇಲಿನೂರು ಹಳ್ಳಿಯ ನಾಲ್ಕು ಕುಟುಂಬಗಳನ್ನು ಮತ್ತು ಎರಡನೇ ಹಂತದಲ್ಲಿ ಉರುಳುಗಲ್ಲು, ಸಾಲ್ಕೋಡ್ಲು, ಚೀಕನಹಳ್ಳಿ, ಹೆಬ್ಬನಕೇರಿ, ಮುಂಡವಾಳ, ಬೆಳ್ಳೂರು ಮತ್ತು ಮೇಘಾನೆ ಗ್ರಾಮಗಳನ್ನು ಪುನವರ್ಸತಿ ಕೈಗೊಳ್ಳಬಹುದು” ಎಂದು ಶಾಸಕರ ಬೇಳೂರು ಗೋಪಾಲಕೃಷ್ಣ ಅವರು ಪತ್ರದಲ್ಲಿ ಕೋರಿದ್ದಾರೆ.



 ಶರಾವತಿ ಸಂತ್ರಸ್ತರ ಆತಂಕವೇನು?

ಶಾಸಕರ ಈ ಪತ್ರ ಮತ್ತು ಅದರ ಹಿನ್ನೆಲೆಯಲ್ಲಿ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರುವುದು ಶರಾವತಿ ಕಣಿವೆಯ ಯೋಜನಾ ಸಂತ್ರಸ್ತರು ಮತ್ತು ಯೋಜನಾಪೂರ್ವದಿಂದಲೂ, ಅಭಯಾರಣ್ಯ ಘೋಷಣೆಗೆ ದಶಕಗಳ ಹಿಂದಿನಿಂದಲೂ ಕಾಡಿನ ನಡುವೆ ವಾಸವಾಗಿರುವ ಕುಣಬಿ, ಗೊಂಡ, ಹಸಲರು, ಜೈನ, ದೀವರು ಮುಂತಾದ ಬುಡಕಟ್ಟು ಮತ್ತು ಇತರೆ ಅರಣ್ಯವಾಸಿ ಸಮುದಾಯಗಳಲ್ಲಿ ನಿಂತ ನೆಲವೇ ಕುಸಿಯುತ್ತಿರುವ ಆತಂಕ ಹುಟ್ಟಿಸಿದೆ.

“ತಮ್ಮ ಮೂಲಭೂತ ಸೌಕರ್ಯ ಪಡೆಯುವ ಮೂಲಭೂತ ಹಕ್ಕುಗಳಿಗಾಗಿ ದಶಕಗಳಿಂದ ನಡೆಸಿಕೊಂಡು ಬಂದಿರುವ ತಮ್ಮ ಹೋರಾಟ ಮತ್ತು ಅದೇ ಹೊತ್ತಿಗೆ ವನ್ಯಜೀವಿಗಳು ಮತ್ತು ಅರಣ್ಯಕ್ಕೆ ಧಕ್ಕೆಯಾಗದಂತೆ ಕಟ್ಟಿಕೊಂಡಿರುವ ತಮ್ಮ ಬದುಕಿಗೇ ಶಾಸಕರ ಈ ಪತ್ರ ಕೊಳ್ಳಿ ಇಟ್ಟಿದೆ. ಶಾಸಕರು ನಮ್ಮ ಹಳ್ಳಿಗಳಿಗೆ ಭೇಟಿಯನ್ನೇ ನೀಡದೆ, ನಮ್ಮ ಸಮುದಾಯಗಳ ಯಾರೊಂದಿಗೂ ಈ ಕುರಿತು ಯಾವ ಚರ್ಚೆಯನ್ನೂ ಮಾಡದೆ, ಯಾವುದೋ ಲಾಬಿಯ ಮರ್ಜಿಗೆ ಬಿದ್ದು ಹೀಗೆ ಏಕಾಏಕಿ ಪತ್ರ ಬರೆದು ನಮ್ಮನ್ನು ಬೀದಿಪಾಲು ಮಾಡಲು ಹೊರಟಿರುವುದು ಘೋರ ಅನ್ಯಾಯ” ಎಂದು ಮೇಘಾನೆ ಯುವ ಮುಖಂಡ ಓಮೇಂದ್ರ ಮರಾಠಿ ಆತಂಕ ವ್ಯಕ್ತಪಡಿಸುತ್ತಾರೆ.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, “ನಮ್ಮ ಊರು ಶರಾವತಿ ಯೋಜನೆ ಪೂರ್ವದಿಂದಲೂ ಇರುವುದು. ನಮ್ಮ ಊರಿನಲ್ಲಿ ಶಾಲೆ ಇದೆ, ವಿದ್ಯುತ್ ಇದೆ. ನಮಗೆ ಬೇಕಿರುವುದು ರಸ್ತೆ ಮಾತ್ರ. ಮಂಜೂರು ಆಗಿ ಹತ್ತು ವರ್ಷವಾದರೂ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ರಸ್ತೆ ಕಾಮಗಾರಿ ನಡೆದಿಲ್ಲ. ರಸ್ತೆ ಕಾಮಗಾರಿ ಮಾಡಿಸಬೇಕಿದ್ದ ಶಾಸಕರೇ ಈಗ ಏಕಾಏಕಿ 70 ಮನೆಗಳ ನಮ್ಮ ಊರನ್ನೇ ಎತ್ತಂಗಡಿ ಮಾಡಿಸಲು ಮುಂದಾಗಿರುವುದು ಕೇಳಿ ಆಘಾತವಾಗಿದೆ. ನಮ್ಮ ಊರಿಗೇ ಬರದೆ ನಾವು ಒಪ್ಪಿಗೆ ಕೊಟ್ಟಿದ್ದೇವೆ ಎಂದು ಹೇಳಿ ಪತ್ರ ಬರೆದಿರುವುದು ಕೇಳಿ ಆಕಾಶವೇ ಕಳಚಿಬಿದ್ದಂತಾಗಿದೆ” ಎಂದು ಅಳಲು ತೋಡಿಕೊಂಡರು.

ಉರುಳುಗಲ್ಲು ಗ್ರಾಮದ ಮುಖಂಡ ನಾಗರಾಜ್ ʼದ ಫೆಡರಲ್ ಕರ್ನಾಟಕʼ ಜೊತೆ ಮಾತನಾಡಿ, “60 ವರ್ಷದ ಹಿಂದೆ ನಾವೆಲ್ಲಾ ಶರಾವತಿ ಯೋಜನೆಯಲ್ಲಿ ಮನೆಮಠ ಕಳೆದುಕೊಂಡು ಇಲ್ಲಿ ಬಂದು ನೆಲೆ ಕಂಡುಕೊಂಡಿದ್ದೇವೆ. ಸರ್ಕಾರವೇ ನಮಗೆ ಜಮೀನು ಕೊಟ್ಟಿದೆ. ಅಭಯಾರಣ್ಯ ಘೋಷಣೆಗೆ ಇಪ್ಪತ್ತು ವರ್ಷ ಹಿಂದಿನಿಂದಲೇ ಇರುವ ನಮಗೆ ಇವತ್ತಿಗೂ ರಸ್ತೆ, ಕರೆಂಟು, ಶಾಲೆಗಳೇ ಇಲ್ಲ. ಕಳೆದ ಹತ್ತು ವರ್ಷದಿಂದ ನಾವು ಅದಕ್ಕಾಗಿ ಪಾದಯಾತ್ರೆ, ಪ್ರತಿಭಟನೆ, ಧರಣಿ, ಕಚೇರಿ ಅಲೆದಾಟ ಎಲ್ಲವನ್ನೂ ಮಾಡಿದ್ದೇವೆ. ಭೂಗತ ವಿದ್ಯುತ್ ಸಂಪರ್ಕದ ಕಾಮಗಾರಿ ಸಮೀಕ್ಷೆ ನಡೆದು, ಡಿಪಿಆರ್ ಆಗಿದೆ. ಈ ಹಂತದಲ್ಲಿ ನಮ್ಮ ಪರ ದನಿ ಎತ್ತಬೇಕಾದ ನಮ್ಮ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ಅಧಿಕಾರ ಸಿಕ್ಕ ಕೂಡಲೇ ನಮ್ಮಲ್ಲಿ ಯಾರನ್ನೂ ಕೇಳದೆ ಹೀಗೆ ಏಕಾಏಕಿ ಪತ್ರ ಬರೆದಿರುವುದು ನೋಡಿ ಎದೆ ಧಸಕ್ಕೆಂದಿದೆ. ಮುಂದೆ ಏನು ಮಾಡುವುದು ದಿಕ್ಕು ತೋಚದಂತಾಗಿದೆ. ಶಾಸಕರ ಈ ಪತ್ರದ ಹಿಂದೆ ಯಾರಿದ್ದಾರೆ? ಯಾವ ಹುನ್ನಾರವಿದೆ ಎಂಬುದು ನಮಗೆ ಪ್ರಶ್ನೆಯಾಗಿದೆ” ಎಂದು ಹೇಳಿದರು.

ಗ್ರಾಮಕ್ಕೆ ಭೇಟಿ ನೀಡದೆ, ಗ್ರಾಮಸ್ಥರ ಅಭಿಪ್ರಾಯವನ್ನೂ ಕೇಳದೆ ಕ್ಷೇತ್ರದ ಜನಪ್ರತಿನಿಧಿಯಾದವರು ಏಕಾಏಕಿ ಪತ್ರ ಬರೆದು, ಗ್ರಾಮಗಳ ಎತ್ತಂಗಡಿಗೆ ಶಿಫಾರಸು ಮಾಡಿರುವುದು ಶರಾವತಿ ಕಣಿವೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಶಾಸಕರ ಈ ನಡೆ ಗ್ರಾಮಸ್ಥರಲ್ಲಿ ಅನುಮಾನ ಹುಟ್ಟುಹಾಕಿದೆ.

Tags:    

Similar News